ಜಿಲ್ಲೆ

ಹಿಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಆರಂಭ

ವಿಜಯವಾಣಿ ಸುದ್ದಿಜಾಲ ಧಾರವಾಡ

ಪ್ರಸಕ್ತ ಸಾಲಿನ ಹಿಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕಾರ್ಯ ಆರಂಭವಾಗಿದೆ. ಜಿಲ್ಲೆ ರೈತರು ಬೆಳೆಗಳ ಸಮೀಕ್ಷೆಯನ್ನು ಹಿಂಗಾರು ರೈತರ ಬೆಳೆ ಸಮೀಕ್ಷೆ 2024-25 ಮೊಬೈಲ್​ ಆ್ಯಪ್​ (ತಂತ್ರಾಂಶ) ಮೂಲಕ ಮಾಡಬಹುದು. ಗೂಗಲ್​ ಪ್ಲೇ ಸ್ಟೋರ್​ನಿಂದ ಆ್ಯಪ್​ ಡೌನಲೋಡ್​ ಮಾಡಿಕೊಂಡು ಸಮೀಕ್ಷೆ ಕೈಗೊಳ್ಳಬಹುದಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ರೈತರ ಮೊಬೈಲ್​ ಅಥವಾ ಕಂದಾಯ ಇಲಾಖೆ ನೇಮಿಸಿದ ಖಾಸಗಿ ನಿವಾಸಿಗಳ ಮೋಬೈಲ್​ ಆ್ಯಪ್​ ಮೂಲಕ ಸಮೀಕ್ಷೆ ನಡೆಸಬಹುದು. ಬೆಳೆ ಸಮೀಕ್ಷೆ ದತ್ತಾಂಶವನ್ನು ಕೃಷಿ, ತೋಟಗಾರಿಕೆ, ರೇಷ್ಮೆ ಬೆಳೆಗಳ ವಿಸ್ತೀರ್ಣ ಲೆಕ್ಕ ಹಾಕುವ ಕಾರ್ಯದಲ್ಲಿ ಬೆಳೆ ವಿಮೆ ಯೋಜನೆ ಸರ್ವೇ ನಂಬರ್​ವಾರು ಬೆಳೆ ಪರಿಶೀಲನೆ, ಬೆಳೆ ಕಟಾವು ಪ್ರಯೋಗ ನಡೆಸಲು, ಕನಿಷ್ಠ ಬೆಂಬಲ ಬೆಲೆ ಯೋಜನೆ ಫಲಾನುಭವಿ ಗುರುತಿಸಲು, ಆರ್​ಟಿಸಿಯಲ್ಲಿ ಬೆಳೆ ವಿವರ ದಾಖಲಾತಿ, ಎನ್​ಡಿಆರ್​ಎಫ್ ಮತ್ತು ಎಸ್​ಡಿಆರ್​ಎಫ್ ಅಥವಾ ಪ್ರಕೃತಿ ವಿಕೋಪ ಸಂದರ್ಭದಲ್ಲಿ ಬೆಳೆ ಹಾನಿ ವರದಿ ಸಿದ್ಧಪಡಿಸಲು, ಬೆಳೆ ಸಾಲ ಪಡೆಯುವಾಗ ಮತ್ತು ಅರ್ಹರ ಪಟ್ಟಿ ತಯಾರಿಸುವಾಗ ಬೆಳೆ ಸಮೀಕ್ಷೆ ಆಧಾರವಾಗಿಟ್ಟಕೊಂಡು ಸಿದ್ದಪಡಿಸುವುದರಿಂದ ರೈತರು ತಪ್ಪದೇ ಬೆಳೆಗಳ ವಿವರವನ್ನು ಆ್ಯಪ್​ನಲ್ಲಿ ನಮೂದಿಸಬೇಕು.

ಹೆಚ್ಚಿನ ಮಾಹಿತಿಗೆ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳು, ಗ್ರಾಮ ಆಡಳಿತಾಧಿಕಾರಿಗಳು, ಸಹಾಯಕ ತೋಟಗಾರಿಕೆ ಅಧಿಕಾರಿಗಳು, ರೇಷ್ಮೆ ಇಲಾಖೆ ಅಧಿಕಾರಿಗಳನ್ನು ಅಥವಾ ಗ್ರಾಮಕ್ಕೆ ನೇಮಕಗೊಂಡ ಬೆಳೆ ಸಮೀಕ್ಷೆ ಕೈಗೊಳ್ಳುವ ಖಾಸಗಿ ನಿವಾಸಿಗಳನ್ನು ಸಂಪಕಿರ್ಸಬಹುದು ಎಂದು ಮಂಜುನಾಥ ಅಂತರವಳ್ಳಿ ತಿಳಿಸಿದ್ದಾರೆ.