ಮಂಡ್ಯ: ರಾಜ್ಯಸರ್ಕಾರ ತಮಿಳುನಾಡಿಗೆ ನೀರು ಹರಿಸಿದ ಪರಿಣಾಮ ಕಾವೇರಿ ಕಣಿವೆ ಪ್ರದೇಶದಲ್ಲಿ ಅಂದಾಜು 3,600 ಕೋಟಿ ರೂ ಬೆಳೆ ನಷ್ಟವಾಗಿದೆ ಎಂದು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ ಹೇಳಿದರು.
ನಗರದ ಸರ್‌ಎಂವಿ ಪ್ರತಿಮೆ ಎದುರು ನಡೆಯುತ್ತಿರುವ ಅನಿರ್ದಿಷ್ಟಾವಧಿ ಕಾವೇರಿ ಹೋರಾಟದಲ್ಲಿ ಸೋಮವಾರ ಮಾತನಾಡಿದ ಅವರು, ಕಾವೇರಿ ಕೊಳ್ಳದ ವ್ಯಾಪ್ತಿಯಲ್ಲಿ 12 ಲಕ್ಷ ಎಕರೆ ನೀರಾವರಿ ಅಚ್ಚುಕಟ್ಟು ಇದೆ. ಇದರಲ್ಲಿ 6 ಲಕ್ಷ ಎಕರೆ ಪ್ರದೇಶದಲ್ಲಿ ನೀರಿನ ಕೊರತೆಯಿಂದಾಗಿ ಬೆಳೆ ಬೆಳೆಯದೇ ಪ್ರತಿ ಎಕರೆಗೆ 30 ಸಾವಿರ ರೂನಂತೆ ಎರಡು ಸಾಲಿನ ಬೆಳೆ ನಷ್ಟವಾಗಿದೆ. ಇನ್ನು ಕೆಆರ್‌ಎಸ್ ಅಚ್ಚುಕಟ್ಟು ಪ್ರದೇಶದಲ್ಲಿ 4 ಲಕ್ಷ ಎಕರೆಗೆ ನೀರಾವರಿ ಸೌಲಭ್ಯವಿದ್ದು, ಇದರಲ್ಲಿ 2 ಲಕ್ಷ ಎಕರೆ ಜಮೀನಿಗೆ ನೀರಿಲ್ಲದೆ ಬೆಳೆ ಬೆಳೆಯಲಿಲ್ಲ. ಪ್ರತಿ ಎಕರೆಗೆ 30 ಸಾವಿರ ರೂನಂತೆ 1,200 ಕೋಟಿ ರೂ ನಷ್ಟವಾಗಿದೆ. ಆದ್ದರಿಂದ ಈ ನಷ್ಟಕ್ಕೆ ಪರಿಹಾರದ ರೂಪದಲ್ಲಿ ರಾಜ್ಯಸರ್ಕಾರ ತುಂಬಿಕೊಡಬೇಕೆಂದು ಆಗ್ರಹಿಸಿದರು.
ಕಾವೇರಿ ನೀರು ನಿಯಂತ್ರಣ ಮಂಡಳಿ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶವನ್ನು ರಾಜ್ಯಸರ್ಕಾರ ಒಪ್ಪಿಕೊಳ್ಳುವುದರ ಜತೆಗೆ ತ.ನಾಡಿಗೆ ನೀರು ಹರಿಸಿದೆ. ಇದರಿಂದಾಗಿ 2023-24ನೇ ಸಾಲಿನ ಹಾಲಿ ಬೆಳೆ ಹಾಗೂ 2024-25ನೇ ಸಾಲಿನ ಬೆಳೆ ನಾಶವಾಗಿದೆ. ಹಿಂದೆ ಜಯಲಲಿತಾ ತ.ನಾಡು ಸಿಎಂ ಆಗಿದ್ದ ವೇಳೆ ಕರ್ನಾಟಕ ಸರ್ಕಾರ ಡ್ಯಾಂನಿಂದ ನೀರು ಹರಿಸಿರಲಿಲ್ಲ. ಅದರಿಂದಾಗಿ ತ.ನಾಡು ರೈತರಿಗೆ 10 ಸಾವಿರ ಕೋಟಿ ರೂ ಬೆಳೆ ನಷ್ಟವಾಗಿದೆ. ಇದಕ್ಕೆ ಕರ್ನಾಟಕ ಸರ್ಕಾರ ತುಂಬಿಕೊಡಬೇಕೆಂದು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೀಗ ಅದೇ ತ.ನಾಡು ಕರ್ನಾಟದಲ್ಲಿ ಮಳೆ ಇಲ್ಲದಿದ್ದರೂ ಕಾನೂನನ್ನು ದುರುಪಯೋಗಪಡಿಸಿಕೊಂಡು ಹಠಮಾರಿತನದಿಂದ ನೀರು ಬಿಡಿಸಿಕೊಂಡಿದೆ. ಈ ಮೂಲಕ ರಾಜ್ಯದ ರೈತರಿಗೆ ನಷ್ಟವನ್ನುಂಟು ಮಾಡಿದೆ. ಈ ಹಿನ್ನೆಲೆಯಲ್ಲಿ ತ.ನಾಡು ನಷ್ಟ ತುಂಬಿಕೊಡುವಂತೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಬೇಕೆಂದು ರಾಜ್ಯಸರ್ಕಾರವನ್ನು ಒತ್ತಾಯಿಸಿದರು.
77ನೇ ದಿನಕ್ಕೆ ಕಾಲಿಟ್ಟ ಧರಣಿ: ತಮಿಳುನಾಡಿಗೆ ನೀರು ಹರಿಸಬೇಕೆಂದು ಆದೇಶಿಸುತ್ತಿರುವ ಕಾವೇರಿ ನೀರು ನಿಯಂತ್ರಣ ಸಮಿತಿ ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ರಾಜ್ಯಸರ್ಕಾರದ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯಿಂದ ನಗರದಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸೋಮವಾರ 77ನೇ ದಿನ ಪೂರೈಸಿತು.
ಪ್ರತಿಭಟನೆಯಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ ಬೋರಯ್ಯ, ಇಂಡುವಾಳು ಚಂದ್ರಶೇಖರ್, ಮುದ್ದೇಗೌಡ, ಕೃಷ್ಣಪ್ರಕಾಶ್, ಕನ್ನಡ ಸೇನೆ ಮಂಜುನಾಥ್, ಎಂ.ಎಲ್.ತುಳಸೀಧರ್, ಮಲ್ಲೇಶ್ ಇತರರಿದ್ದರು.