ಜಿಲ್ಲೆ

ಜಿಲ್ಲೆಯಲ್ಲಿ ಬೆಳೆ ಸರ್ವೆ ನಿಖರತೆ ಗೊಂದಲ?

ಶಿವರಾಜ.ಎಂ

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಕೃಷಿ, ತೋಟಗಾರಿಕೆಗೆ ಸಂಬಂಧಿಸಿದಂತೆ ಬೆಳೆ ಸರ್ವೇಯಲ್ಲಿ ನಿಖರತೆ ಲೋಪ ಎದುರಾಗುತ್ತಿದೆ, ಬೆಳೆ ಸಮೀಕ್ಷೆ ಮಾಡುವ ಸ್ಥಳೀಯ ಸಿಬ್ಬಂದಿ ರೈತರ ಗಮನಕ್ಕೆ ತರದೇ ಸಮೀಕ್ಷೆ ಮಾಡುತ್ತಿದ್ದಾರೆ ಇದರಿಂದ ಬೆಳೆ ವಿಮೆ ಮಾಡಿಸಲೂ ತೊಂದರೆಯಾಗುತ್ತಿದೆ ಗ್ರಾಮಾಂತರ ಜಿಲ್ಲೆಯಹಲವು ಭಾಗಗಳ ರೈತರಿಂದ ಆಕ್ಷೇಪಣೆ ಕೇಳಿಬರುತ್ತಿದೆ.

ಹಲವು ಭಾಗಗಳಲ್ಲಿ ಸ್ಥಳೀಯ ಅಧಿಕಾರಿ ಹಾಗೂ ಸಿಬ್ಬಂದಿ ಬೆಳೆ ಸಮೀಕ್ಷೆ ನಡೆಸುತ್ತಿರುವ ಮಾಹಿತಿಯೇ ನೀಡುವುದಿಲ್ಲ, ಕಳೆದ ಹಿಂದಿನ ವರ್ಷದ ಬೆಳೆಯನ್ನೇ ನಮೂದು ಮಾಡಿರುತ್ತಾರೆ, ರೈತರಿಗೆ ಈ ಬಗ್ಗೆ ಹೆಚ್ಚು ತರಬೇತಿ ಇಲ್ಲವಾದ ಕಾರಣ ತರಬೇತಿ ಪಡೆದ ಸಿಬ್ಬಂದಿ ರೈತರಿಗೆ ತಿಳಿಸಿಕೊಡಬೇಕು ಇಲ್ಲವೆ ರೈತರಿಗೆ ಮಾಹಿತಿ ನೀಡಿ ಬೆಳೆ ನಮೂದಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ. ಬೆಳೆ ಸಮೀಕ್ಷೆ ನಿಖರವಾಗಿಲ್ಲದಿದ್ದರೆ ಸರ್ಕಾರದ ಸವಲತ್ತುಗಳಿಗೆ ಕುತ್ತು ಬರುತ್ತದೆ, ಮುಖ್ಯವಾಗಿ ವಿಮೆ ವ್ಯಾಪ್ತಿಗೆ ಒಳಪಡಲು ತೊಡಕಾಗುತ್ತದೆ ಎಂಬುದು ರೈತಾಪಿ ಜನರ ಆತಂಕವಾಗಿದೆ.

ಮೊಬೈಲ್ ಆ್ಯಪ್ ನಾಮಕೇವಾಸ್ತೆ: ಜಿಲ್ಲೆಯ ಪ್ರತಿ ಗ್ರಾಮದ ರೈತರು ತಮ್ಮ ಜಮೀನುಗಳಲ್ಲಿ ಮೊಬೈಲ್ ಅಪ್ಲಿಕೇಷನ್ ಮೂಲಕ ಬೆಳೆ ಸಮೀಕ್ಷೆ ಮಾಡಲು ಅವಕಾಶ ಮಾಡಲಾಗಿದೆ, ಬೆಳೆ ಪೋಟೋ, ರೈತರ ಪೋಟೋ ಹಾಗೂ ಎಷ್ಟು ಎಕರೆಯಲ್ಲಿ ಯಾವ ಬೆಳೆ ಬೆಳೆಯಲಾಗಿದೆ ಸೇರಿ ಹಲವು ಮಾಹಿತಿಗಳನ್ನು ನಮೂದು ಮಾಡಬಹುದಾಗಿದೆ, ರೈತರೇ ಸ್ವತಃ ತಮ್ಮ ಮೊಬೈಲ್‌ಗಳ ಮೂಲಕ ನಮೂದು ಮಾಡಬಹುದು ಆದರೆ ಈ ಅಪ್ಲಿಕೇಷನ್‌ನಲ್ಲಿ ಬೆಳೆ ನಮೂದು ಮಾಡಲು ಹಲವು ಬಾರಿ ತಾಂತ್ರಿಕ ತೊಂದರೆ ಎದುರಾಗುತ್ತದೆ, ಜಮೀನುಗಳಲ್ಲಿ ನೆಟ್‌ವರ್ಕ್ ಸಿಗುವುದಿಲ್ಲ ಎಂಬ ಆರೋಪವೂ ಇದೆ, ಈ ಬಗ್ಗೆ ಗ್ರಾಮದ ಗ್ರಾಮಲೆಕ್ಕಾಧಿಕಾರಿ, ಗ್ರಾಮ ಸೇವಕ ಅಥವಾ ನಿಗಧಿತ ವ್ಯಕ್ತಿಗಳಿಂದ ಬೆಳೆ ಸರ್ವೆ ಮಾಡಿಸಲೂ ರೈತರು ಪರದಾಡಬೇಕಾಗಿದೆ, ಅಧಿಕಾರಿಗಳು ಖಾಸಗಿಯಾಗಿ ಅಸಿಸ್ಟೆಂಟ್‌ಗಳನ್ನು ಇಟ್ಟುಕೊಂಡಿರುತ್ತಾರೆ ಅವರನ್ನು ವಿಚಾರಿಸಿದರೆ ಉಡಾೆ ಉತ್ತರ ಕೊಡುತ್ತಾರೆ, ಇದ್ದಕ್ಕಿದ್ದಂತೆ ಯಾವುದೋ ಬೆಳೆಯನ್ನು ನಮೂದು ಮಾಡಿರುತ್ತಾರೆ ಎಂದು ರೈತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ

.

ಕಾರ್ಯಾಗಾರದ ಸದ್ದಿಲ್ಲ: ರೈತರಿಗೆ ಕೃಷಿ ಕಾರ್ಯಾಗಾರವನ್ನು ಆಯೋಜನೆ ಮಾಡಿ, ರೋಗ ಬಾಧೆಯಿಂದ ಬೆಳೆಯ ರಕ್ಷಣೆ, ಗೊಬ್ಬರ ಪೂರೈಕೆ, ಇಳುವರಿ ಹೆಚ್ಚಿಸುವ ಬೆಳೆಗಳ ಕುರಿತು ಜಾಗೃತಿ ಮೂಡಿಸಿ. ಸಿರಿಧಾನ್ಯ, ಎಣ್ಣೆ ಕಾಳುಗಳ ಬೆಳೆಗೆ ಹೆಚ್ಚಿನ ಪ್ರೊತ್ಸಾಹ ಕಲ್ಪಿಸಿಕೊಡುವತ್ತ ಅಧಿಕಾರಿಗಳು ಗಮನ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ ಆದರೆ ಇಂಥ ಕಾರ್ಯಾಗಾರಗಳನ್ನು ನಡೆಸಲು ಸ್ಥಳೀಯ ಅಧಿಕಾರಿಗಳು ಉತ್ಸುಕತೆ ತೋರಿಸುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.

ಬೆಳೆ ಸರ್ವೇ ತಪ್ಪಾದರೆ ನಷ್ಟ: ಸಮೀಕ್ಷೆಯು ಸರಿಯಾದ ಕ್ರಮದಲ್ಲಿ ಆಗದಿದ್ದರೆ ಸರ್ಕಾರದ ವಿವಿಧ ಯೋಜನೆಗಳಲ್ಲಿ ಕನಿಷ್ಠ ಬೆಂಬಲ, ಸಬ್ಸಿಡಿ ಪಾವತಿ, ಬೆಳೆ ಪ್ರದೇಶದ ಅಂದಾಜು ಕೃಷಿ ಮತ್ತು ತೋಟಗಾರಿಕೆ ಯೋಜನೆಗಳ ಅಡಿಯಲ್ಲಿ ಫಲಾನುಭವಿಗಳ ಆಯ್ಕೆಗೆ ಹಾಗೂ ಸೌಲಭ್ಯ ಒದಗಿಸಲು ತೊಂದರೆ ಎದುರಾಗಲಿದೆ.

1,35,193 ಹೆಕ್ಟೇರ್ ಕೃಷಿ:

ಗ್ರಾಮಾಂತರ ಜಿಲ್ಲೆಯಲ್ಲಿ ಸುಮಾರು 1,35,193 ಹೆಕ್ಟೇರ್ ಪ್ರದೇಶ ಕೃಷಿಭೂಮಿ ಇದೆ, ಇದರಲ್ಲಿ ಸುಮಾರು 32 ಸಾವಿರ ಹೆಕ್ಟೇರ್‌ನಷ್ಟು ನೀರಾವರಿ ಭೂಮಿ ಇದೆ, ಪ್ರತಿ ವರ್ಷ ಸುಮಾರು 74 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ನಡೆಯುತ್ತದೆ ಸರ್ಕಾರ ಮುಖ್ಯವಾಗಿ ಮುಂಗಾರು ಬಿತ್ತನೆ ಸಮಯದಲ್ಲಿ ಬೆಳೆ ಸಮೀಕ್ಷೆಗೆ ಚಾಲನೆ ನೀಡಲಿದೆ.

ಸರ್ಕಾರದ ಸವಲತ್ತುಗಳನ್ನು ಪಡೆಯಲು, ವಿಮಾ ಯೋಜನೆ ಪಡೆಯಲು ಸೇರಿ ಇನ್ನಿತರ ಅನುಕೂಲದ ದೃಷ್ಟಿಯಿಂದ ಪ್ರತಿ ರೈತರು ಬೆಳೆ ಸರ್ವೇ ಮಾಡಿಸಬೇಕು, ಮೊಬೈಲ್ ಆ್ಯಪ್ ಮೂಲಕ ಸ್ವತಃ ರೈತರೇ ಬೆಳೆ ನಮೂದು ಮಾಡಿಸಬಹುದು, ಈ ಬಗ್ಗೆ ರೈತರಿಗೆ ಮಾಹಿತಿ ನೀಡಿ ಅವರ ನೆರವಿಗೆ ನಿಲ್ಲುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ, ಬೆಳೆ ಸರ್ವೆ ನಿಖರವಾಗಿರಬೇಕು ಇದರಲ್ಲಿ ಯಾವುದೇ ಲೋಪ ಕಾಣಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಬಿ.ಎ.ಬಸವರಾಜು, ಜಿಲ್ಲಾಧಿಕಾರಿ

-----

ಜಮೀನುಗಳಲ್ಲಿ ಬೆಳೆದಿರುವ ಬೆಳೆಯೇ ಬೇರೆ ಸರ್ವೆಯಲ್ಲಿ ನಮೂದು ಮಾಡಿರುವ ಬೆಳೆಯೇ ಬೇರೆ ಎನ್ನುವಂತಾಗಿರುತ್ತದೆ, ಕೆಲವು ವೇಳೆ ಬೆಳೆಯೇ ಇಲ್ಲ ಎಂಬಂತೆ ತೋರಿಸಲಾಗಿರುತ್ತದೆ, ಸ್ಥಳೀಯ ಸಿಬ್ಬಂದಿ ನಿರ್ಲಕ್ಷ್ಯದಿಂದ ಇಂಥ ಅಪಸವ್ಯಗಳು ನಡೆಯುತ್ತಿವೆ, ರೈತರಿಗೆ ಮಾಹಿತಿ ನಿಡದೆಯೇ ಬೆಳೆ ಸರ್ವೆ ಮಾಡುವ ಪ್ರಕರಣಗಳೂ ಇವೆ, ರೈತರಿಗೆ ಈ ಬಗ್ಗೆ ಹೆಚ್ಚು ತರಬೇತಿ ಇಲ್ಲದ ಕಾರಣ ತರಬೇತಿ ಪಡೆದ ಅಧಿಕಾರಿಗಳು ಸಮೀಕ್ಷೆ ಮಾಡುವುದು ಒಳಿತು.

ಪುಟ್ಟರಂಗಣ್ಣ, ಮಧುರೆ ಹೋಬಳಿ ದೊಡ್ಡಬಳ್ಳಾಪುರ