ಮಂಜುನಾಥ ಸಾಯೀಮನೆ ಶಿರಸಿ
ಕೊಳೆ ರೋಗದಿಂದ ತೀವ್ರ ಹಾನಿ ಅನುಭವಿಸಿದ ಜಿಲ್ಲೆಯ ಅಡಕೆ ಬೆಳೆಗಾರರಿಗೆ ಹವಾಮಾನ ಆಧಾರಿತ ಬೆಳೆ ವಿಮೆ ಈ ಬಾರಿ ಕೈ ಹಿಡಿಯುವ ಸಾಧ್ಯತೆ ಇದೆ. ಜೂನ್, ಜುಲೈ ತಿಂಗಳಿನಲ್ಲಿ ಜಿಲ್ಲೆಯಲ್ಲಿ ಅತ್ಯಧಿಕ ಮಳೆಯಾಗಿರುವ ಕಾರಣ ಬೆಳೆ ವಿಮೆಯ ಪರಿಹಾರ ಸಿಗುವ ಸಾಧ್ಯತೆ ದಟ್ಟವಾಗಿದೆ.
ಅಬ್ಬರದ ಮಳೆಗೆ ಈ ವರ್ಷ ಉತ್ತರ ಕನ್ನಡ ಜಿಲ್ಲೆಯ ಒಟ್ಟು 36,450 ಹೆಕ್ಟೇರ್ ಅಡಕೆ ಪ್ರದೇಶದಲ್ಲಿ 17,391 ಹೆಕ್ಟೇರ್ ಅಡಕೆ ಬೆಳೆಯುವ ಪ್ರದೇಶದಲ್ಲಿ ಗಂಭೀರ ಕೊಳೆ ಕಾಣಿಸಿಕೊಂಡಿದೆ. ಇದರಲ್ಲಿ 9435 ಹೆಕ್ಟೇರ್ ಪ್ರದೇಶದಲ್ಲಿ ಶೇ. 33ಕ್ಕಿಂತ ಹೆಚ್ಚು ಕೊಳೆ ರೋಗ ಕಾಣಿಸಿಕೊಂಡಿದೆ. ಎನ್ಡಿಆರ್ಎಫ್ ವ್ಯಾಪ್ತಿಯಲ್ಲಿ ಬೆಳೆ ಹಾನಿ ಪರಿಗಣಿಸಲ್ಪಡದ ಕಾರಣ ಸದ್ಯದ ಸ್ಥಿತಿಯಲ್ಲಿ ಹವಾಮಾನ ಆಧಾರಿತ ಬೆಳೆ ವಿಮೆ ಮಾತ್ರ ರೈತರ ಪಾಲಿಗೆ ಆಶಾದಾಯಕವಾಗಿದೆ.
ಎಷ್ಟು ಸಿಕ್ಕೀತು?: ಹವಾಮಾನ ಆಧಾರಿತ ಬೆಳೆ ವಿಮೆಯ ಅವಧಿ ಪ್ರತಿ ವರ್ಷ ಆಗಸ್ಟ್ 1ರಿಂದ ಜು. 31ರವರೆಗೆ ಇರುತ್ತದೆ. ಕಳೆದ ವರ್ಷ 41,694 ರೈತರು ಬೆಳೆ ಸಾಲ ಪಡೆಯುವ ಮೂಲಕ ಹವಾಮಾನ ಆಧಾರಿತ ಬೆಳೆ ವಿಮೆ ಮಾಡಿಸಿದ್ದರು. ಈ ವಿಮೆಯ ಅವಧಿ ಜು. 31ಕ್ಕೆ ಕೊನೆಗೊಂಡಿದೆಯಾದರೂ ಜೂನ್ ಮತ್ತು ಜುಲೈ ತಿಂಗಳಿನಲ್ಲಿ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆ ಹವಾಮಾನ ಆಧಾರಿತ ಬೆಳೆ ವಿಮೆ ಪರಿಹಾರದ ಮಾರ್ಗಸೂಚಿಯ ಅಡಿಯಲ್ಲಿ ಪರಿಗಣನೆ ಆಗುವ ಸಾಧ್ಯತೆ ದಟ್ಟವಾಗಿದೆ. ವಿಮೆ ಪ್ರಕ್ರಿಯೆಗಳೆಲ್ಲ ಪೂರ್ಣಗೊಂಡು ಸೆಪ್ಟೆಂಬರ್ ಅಂತ್ಯದ ವೇಳೆಗೆ ಪರಿಹಾರ ಘೊಷಣೆ ಆಗುವ ಸಾಧ್ಯತೆ ಇದ್ದು, ಪ್ರತಿ ಎಕರೆ ಅಡಕೆ ತೋಟಕ್ಕೆ 35 ಸಾವಿರ ರೂ. ಲಭಿಸಬಹುದು ಎಂದು ಪ್ರಾಥಮಿಕವಾಗಿ ಅಂದಾಜಿಸಲಾಗಿದೆ.
ಹವಾಮಾನ ಆಧಾರಿತ ಬೆಳೆ ವಿಮೆಯಲ್ಲಿ ಪರಿಹಾರಕ್ಕೆ ಮಳೆಯ ಪ್ರಮಾಣ, ಗಾಳಿ ಬೀಸುವಿಕೆ, ಮಂಜುಕವಿದ ವಾತಾವರಣ ಎಲ್ಲವನ್ನೂ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪರಿಹಾರಕ್ಕೆ ಪರಿಗಣಿಸಲು ಮಳೆಯ ಪ್ರಮಾಣವನ್ನು ನಿಗದಿಪಡಿಸಲಾಗಿದೆ. ಈ ವರ್ಷ ಜೂನ್ ಮತ್ತು ಜುಲೈ ತಿಂಗಳಿನಲ್ಲಿಯೇ ಅಬ್ಬರದ ಮಳೆಯಾಗಿದ್ದರಿಂದ ಮಲೆನಾಡು ಮತ್ತು ಕರಾವಳಿಯಲ್ಲಿ ವಿಮೆ ಪರಿಹಾರಕ್ಕೆ ನಿಗದಿಪಡಿಸಲಾಗಿದ್ದ ಮಾನದಂಡಕ್ಕಿಂತ ಹೆಚ್ಚು ಮಳೆ ಈ ಅವಧಿಯಲ್ಲೇ ಸುರಿದಿದೆ. ಜಿಲ್ಲೆಯಲ್ಲಿ ಜುಲೈ ಅಂತ್ಯಕ್ಕೆ ವಾಡಿಕೆ ಮಳೆ 993 ಮಿ.ಮೀ. ಇದ್ದಿದ್ದರೆ ಈ ವರ್ಷ 1798 ಮಿ.ಮೀ. ಸುರಿದಿದೆ. ಜುಲೈ ಅಂತ್ಯಕ್ಕೆ ಕುಮಟಾದಲ್ಲಿ 2134, ಸಿದ್ದಾಪುರದಲ್ಲಿ2454, ಯಲ್ಲಾಪುರದಲ್ಲಿ1458, ಶಿರಸಿಯಲ್ಲಿ 1936 ಮಿ.ಮೀ. ಮಳೆಯಾಗಿದೆ. ಜುಲೈ ಅಂತ್ಯಕ್ಕೆ ಜಿಲ್ಲೆಯ ಮಲೆನಾಡು, ಕರಾವಳಿ ತಾಲೂಕುಗಳಲ್ಲಿ ವಾಡಿಕೆ ಮಳೆಯ ಎರಡರಷ್ಟು ಸುರಿದಿದೆ. ಈ ಅಂಶ ಹವಾಮಾನ ಆಧಾರಿತ ಬೆಳೆ ವಿಮೆಯಲ್ಲಿ ಪರಿಹಾರ ಪರಿಗಣನೆಗೆ ಹೆಚ್ಚಿನ ಸಾಧ್ಯತೆ ಒದಗಿಸಿದೆ.
ರೈತರಿಗೆ ಎದುರಾಗಿತ್ತು ತೊಡಕು
ಬೆಳೆ ಸಾಲ ಪಡೆದ ರೈತರು ಮತ್ತು ಸ್ವಯಂ ಪ್ರೇರಣೆಯಿಂದ ಬೆಳೆ ವಿಮೆ ಮಾಡಿಸಿಕೊಳ್ಳುವ 40 ಸಾವಿರಕ್ಕೂ ಅಧಿಕ ರೈತರು ಜಿಲ್ಲೆಯಲ್ಲಿದ್ದಾರೆ. ಆದರೆ, ಈ ವರ್ಷದ ಬೆಳೆ ವಿಮೆ ಮಾಡಿಸಲು ಕೆಲ ರೈತರು ತಾಂತ್ರಿಕ ಸಮಸ್ಯೆಯನ್ನೂ ಎದುರಿಸಬೇಕಾಗಿ ಬಂದಿತ್ತು. ಈ ವರ್ಷ ಬೆಳೆ ಸರ್ವೆ ವೇಳೆ ಕಂದಾಯ ಇಲಾಖೆ ಅಧಿಕಾರಿಗಳು ಮಾಡಿದ ತಪ್ಪಿನಿಂದಾಗಿ ರೈತರು ಸಮಸ್ಯೆ ಎದುರಿಸಿದ್ದಾರೆ. ಅಡಕೆ ಬೆಳೆಯ ಕ್ಷೇತ್ರವನ್ನು ಪೂರ್ಣ ಪ್ರಮಾಣದಲ್ಲಿ ನಮೂದಿಸಿರದ ಕಾರಣ ಮತ್ತು ಕೆಲ ರೈತರ ಪಹಣಿ ಪತ್ರಿಕೆಯಲ್ಲಿ ವಾರಿಸಾ ಎಂಟ್ರಿ ಈ ವರ್ಷ ನಡೆದಿದ್ದರೆ ಅಂತಹ ರೈತರು ಸಮಸ್ಯೆ ಎದುರಿಸಿದ್ದರು. ಸರ್ಕಾರದ ಫ್ರೂಟ್ಸ್ ತಂತ್ರಾಂಶದ ದಾಖಲೆಯನ್ನು ಹವಾಮಾನ ಆಧಾರಿತ ಬೆಳೆ ವಿಮೆಗೆ ಈ ಬಾರಿ ಲಿಂಕ್ ಮಾಡಲಾಗಿದೆ. ಹೀಗಾಗಿ ಮಾಹಿತಿ ಹೊಂದಾಣಿಕೆ ಆಗದೇ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲಿ 20ರಿಂದ 25 ರೈತರು ವಿಮೆ ಮಾಡಿಸಲಾಗದೇ ಸಮಸ್ಯೆ ಎದುರಿಸಿದ್ದರು. ಬೆಳೆ ವಿಮೆ ಮಾಡಿಸಲು ಜುಲೈ 31 ಅಂತಿಮ ದಿನವಾಗಿತ್ತಾದರೂ 15 ದಿನಗಳ ಕಾಲ ಅವಧಿ ವಿಸ್ತರಣೆ ಮಾಡಿದ್ದರಿಂದ ಈ ರೀತಿಯ ರೈತರು ತಾಂತ್ರಿಕ ದೋಷಗಳನ್ನು ಸರಿಪಡಿಸಿಕೊಂಡು ಬೆಳೆ ವಿಮೆ ಮಾಡಿಸಿಕೊಂಡಿದ್ದಾರೆ.
ಹೋರಾಡಿ ವಿಮೆ ಪರಿಹಾರ ಪಡೆದಿದ್ದರು..
ಸಿದ್ದಾಪುರ ತಾಲೂಕು ಕಂಚಿಕೈ ಸೇವಾ ಸಹಕಾರಿ ಸಂಘದ ಮೂಲಕ 2017-18ರಲ್ಲಿ 473 ರೈತರು ಬೆಳೆ ವಿಮೆ ಮಾಡಿಸಿದ್ದರೂ ವಿಮಾ ಕಂಪನಿ ಪರಿಹಾರ ನೀಡಿರಲಿಲ್ಲ. ಆ ವರ್ಷ ತೀವ್ರ ಮಳೆಯಿಂದಾಗಿ ಈ ಭಾಗದಲ್ಲಿ ಅಡಕೆ ಬೆಳೆ ಹಾನಿ ಉಂಟಾಗಿತ್ತು. ಈ ಕುರಿತು ರೈತರು ನ್ಯಾಯಾಲಯದ ಮೆಟ್ಟಿಲೇರಿ ಪರಿಹಾರ ಪಡೆದುಕೊಂಡಿದ್ದರು. ಇಲ್ಲಿಯ ನಿಲ್ಕುಂದ, ತಂಡಾಗುಂಡಿ ಪ್ರದೇಶದಲ್ಲಿ 2017ರ ಜುಲೈ ತಿಂಗಳಿನಲ್ಲಿ ಅತಿ ಹೆಚ್ಚಿನ ಮಳೆ ಸುರಿದಿದ್ದರೂ ಮಳೆ ಮಾಪನ ಕೇಂದ್ರ ತಾಂತ್ರಿಕ ದೋಷದಿಂದಾಗಿ 6.7 ಮಿ.ಮೀ. ಮಾತ್ರ ಮಳೆಯಾಗಿದೆ ಎಂದು ದಾಖಲಿಸಿತ್ತು. ಹೀಗಾಗಿ, ವಿಮೆ ತುಂಬಿಸಿಕೊಂಡಿದ್ದ ಎಸ್ಬಿಐ ರೈತರಿಗೆ ಪರಿಹಾರ ನೀಡಲು ನಿರಾಕರಿಸಿತ್ತು. ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿದ ಬಳಿಕ ಇಲ್ಲಿಯ 473 ಅಡಕೆ ಬೆಳೆಗಾರರಿಗೆ ಒಟ್ಟು 12.78 ಲಕ್ಷ ರೂ. ಪರಿಹಾರ ನೀಡುವಂತೆ ಆದೇಶಿಸಿತ್ತು. ಇದೇ ರೀತಿಯಲ್ಲಿ ಶಿರಸಿ ತಾಲೂಕಿನ ವಾನಳ್ಳಿ ಸಹಕಾರಿ ಸಂಘದಲ್ಲಿಯೂ ಸಹ ರೈತರು ಹೋರಾಟ ನಡೆಸಿ ವಿಮೆ ಪರಿಹಾರ ಪಡೆದಿದ್ದರು.
ಜೂನ್ ಮತ್ತು ಜುಲೈನಲ್ಲಿ ಅತಿ ಹೆಚ್ಚು ಮಳೆಯಾದ ಕಾರಣ ಹವಾಮಾನ ಆಧಾರಿತ ಬೆಳೆ ವಿಮೆಯಲ್ಲಿ ರೈತರಿಗೆ ಪರಿಹಾರ ಸಿಗುವ ಸಾಧ್ಯತೆ ಅಧಿಕವಾಗಿದೆ. ಜುಲೈ ಬಳಿಕ ಮಳೆ, ಹಾನಿಯನ್ನು 2024-25ರ ಸಾಲಿಗೆ ಪರಿಗಣಿಸಲಾಗುತ್ತದೆ.| ಡಾ. ಬಿ.ಪಿ. ಸತೀಶ, ಡಿಡಿ, ತೋಟಗಾರಿಕೆ ಇಲಾಖೆ ಶಿರಸಿ