ಜಿಲ್ಲೆ

ಬರ ಘೊಷಿಸದ ಸರ್ಕಾರ, ಶಿಗ್ಗಾಂವಿ ರೈತರಿಗೆ ಗಾಯದ ಮೇಲೆ ಬರೆ

ಶಿಗ್ಗಾಂವಿ: ಪ್ರಸಕ್ತ ವರ್ಷ ಮುಂಗಾರು ಮಳೆ ಕೊರತೆ ಹಿನ್ನಲೆಯಲ್ಲಿ ತಾಲೂಕಿನ ರೈತನ ಕನಸು ಕಮರಿದೆ. ಶೇ. 80ಕ್ಕೂ ಅಧಿಕ ಬೆಳೆ ಸಂಪೂರ್ಣ ಕೈಕೊಟ್ಟಿದ್ದರೂ ಸರ್ಕಾರ ಶಿಗ್ಗಾಂವಿ ತಾಲೂಕನ್ನು ಬರ ಪಟ್ಟಿಯಿಂದ ಕೈಬಿಟ್ಟಿರುವುದು ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಕಳೆದ ಎರಡ್ಮೂರು ವರ್ಷದಿಂದ ತಾಲೂಕಿನ ರೈತರು ಅತಿವೃಷ್ಟಿ ಮತ್ತು ಅನವೃಷ್ಟಿಯಿಂದ ಆರ್ಥಿಕ ಸಂಕಷ್ಟಕ್ಕೀಡಾಗಿದ್ದಾರೆ. ಸಕಾಲಕ್ಕೆ ಮಳೆ ಬರದೇ ಆಸರೆಯಾಗಬೇಕಾಗಿದ್ದ ಗೋವಿನಜೋಳ, ಸೋಯಾಬೀನ್, ಶೇಂಗಾ ಮತ್ತು ಹತ್ತಿ ಬೆಳೆ ಬಿಸಿಲಿನ ಬೇಗೆಗೆ ಬಾಡಿ ಹೋಗಿವೆ. ಇಂತಹ ಸನ್ನಿವೇಶದಲ್ಲಿ ಸರ್ಕಾರ ತಾಲೂಕನ್ನು ಬರಪೀಡಿತ ತಾಲೂಕು ಪಟ್ಟಿಯಿಂದ ಕೈ ಬಿಟ್ಟಿದ್ದು ರೈತಾಪಿ ವರ್ಗದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ತಾಲೂಕಿನಲ್ಲಿ ಅಂದಾಜು 40 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರೈತರು ಮಳೆಯನ್ನೇ ನಂಬಿ ಬಿತ್ತನೆ ಮಾಡಿದ್ದರು. ಆದರೆ, ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಬೆಳೆ ನಾಶವಾಗಿದ್ದು, ರೈತರಿಗೆ ಅಘಾತ ಉಂಟುಮಾಡಿದೆ. ಮುಂಗಾರು ಆರಂಭದಲ್ಲಿ ಅಲ್ಪ ಸ್ವಲ್ಪ ಮಳೆಯಾದಾಗ ಮುಂದೆ ಮಳೆ ಬರಬಹುದು ಎಂಬ ಭರವಸೆ ಮೇಲೆ ರೈತರು ಸಾಲ ಮಾಡಿ ಬಿತ್ತನೆ ಮಾಡಿದ್ದರು. ಆದರೆ, ಬಿತ್ತನೆ ನಂತರ ಮಳೆಯಾಗಲಿಲ್ಲ. ಆಗಸ್ಟ್​ನಲ್ಲಿ ಮತ್ತೆ ಮಳೆಯಾಗುವ ಮುನ್ಸೂಚನೆ ಕಂಡು ಬಿತ್ತಿದ್ದ ಬೆಳೆಯನ್ನು ನಾಶಪಡಿಸಿ 2ನೇ ಬಾರಿಗೆ ಬಿತ್ತನೆ ಮಾಡಿದ್ದರು. ಆದರೆ, ಮಳೆರಾಯನ ಕಣ್ಣಾಮುಚ್ಚಾಲೆ ಆಟದಿಂದ ಎರಡನೇ ಬಾರಿಗೆ ಬಿತ್ತಿದ ಬೆಳೆ ಕೈಕೊಟ್ಟಿದೆ. ಇತ್ತ ಭೂಮಿಗೆ ಹಾಕಿದ ಬೀಜ, ಗೊಬ್ಬರ, ಆಳುಗಳ ಖರ್ಚು ನಿಭಾಯಿಸಲು ಆಗದೆ ಸಾಲಗಾರರಿಗೆ ಹೆದರಿ ರೈತ ಆತ್ಮಹತ್ಯೆಯತ್ತ ಮುಖ ಮಾಡುವಂತಹ ಪರಿಸ್ಥಿತಿ ಬಂದೊದಗಿದೆ.

ಈ ಎಲ್ಲ ವಾಸ್ತವಾಂಶಗಳು ಸರ್ಕಾರದ ಕಣ್ಣೆದುರಿಗೆ ಇದ್ದರೂ ಶಿಗ್ಗಾಂವಿ ತಾಲೂಕನ್ನು ಬರ ಪೀಡಿತ ತಾಲೂಕು ಎಂದು ಘೊಷಣೆ ಮಾಡದೇ ಇರುವುದರ ಉದ್ದೇಶ ಮಾತ್ರ ಅಸಹನೀಯವಾಗಿದೆ. ಶಿಗ್ಗಾಂವಿ ತಾಲೂಕಿನ ಸರಹದ್ದು ಹಂಚಿಕೊಂಡಿರುವ ಪಕ್ಕದ ತಾಲೂಕುಗಳಾದ ಸವಣೂರ, ಕುಂದಗೋಳ ಮತ್ತು ಮುಂಡಗೋಡ ತಾಲೂಕನ್ನು ಬರ ಪಟ್ಟಿಗೆ ಸೇರಿಸಿ ಶಿಗ್ಗಾಂವಿ ತಾಲೂಕನ್ನು ಬರಪಟ್ಟಿಗೆ ಸೇರಿಸದೇ ಸರ್ಕಾರ ತಾರತಮ್ಯ ಎಸಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕಳೆದ ಬಾರಿಯ ಅಂಕಿ ಅಂಶ

ಶಿಗ್ಗಾಂವಿ ತಾಲೂಕಿಗೆ ಕಳೆದ ಬಾರಿ ಈ ಹಿಂದಿನ ಸರ್ಕಾರ ರಾಜ್ಯದಿಂದ ಅತಿವೃಷ್ಟಿಯಿಂದ ಹಾಳಾದ ಸುಮಾರು 17,775 ಹೆಕ್ಟೇರ್ ಪ್ರದೇಶಕ್ಕೆ ಪ್ರತಿ ಹೆಕ್ಟೇರ್​ಗೆ ಸುಮಾರು 13,600 ರೂ. ರಂತೆ ಸುಮಾರು 24.17 ಕೋಟಿ ರೂ. ಬೆಳೆ ಹಾನಿ ವಿತರಿಸಿದೆ. ಜತೆಗೆ ಮೊದಲ ಬಾರಿಗೆ ಅತಿ ಹೆಚ್ಚು ಅಂದರೆ ಸುಮಾರು 56 ಕೋಟಿ ರೂ. ವಿಮೆ ಹಣ ಶಿಗ್ಗಾಂವಿ ತಾಲೂಕಿಗೆ ಬಿಡುಗಡೆಯಾಗಿತ್ತು. ಈ ಬಾರಿ ಸುಮಾರು 40 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ರೈತರು ಬರ ಪರಿಹಾರ ಮತ್ತು ವಿಮೆಯ ನಿರೀಕ್ಷೆಯಲ್ಲಿದ್ದಾರೆ.

ಕಳೆದ ಬಾರಿಗಿಂತ ಈ ಬಾರಿ ರೈತ ಸಂಕಷ್ಟದಲ್ಲಿದ್ದಾನೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ಶಿಗ್ಗಾಂವಿ ತಾಲೂಕನ್ನು ಬರ ಪೀಡಿತ ತಾಲೂಕಗಳ ಪಟ್ಟಿಯಿಂದ ಕೈ ಬಿಟ್ಟಿರುವುದು ಖಂಡನೀಯ. ಕೇವಲ ಗ್ಯಾರಂಟಿಗಳನ್ನು ಜಾರಿ ಮಾಡುತ್ತ ಪ್ರಚಾರದಲ್ಲಿ ತೊಡಗಿರುವ ಸರ್ಕಾರವನ್ನು ಎಚ್ಚರಿಸಲು ರೈತ ಸಂಘ ಮತ್ತು ಹಸಿರು ಸೇನೆ ರಾಷ್ಟ್ರೀಯ ಹೆದ್ದಾರಿ ತಡೆದು ಅನಿರ್ದಿಷ್ಟಾವಧಿ ಹೋರಾಟಕ್ಕೆ ಮುಂದಾಗಲಿದೆ. ಶಿಗ್ಗಾಂವಿ ತಾಲೂಕನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸುವವರೆಗೆ ಈ ಹೋರಾಟ ಮುಂದುವರಿಯಲಿದೆ. | ಮುತ್ತಣ್ಣ ಗುಡಗೇರಿ, ತಾಲೂಕು ಅಧ್ಯಕ್ಷ, ರೈತ ಸಂಘ ಹಾಗೂ ಹಸಿರು ಸೇನೆ ಶಿಗ್ಗಾಂವಿ ಈ ಬಾರಿ ಮಳೆ ಕೊರತೆಯಿಂದಾಗಿ ಬಿತ್ತಿದ ಬೆಳೆಗಳು ಬಾಡಿವೆ. ಆದ್ದರಿಂದ ರೈತರು ಬೆಳೆ ನಾಶ ಪಡಿಸುತ್ತಿದ್ದಾರೆ. ರೈತರು ಬೆಳೆ ನಾಶಪಡಿಸುವ ಮೊದಲು ಕೃಷಿ ಇಲಾಖೆಗೆ ತಿಳಿಸಿದರೆ ಬೆಳೆ ಹಾನಿ ಸಮೀಕ್ಷೆ ಕೈಗೊಳ್ಳಲಾಗುವುದು. ಇದರಿಂದ ರೈತರಿಗೆ ಅನುಕೂಲವಾಗಲಿದೆ. | ಸುರೇಶಬಾಬುರಾವ್ ದೀಕ್ಷಿತ, ಸಹಾಯಕ ನಿರ್ದೇಶಕರು ಕೃಷಿ ಇಲಾಖೆ ಶಿಗ್ಗಾಂವಿ