ಮಡಿಕೇರಿ: ಜಿಲ್ಲೆಯಲ್ಲಿ ಮಳೆಯಿಂದ ಕೋಳರೋಗಕ್ಕೆ ತುತ್ತಾಗಿ ನೆಲ ಕಚ್ಚಿದ ಕಾಫಿ, ಮೆಣಸು, ಅಡಿಕೆ ಬೆಳೆಗಾರರ ರೈತರಿಗೆ ಸರ್ಕಾರದಿಂದ ಸುಮಾರು ರೂ ೧೧೩ ಕೋಟಿ ರೈತರ ಖಾತೆಗೆ ಜಮೆಯಾಗಿದೆ ಎಂದು ಜಿಲ್ಲಾ ಬಿಜೆಪಿ ರೈತ ಮೋರ್ಚದ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ ತಿಳಿಸಿದರು.
ಜಿಲ್ಲೆಯ ಸುಮಾರು ೩೯,೫೯೭ ರೈತರಿಗೆ ಸುಮಾರು ೧೧೩ ಕೋಟಿ ರೂಪಾಯಿ ಅವರ ಖಾತೆಗೆ ಜಮೆಯಾಗಿದೆ. ಶಾಸಕರ ಪ್ರಯತ್ನದಿಂದ ೧ ಹೆಕ್ಟರ್‌ಗೆ ೨೮ ಸಾವಿರ ಜಮೆಯಾಗಿದೆ. ಪರಿಹಾರ ಹಣ ರೈತರಿಗೆ ತಲುಪಿಸುವಲ್ಲಿ ಸಹಕರಿಸಿದ ಪ್ರತಿಯೊಬ್ಬರಿಗೂ ಸುದ್ದಿಗೋಷ್ಠಿಯಲ್ಲಿ ಧನ್ಯವಾದ ತಿಳಿಸಿದರು.
ಪರಿಹಾರ ಹಣ ಜಮೆಯಾದ ಹಿನ್ನೆಲೆ ರೈತರು ಖುಷಿಯಾಗಿದ್ದಾರೆ. ಜಿಲ್ಲೆಯಲ್ಲಿ ಶೇ೧೦ರಷ್ಟು ಬಾಕಿಯಿದ್ದು, ಮುಂದಿನ ದಿನಗಳಲ್ಲಿ ಜಮೆಯಾಗಲಿದೆ. ಸಂಪಾಜೆ ವ್ಯಾಪ್ತಿಯಲ್ಲಿ ಅಡಕೆ ಕೃಷಿಗೆ ರೋಗ ಬಾಧೆ ಹೆಚ್ಚಾದ ಪರಿಣಾಮ ಬದಲಿ ಕೃಷಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಸರ್ಕಾರದಿಂದ ತೆಂಗು, ಬಾಳೆ, ಕರಿಮೆಣಸು, ಕೊಕ್ಕೊ ಬೆಳೆ ಬೆಳೆಯಲು ೨೩ ಸಾವಿರ ಪ್ರೋತ್ಸಾಹಧನ ನೀಡಲಾಗುತ್ತಿದ್ದು, ರೈತರು ಸದೂಪಯೋಗಪಡಿಸಿಕೊಳ್ಳಬೇಕು. ಅಕ್ರಮ-ಸಕ್ರಮ ಅರ್ಜಿ ಸಲ್ಲಿಸಲು ಮೇ ವರೆಗೆ ಅವಕಾಶ ಕಲ್ಪಿಸಲಾಗಿದ್ದು, ಭೂಮಿ ದಾಖಲಾತಿ ಮಾಡಿಕೊಳ್ಳುವವರು ಅರ್ಜಿ ಸಲ್ಲಿಸಿ ಸರಿಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ರಾಜ್ಯ ರೈತ ಮೋರ್ಚಾದ ಕಾರ್ಯಕಾರಿ ಸಮಿತಿ ಸದಸ್ಯೆ ಯಮುನಾ ಚಂಗಪ್ಪ ಮಾತನಾಡಿ, ಕೆಲವು ತಾಂತ್ರಿಕ ಕಾರಣದಿಂದಾಗಿ ಯಾರಿಗೆ ಪರಿಹಾರ ದೊರೆತ್ತಿಲ್ಲ ಅವರು, ಅಧಿಕಾರಿಗಳಿಗೆ ಅಗತ್ಯ ದಾಖಲೆ ಒದಗಿಸಿ ಪರಿಹಾರ ಪಡೆದುಕೊಳ್ಳಬೇಕು. ಅಧಿಕಾರಿಗಳು ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರೈತ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ದಿನೇಶ್ ಕುಂದಳ್ಳಿ, ಕಬೀರ್ ದಾಸ್ ಉಪಸ್ಥಿತರಿದ್ದರು.