ಜಿಲ್ಲೆ

ಬೆಳೆ ನಷ್ಟ, ವಿಮೆ ಪರಿಹಾರ ನೀಡದಿದ್ದರೆ ಪ್ರತಿಭಟನೆ

ರಾಜಣ್ಣ

ಗುಂಡ್ಲುಪೇಟೆ: ರೈತರಿಗೆ ಬೆಳೆ ನಷ್ಟ ಹಾಗೂ ವಿಮೆ ಪರಿಹಾರ ಕೊಡುವಂತೆ ಒತ್ತಾಯಿಸಿ ರೈತ ಸಂಘ 15 ದಿನಗಳ ಪ್ರತಿಭಟನೆ ನಡೆಸಿದ್ದರೂ ಜಿಲ್ಲಾಡಳಿತ ಇನ್ನೂ ಪಾವತಿಸಲು ಮುಂದಾಗಿಲ್ಲ, ಇದು ಮುಂದುವರಿದರೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾಧ್ಯಕ್ಷ ಶಿವಪುರ ಮಹದೇವಪ್ಪ ಎಚ್ಚರಿಕೆ ನೀಡಿದರು.


ಕಳೆದ ವರ್ಷ ಬರದಿಂದ ಫಸಲು ನಾಶ, ಗಾಳಿ-ಮಳೆಯಿಂದ ಬಾಳೆ ನಾಶವಾದ ರೈತರಿಗೆ ಮತ್ತು ಬೆಳೆ ವಿಮೆ ಹಣವನ್ನು ಫಲಾನುಭವಿಗಳ ಖಾತೆಗೆ ಹಾಕಿಲ್ಲ. ಈ ಬಗ್ಗೆ ರೈತ ಸಂಘ 15 ದಿನಗಳ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಎಲ್ಲ ಫಲಾನುಭವಿಗಳ ಖಾತೆಗೆ ಹಣ ಹಾಕುವುದಾಗಿ ಜಿಲ್ಲಾಡಳಿತ ಭರವಸೆ ನೀಡಿತ್ತು. ಆದರೂ ಇನ್ನೂ ಸಾವಿರಾರು ರೈತರಿಗೆ ಪರಿಹಾರ ಸಿಕ್ಕಿಲ್ಲ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ನದಿ ಮೂಲದಿಂದ ಕೆರೆಗಳಿಗೆ ನೀರು ಹರಿಸಿಲ್ಲ. ಆದ್ದರಿಂದ ಕೂಡಲೇ ಫಲಾನುಭವಿಗಳ ಖಾತೆಗೆ ಹಣ ಹಾಕದಿದ್ದರೆ ಸಂಘವು ಬೆಂಗಳೂರಿಗೆ ಪಾದಯಾತ್ರೆ ಕೈಗೊಂಡು ಉಗ್ರ ಪ್ರತಿಭಟನೆ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಂಘದ ತಾಲೂಕು ಅಧ್ಯಕ್ಷ ದಿಲೀಪ್, ಮಾಜಿ ಅಧ್ಯಕ್ಷ ಶಿವಮಲ್ಲಪ್ಪ ಮತ್ತಿತರರಿದ್ದರು.