ಜಿಲ್ಲೆ

31 ಕೋಟಿ ರೂ. ಬೆಳೆವಿಮೆ ಹಣ ಬಿಡುಗಡೆ, ಸಂತಸ ಹಂಚಿಕೊಂಡ ರೈತರು

Dharwada - Basavaraj Idli

ಹುಬ್ಬಳ್ಳಿ: ಕಳೆದ ಸಾಲಿನಲ್ಲಿ ಅತಿವೃಷ್ಟಿಯಿಂದ ಬೆಳೆಹಾನಿ ಅನುಭವಿಸಿದ್ದ ರೈತರಿಗೆ ಇದೀಗ ಫಸಲ್ ಬೀಮಾ ಯೋಜನೆ ಕೈ ಹಿಡಿದಿದೆ.
ಧಾರವಾಡ ಜಿಲ್ಲೆಯ ಕುಂದಗೋಳ ಹಾಗೂ ಹುಬ್ಬಳ್ಳಿ ತಾಲೂಕಿನ ಶಿರಗುಪ್ಪಿ ಹೋಬಳಿ ರೈತರಿಗೆ ಒಟ್ಟು 31.75 ಕೋಟಿ. ಬೆಳೆವಿಮೆ ಹಣ ಬಿಡುಗಡೆಯಾಗಿದೆ.

ಇದರಲ್ಲಿ ಶಿರಗುಪ್ಪಿ ಹೋಬಳಿಗೆ 27.84 ಕೋಟಿ ಹಾಗೂ ಕುಂದಗೋಳ ಹೋಬಳಿಗೆ 3.91 ಕೋಟಿ ರೂ. ಮಂಜೂರಾಗಿತ್ತು.

2023-24ರ ಮುಂಗಾರು ಹಂಗಾಮಿನಲ್ಲಿ ಬಿತ್ತನೆಯಾಗಿದ್ದ ಕೆಂಪು ಮೆಣಸಿನಕಾಯಿ ಬೆಳೆಯು ಅತಿಯಾದ ಮಳೆಯ ಹಿನ್ನೆಲೆಯಲ್ಲಿ ತೀವ್ರ ಹಾನಿಯಾಗಿತ್ತು. ರಾಜ್ಯ ಸರ್ಕಾರ ಬೆಳೆ ಹಾನಿ ಪರಿಹಾರ ನೀಡಿದ್ದರೂ ರೈತರು ವಂತಿಗೆ ಭರಿಸಿ ಬೆಳೆವಿಮೆ ಕಟ್ಟಿದ್ದರೂ ಪರಿಹಾರ ಮಾತ್ರ ಸಿಕ್ಕಿರಲಿಲ್ಲ.

ಕಳೆದೊಂದು ವರ್ಷದಿಂದ ಕೇಂದ್ರ ಸರ್ಕಾರದ ಗಮನಕ್ಕೆ ತಂದು ಪರಿಹಾರ ಶೀಘ್ರ ಬಿಡುಗಡೆ ಮಾಡಬೇಕೆಂದು ರೈತರು ಒತ್ತಾಯಿಸಿದ್ದರು.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಮುತುವರ್ಜಿ, ಧಾರವಾಡ ಜಿಲ್ಲಾಧಿಕಾರಿ, ಕೃಷಿ, ಕಂದಾಯ, ತೋಟಗಾರಿಕೆ ಇಲಾಖೆ ಅಧಿಕಾರಿಗಳ ನಿರಂತರ ಪ್ರಯತ್ನದ ಫಲವಾಗಿ ಇದೀಗ ಎರಡು ಹೋಬಳಿಗಳ ರೈತರಿಗೆ ಸಿಹಿ ಸುದ್ದಿ ಸಿಕ್ಕಿದೆ.

ಸಂಕಷ್ಟದ ಸಂದರ್ಭದಲ್ಲಿ ವಿಮೆ ಪರಿಹಾರ ಸಿಕ್ಕಿರುವುದು ಅತ್ಯಂತ ಸಂತೋಷದ ಸಂಗತಿ ಎಂದು ಮುಖಂಡರಾದ ಸುಭಾಸ ಬೂದಿಹಾಳ, ಡಿ.ಡಿ. ಪಾಟೀಲ ಇತರರು ಕೃತಜ್ಞತೆ ಸಲ್ಲಿಸಿದ್ದಾರೆ.