ಜಿಲ್ಲೆ

ಆನೆ ಹಾವಳಿಗೆ ಬೆಳೆ ನಾಶ

ನಾಗೇಶ ಎಸ್

ಹಲಗೂರು: ಸಮೀಪದ ಬ್ಯಾಡರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಗಾಣಾಳು ಗ್ರಾಮದಲ್ಲಿ ಭಾನುವಾರ ತಡರಾತ್ರಿ ಮೂರು ಕಾಡಾನೆಗಳು ದಾಳಿಯಿಂದ ನಾಟಿ ಮಾಡಲಾಗಿದ್ದ ಭತ್ತದ ಗದ್ದೆ ನಾಶವಾಗಿದೆ.

ಗಾಣಾಳು ಗ್ರಾಮ ಪಂಚಾಯಿತಿ ಸದಸ್ಯ ರೈತ ಮಾದೇಶ್ ಮಾತನಾಡಿ, ನಮ್ಮ ಜಮೀನಿನಲ್ಲಿ ತಡರಾತ್ರಿ ಮರಿ ಜತೆಗೆ ಎರಡು ಕಾಡಾನೆಗಳು ಶಿಂಷಾ ಅರಣ್ಯ ಪ್ರದೇಶದಿಂದ ಬಂದಿದ್ದು, ನಾಟಿ ಮಾಡಲಾಗಿದ್ದ ಭತ್ತದ ಗದ್ದೆ ತುಳಿದು ಹಾಕಿದ್ದರಿಂದ ನಷ್ಟ ಉಂಟಾಗಿದೆ. ಇಲ್ಲಿನ ರೈತರು ಬೆಳೆದ ಬೆಳೆಗಳು ಕಾಡು ಪ್ರಾಣಿಗಳ ನಿರಂತರ ದಾಳಿಯಿಂದ ಬಹಳಷ್ಟು ನಷ್ಟ ಅನುಭವಿಸುತ್ತ ಬಂದಿದ್ದಾರೆ. ಅರಣ್ಯ ಇಲಾಖೆ ಕೊಡುವ ಪರಿಹಾರ ಯಾವುದಕ್ಕೂ ಸಾಲುವುದಿಲ್ಲ. ಅರಣ್ಯದಂಚಿನ ಪ್ರದೇಶಗಳಲ್ಲಿ ನಿರಂತರವಾಗಿ ದಾಳಿ ಇಡುತ್ತಿದ್ದು, ಅರಣ್ಯ ಇಲಾಖೆಯವರು ರೈಲ್ವೆ ಕಂಬಿ, ಸೋಲಾರ್ ತಂತಿ ಹಾಗೂ ಕಂದಕ ನಿರ್ಮಾಣ ಮಾಡುವ ಮೂಲಕ ಕಾಡು ಪ್ರಾಣಿಗಳ ಹಾವಳಿ ನಿಯಂತ್ರಣ ಮಾಡಬೇಕು. ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ರೈತರಿಗೆ ಆಗುತ್ತಿರುವ ಸಮಸ್ಯೆಗಳನ್ನು ಪರಿಶೀಲಿಸಬೇಕು. ರೈತರ ಸಮಸ್ಯೆಗಳನ್ನು ಆಲಿಸುವ ಮುಖಾಂತರ ಉಂಟಾಗಿರುವ ನಷ್ಟಕ್ಕೆ ಸೂಕ್ತವಾದ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.