ನರೇಗಲ್ಲ: ಮುಂಗಾರು ಹಂಗಾಮಿನಲ್ಲಿ ಬಿತ್ತನೆಯಾಗುವ ಹೆಸರು ಬೆಳೆಯಲ್ಲಿ ಹಳದಿ ರೋಗ, ನಂಜು ರೋಗ ಕಾಣಿಸಿಕೊಂಡ ಹಿನ್ನ್ನೆಲೆಯಲ್ಲಿ ಕೃಷಿ ಅಧಿಕಾರಿಗಳ ತಂಡ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ಕೈಗೊಂಡು ರೋಗ ಹತೋಟಿಗೆ ಹಲವು ಸಲಹೆ ನೀಡಿದ್ದಾರೆ.
ನರೇಗಲ್ಲನ ಜಮೀನೊಂದಕ್ಕೆ ಭೇಟಿ ನೀಡಿ ಪರಿಶೀಲನೆ ಕೈಗೊಂಡು ಮಾತನಾಡಿದ ಸಹಾಯಕ ನಿರ್ದೇಶಕ ರವೀಂದ್ರಗೌಡ ಪಾಟೀಲ, ಆರಂಭದಲ್ಲಿ ಎಲೆಗಳ ಮೇಲೆ ಹಳದಿ ಚುಕ್ಕೆಗಳು ಕಾಣಿಸಿಕೊಂಡು ಕ್ರಮೇಣವಾಗಿ ವಿಸ್ತಾರಗೊಳ್ಳುತ್ತವೆ. ಈ ರೋಗವು ಬಿಳಿ ನೊಣಗಳಿಂದ ಹರಡುತ್ತದೆ. ನಂಜು ರೋಗ ಕಾಣಿಸಿಕೊಂಡಲ್ಲಿ ಅಂತಹ ಗಿಡಗಳನ್ನು ಕಿತ್ತು ನಾಶಪಡಿಸಬೇಕು ಹಾಗೂ ಹಳದಿ ರೋಗ, ನಂಜು ರೋಗ ಹತೋಟಿ ಮಾಡಲು ಪ್ರತಿ ಲೀಟರ್ ನೀರಿಗೆ 0.3 ಗ್ರಾಂ ಫೈಯಾಮಿಥಾಕ್ಸಾಮ್ 25 ಡಬ್ಲ್ಯೂ.ಜಿ. ಅಥವಾ 0.3 ಎಂಎಲ್. ಇಮಿಡಾಕ್ಲೋಪಿಡ 17.8 ಎಸ್. ಎಲ್. ಅಥವಾ 0.3 ಗ್ರಾಂ. ಡಯಾಫೆಂತುರಾನ್ 50 ಡಬ್ಲೂಪಿರಂತೆ ದ್ರಾವಣ ಸಿದ್ಧಪಡಿಸಿ ಕೀಟನಾಶಕ ಸಿಂಪಡಿಸಬೇಕು, ಪ್ರತಿ ಎಕರೆಗೆ 5ರಂತೆ ಹಳದಿ ಅಂಟು ಬಲೆಗಳನ್ನು ಅಳವಡಿಸಬೇಕು.
ಹೆಸರು ಬೆಳೆಯ ಎಲೆಗಳು ಹಳದಿಯಾಗಿ ಗಿಡಗಳು ಒಣಗಲು ಪ್ರಾರಂಭಿಸಿದರೆ ಇಳುವರಿಯಲ್ಲಿ ನಷ್ಟ ಉಂಟಾಗುತ್ತದೆ. ನಿರ್ವಹಣೆಗಾಗಿ ನಂಜು ರೋಗ ಬಾಧಿತ ಹೆಸರು ಗಿಡಗಳನ್ನು ಕಿತ್ತು ನಾಶಪಡಿಸಬೇಕು. ಅಲ್ಲದೆ, ಪ್ರತಿ ಲೀಟರ್ ನೀರಿಗೆ 3 ಗ್ರಾಂ 13:0:45 ಪೊಟ್ಯಾಷಿಯಂ ನೈಟ್ರೇಟ್ ರಸಗೊಬ್ಬರವನ್ನು ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಜೊತೆಗೆ 0.3 ಗ್ರಾಂ ಅಸಿಟಮಾಪ್ರಿಡ್ ಅಥವಾ 0.3 ಗ್ರಾಂ ಫಿಪ್ರೋನಿಲ್ ಕೀಟನಾಶಕವನ್ನು ಸಿಂಪಡಿಸಬೇಕು ಎಂದರು.