ಜಿಲ್ಲೆ

ಕೊನೆಗೂ ಹವಾಮಾನ ಆಧಾರಿತ ಬೆಳೆ ವಿಮೆ ನೋಂದಣಿಗೆ ಕ್ರಮ

Uttara Kannada - Subash Hegde

ಕಾರವಾರ: ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಗಳಿಗೆ ಹವಾಮಾನ ಆಧಾರಿತ ಬೆಳೆ ವಿಮೆ ಜಾರಿ ಮಾಡಲು ಕಂಪನಿಯನ್ನು ನಿಗದಿ ಮಾಡಿ, ನೋಂದಣಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

ಕಳೆದ ಎರಡು ವರ್ಷ ಬೆಳೆ ವಿಮೆ ನೋಂದಣಿ ಮಾಡಿದ್ದ ಕ್ಷೇಮಾ ಕಂಪನಿ ಬರುವ ಹಂಗಾಮಿಗೆ ವಿಮೆ ಮಾಡಲು ಹಿಂದೆ ಸರಿದಿದ್ದರಿಂದ ಸಮಸ್ಯೆ ಉಂಟಾಗಿತ್ತು. ಈಗ ಸರ್ಕಾರ ಜಿಲ್ಲೆಗೆ ರಿಲಾಯನ್ಸ್ ಇನ್ಶುರೆನ್ಸ್ ಕಂಪನಿಯನ್ನು ನೇಮಕ ಮಾಡಿದ್ದು. ಆಗಸ್ಟ್ 11 ರೊಳಗೆ ನೋಂದಣಿ ಮಾಡಿಕೊಳ್ಳಬೇಕು ಎಂದು ಸೂಚಿಸಿದೆ. ವಿಮಾ ಅವಧಿಯು ಆಗಸ್ಟ್ 1 ರಿಂದಲೇ ಪೂರ್ವಾನ್ವಯವಾಗುವಂತೆ ಜಾರಿಯಾಗಲಿದ್ದು, ರೈತರಿಗೆ ನಷ್ಟವಾಗುವುದಿಲ್ಲ ಎಂದು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಸತೀಶ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಅಡಕೆ, ಮಾವು, ಶುಂಠಿ ಮತ್ತು ಕರಿಮೆಣಸು ಬೆಳೆಗಳಿಗೆ ಬೆಳೆ 2026 ರ ಜುಲೈ 31 ರವರೆಗೆ ವಿಮಾ ಸೌಲಭ್ಯವಿರುತ್ತದೆ. ವಿಮಾ ಚಂದಾದಾರರಾಗಲು ರೈತರು ಎಫ್‌ಐಡಿ ಹೊಂದುವುದು ಕಡ್ಡಾಯವಾಗಿದೆ. ನಿಗದಿತ ಅರ್ಜಿ ನಮೂನೆ, ಬ್ಯಾಂಕ್ ಪಾಸ್ ಪುಸ್ತಕದ ಯಥಾ ಪ್ರತಿ, ಬೆಳೆ ನಮೂದಿರುವ ಪಹಣಿ ಪತ್ರಿಕೆ, ಸ್ವಯಂ ದೃಢೀಕರಣ, ನಾಮಿನಿ ವಿವರ ಮತ್ತು ಆಧಾರ್ ಕಾರ್ಡ್ ಪ್ರತಿಯೊಂದಿಗೆ ಸಂಬಂಧಿತ ಬ್ಯಾಂಕ್ ಶಾಖೆಯಲ್ಲಿ ಅಥವಾ ಸಹಕಾರ ಸಂಘದಲ್ಲಿ ನೋಂದಣಿ ಮಾಡಿಕೊಳ್ಳಬಹುದಾಗಿದೆ.

ಅಡಕೆ ಪ್ರತಿ ಎಕರೆಗೆ 51,200 ರೂ. ವಿಮಾ ಮೊತ್ತವಿದ್ದು, ರೈತರು 2,591ರೂ. ಕಂತು ಪಾವತಿಸಬೇಕು., ಕರಿ ಮೆಣಸು ಪ್ರತಿ ಎಕರೆಗೆ 18,800 ರೂ. ವಿಮಾ ಮೊತ್ತವಿದ್ದು, ರೈತರು 952 ರೂ. ಕಂತು ಪಾವತಿಸಬೇಕು., ಶುಂಠಿ ಪ್ರತಿ ಎಕರೆಗೆ 52ಸಾವಿರ ರೂ. ವಿಮಾ ಮೊತ್ತವಿದ್ದು, 2,631 ರೂ. ಕಂತು ಪಾವತಿಸಬೇಕು. ಮಾವು ಪ್ರತಿ ಎಕರೆಗೆ 32 ರೂ. ವಿಮಾ ಮೊತ್ತವಿದ್ದು, 5,505 ರೂ. ಕಂತು ಪಾವತಿಸಬೇಕು.

ಬೆಳೆ ಸಾಲ ಪಡೆಯುವ ರೈತರು ಹಾಗೂ ಪಡೆಯದ ರೈತರು ಈ ಸೌಲಭ್ಯ ಪಡೆಯಲು ಅವಕಾಶವಿದ್ದು, ಬೆಳೆ ಸಾಲ ಪಡೆಯುವ ರೈತರು ಈ ಯೋಜನೆಯಡಿ ಭಾಗವಹಿಸಲು ಇಚ್ಛಿಸದಿದ್ದಲ್ಲಿ ಸಂಬಂಧಿತ ಬ್ಯಾಂಕ್ ವ್ಯವಸ್ಥಾಪಕರಿಗೆ ನೋಂದಣಿ ಅಂತಿಮ ದಿನಾಂಕದ 7 ದಿನಗಳ ಒಳಗಾಗಿ ಲಿಖಿತವಾಗಿ ಮಾಹಿತಿ ನೀಡಬೇಕಾಗುತ್ತದೆ ಎಂದು ತೋಟಗಾರಿಕೆ ಇಲಾಖೆ ಪ್ರಕಟಣೆ ತಿಳಿಸಿದೆ.