ಸಕಲೇಶಪುರ: ಮಲೆನಾಡಿನ ಹೆತ್ತೂರು ಹೋಬಳಿ ಸುತ್ತಮುತ್ತ ಕಾಡಾನೆಗಳ ಹಾವಳಿ ವಿಪರೀತವಾಗಿದ್ದು, ಮರ್ಕಳ್ಳಿ ಗ್ರಾಮದಲ್ಲಿ ಗುರುವಾರ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ.
ತಾಲೂಕಿನ ಹೆತ್ತೂರು ಹೋಬಳಿಯ ವಳಲಹಳ್ಳಿ ಗ್ರಾ.ಪಂ.ವ್ಯಾಪ್ತಿಯ ಮರ್ಕಳ್ಳಿ ಗ್ರಾಮದಲ್ಲಿ ಕಾಡಾನೆಗಳು ದಾಂಧಲೆ ನಡೆಸಿ ಗ್ರಾಮದ ಮಾಯಣ್ಣ ಅವರ ಭತ್ತದ ಗದ್ದೆ ಸೇರಿದಂತೆ ಇನ್ನೂ ಹಲವರ ಗದ್ದೆ ಹಾಗೂ ಕಾಫಿ ತೋಟಗಳಲ್ಲಿ ಕಾಡಾನೆಗಳು ದಾಂಧಲೆ ನಡೆಸಿ ಬೆಳೆ ನಷ್ಟಪಡಿಸಿವೆ.
ಹವಾಮಾನ ವೈಪರೀತ್ಯದ ನಡುವೆಯೂ ಕಷ್ಟಪಟ್ಟು ಬೆಳೆಯಲಾಗಿರುವ ಭತ್ತ ಹಾಗೂ ಕಾಫಿ ಗಿಡಗಳನ್ನು ಕಳೆದುಕೊಂಡು ಬೆಳೆಗಾರರು ಕಂಗಾಲಾಗಿದ್ದಾರೆ. ಕಾಡಾನೆಗಳ ದಾಳಿಯಿಂದ ಸಾವು-ನೋವು ಸಂಭವಿಸಿದಾಗ ಅರಣ್ಯ ಇಲಾಖೆ ಅಧಿಕಾರಿಗಳು ಸಮಸ್ಯೆ ಬಗೆಹರಿಸುತ್ತೇವೆ ಎಂದು ಹೇಳುತ್ತಾರೆ. ನಂತರ ಮೈಮರೆಯುತ್ತಾರೆ. ತೊಂದರೆ ಅನುಭವಿಸಬೇಕಿರುವುದು ನಾವು ಎಂದು ಕಾಡಾನೆ ದಾಳಿಯಿಂದ ನೊಂದ ರೈತರು, ಕಾಫಿ ಬೆಳೆಗಾರರು ಕಣ್ಣೀರಿಟ್ಟರು.
ತಾಲೂಕಿನಲ್ಲಿ ಕಾಡಾನೆ ಸಮಸ್ಯೆ ವಿಪರೀತವಾಗಿದ್ದು ದಿನ ನಿತ್ಯ ಒಂದಲ್ಲ ಒಂದು ಭಾಗದಲ್ಲಿ ಕಾಡಾನೆಗಳ ಹಿಂಡು ಸಂಚರಿಸಿ ಬೆಳೆಗಳನ್ನು ನಾಶಪಡಿಸುತ್ತಿವೆ. ತಾಲೂಕಿನ ಕೆಲ ಭಾಗಗಳಲ್ಲಿ ಕಾಡಾನೆಗಳ ಭಯದಿಂದ ಕಾಫಿ ತೋಟಗಳಲ್ಲಿ ಕೂಲಿ ಕೆಲಸ ಮಾಡಲು ಕಾರ್ಮಿಕರು ಬಾರದೆ ತೋಟಗಳು ಹಾಳಾಗಿ ಹೋಗುತ್ತಿವೆ. ಸರ್ಕಾರ ಕೂಡಲೇ ಇತ್ತ ಗಮನಹರಿಸಿ ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕುವಂತೆ ರೈತರು ಆಗ್ರಹಿಸಿದ್ದಾರೆ.