ಹುಬ್ಬಳ್ಳಿ : ರೈತರು ಅತಿವೃಷ್ಠಿಯಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳೆ ವಿಮೆ ಮಾಡಿಸಿರುವ ಜಿಲ್ಲೆಯ ರೈತರಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಅಡಿ ಕೂಡಲೇ ಮಧ್ಯಂತರದ ಪರಿಹಾರವೂ ಸೇರಿದಂತೆ ಉಳಿದ ಸಂಪೂರ್ಣ ವಿಮಾ ಹಣವನ್ನು ಇತ್ಯರ್ಥ ಪಡಿಸಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಜಿಲ್ಲೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ನಗರದಲ್ಲಿ ಶುಕ್ರವಾರದಂದು ಜಿಲ್ಲಾಧಿಕಾರಿ ಗುರುದತ್ತ ಹೆಗ್ಗಡೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಣಾಧಿಕಾರಿ ಸ್ವರೂಪ ಟಿ. ಕೆ., ಜಿಲ್ಲಾ ಸಾಂಖ್ಯಿಕ ಅಧಿಕಾರಿ ಸಾಯಿಕುಮಾರ್ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವ ಪ್ರಲ್ಹಾದ ಜೋಶಿ, ಈ ಕುರಿತು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಸಂಪೂರ್ಣ ಜಿಲ್ಲೆಯಲ್ಲಿಯೇ ಅತಿ ಹೆಚ್ಚಿನ ಮಳೆಯಿಂದಾಗಿ ರಾಜ್ಯ ಸರ್ಕಾರವು ನೆರೆಪಿಡಿತ ಪ್ರದೇಶವೆಂದು ಘೊಷಿಸಿದ್ದಲ್ಲದೆ, ಬೆಳೆಹಾನಿ ಪರಿಹಾರವನ್ನು ನೀಡಿದೆ. ಜತೆಗೆ ಮಧ್ಯಂತರ ಬೆಳೆ ವಿಮಾ ಪರಿಹಾರವನ್ನು ನೀಡಿದೆ. ಈ ಎಲ್ಲ ಅಂಶಗಳ ನಡುವೆ ಉತ್ತಮವಾಗಿ ಇಳುವರಿ ಬಂದಿವೆಯೆಂದು ಬೆಳೆ ಸಮೀಕ್ಷೆ ಕೈಗೊಂಡ ಇಲಾಖೆಗಳು ವರದಿ ನೀಡಿವೆೆ. ಅಧಿಕಾರಿಗಳ ತಪ್ಪಿನಿಂದಾಗಿ ಬಡ ರೈತರು ತೊಂದರೆ ಅನುಭವಿಸುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ರೀತಿ ಅವೈಜ್ಞಾನಿಕವಾಗಿ ಬೇಜವಾಬ್ದಾರಿತನದ ದ್ವಂದ್ವ ವರದಿಗಳನ್ನು ಸರ್ಕಾರ ಹೇಗೆ ಸ್ವೀಕರಿಸಿತು ಎಂದು ಪ್ರಶ್ನಿಸಿದ ಸಚಿವ ಜೋಶಿ, ಕೂಡಲೆ ಈಗಾಗಲೇ ಸಲ್ಲಿಸಿರುವ ವರದಿಯನ್ನು ಪರಿಷ್ಕರಣೆ ಮಾಡಿ, ಸರ್ಕಾರಕ್ಕೆ ಪುನಃ ಪರಿಷ್ಕೃತ ವರದಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದರು.
ಕೆಲವು ಅಧಿಕಾರಿಗಳು ಬೆಳೆವಿಮಾ ಕಂಪನಿಯೊಂದಿಗೆ ಶಾಮಿಲಾಗಿ ಕಂಪನಿಗೆೆ ಲಾಭ ಮಾಡುವ ದೃಷ್ಠಿಯಿಂದಲೇ ಈ ರೀತಿ ವರದಿ ನೀಡಿರುವರೆಂಬುದು ಸಂಶಯಕ್ಕೆ ಕಾರಣವಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ, ಸಮಗ್ರ ತನಿಖೆೆಗೆ ಒಳಪಡಿಸಿ ತಪ್ಪಿತಸ್ಥರ ವಿರುದ್ದ ಕ್ರಮ ಜರುಗಿಸಬೇಕು ಎಂದರು.