ಬೇಲೂರು ತಾಲೂಕಿನ ಚಂದನಹಳ್ಳಿ ಗ್ರಾಮದ ಯೋಗೇಶ್ ಅವರ ಜಮೀನಿನಲ್ಲಿ ಕಾಡಾನೆಗಳ ದಾಳಿಗೆ ತೆಂಗಿನ ಮರಗಳು ನಾಶವಾಗಿರುವುದು. 
ಜಿಲ್ಲೆ

ಕಾಡಾನೆಗಳ ಹಾವಳಿಗೆ ಬೆಳೆ ನಾಶ

ಬೇಲೂರು: ಕಾಡಾನೆಗಳ ದಾಳಿಯಿಂದಾಗಿ ತಾಲೂಕಿನ ಚಂದನಹಳ್ಳಿ ಗ್ರಾಮದಲ್ಲಿ ಶನಿವಾರ ಕಾಡಾನೆಗಳು ತೆಂಗು, ಜೋಳದ ಬೆಳೆ ನಾಶಪಡಿಸಿವೆ.

20ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಕಳೆದ ಮೂರು ದಿನಗಳಿಂದ ಗ್ರಾಮಕ್ಕೆ ರಾತ್ರಿ ಸಮಯದಲ್ಲಿ ಲಗ್ಗೆ ಇಟ್ಟು ಬೆಳೆಗಳನ್ನೆಲ್ಲ ತಿಂದು ನಾಶ ಪಡಿಸುತ್ತಿವೆ. ಇದರಿಂದ ರೈತರು ಕಷ್ಟಪಟ್ಟು ಬೆಳೆದ ಬೆಳೆ ಕತ್ತಲು ಕಳೆದು ಬೆಳಗಾಗುವಷ್ಟರಲ್ಲಿ ನಾಶವಾಗುತ್ತಿದೆ.

ಶನಿವಾರ ಗ್ರಾಮದ ಯೋಗೇಶ್ ಅವರ ಜಮೀನಿಗೆ ನುಗ್ಗಿರುವ ಕಾಡಾನೆಗಳು, 25ಕ್ಕೂ ಹೆಚ್ಚಿನ ತೆಂಗಿನ ಮರಗಳು, 1.5 ಎಕರೆ ಜೋಳದ ಬೆಳೆಯನ್ನು ತಿಂದು ನಾಶಪಡಿಸಿವೆ. ಜತೆಗೆ ಡಿ.ಎಸ್.ಗೌಡ ಅವರ ಜಮೀನಿಗೂ ದಾಳಿ ಇಟ್ಟಿರುವ ಕಾಡಾನೆಗಳ ಹಿಂಡು, ನಾಲ್ಕು ಎಕರೆ ಪ್ರದೇಶಲ್ಲಿ ಬೆಳೆದಿದ್ದ ಜೋಳದ ಬೆಳೆ ನಾಶಪಡಿವೆ. ಆದರೂ ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಡಾನೆ ಹಿಂಡು ಈ ರೀತಿ ಬೆಳೆ ಹಾನಿ ಮಾಡುತ್ತಿದ್ದರೆ, ನಾವು ಹೇಗೆ ಬದುಕಬೇಕು. ಅರಣ್ಯ ಇಲಾಖೆ ಸಿಬ್ಬಂದಿ ಬಂದು ಅರ್ಧಗಂಟೆ ಇದ್ದು ಹೋಗುತ್ತಾರೆ. ನಾವುಗಳು ಆನೆಗಳನ್ನು ಹೇಗೆ ಓಡಿಸೋದು? ಮುಂದಿನ ದಿನಗಳಲ್ಲಿ ಮತ್ತಷ್ಟು ಬೆಳೆ ನಷ್ಟವಾಗುವ ಮುನ್ನ ಅಧಿಕಾರಗಳು ಕಾಡಾನೆಗಳ ಹಾವಳಿ ತಪ್ಪಿಸಲು ಕ್ರಮಕ್ಕೆ ಮುಂದಾಗಬೇಕಿದೆ ಎಂದು ಚಂದನಹಳ್ಳಿ ಗ್ರಾಮದ ರೈತ ಯೋಗೇಶ್ ಒತ್ತಾಯಿಸಿದರು.

ರೈತರಾದ ಡಿ.ಎಸ್.ಗೌಡ, ಕಾಂತರಾಜು, ಸೋಮಶೇಖರ್ ನೀಲಕಂಠೇಗೌಡ, ಜಗದೀಶ್, ಮುದ್ದೋಜಿರಾವ್ ಸೇರಿದಂತೆ ಇತರರಿದ್ದರು.