ಜಿಲ್ಲೆ

ಬೆಳೆ ವಿಮೆ ಬಗ್ಗೆ ಅರಿವು ಮೂಡಿಸಬೇಕು

ಶಿವರಾಜ.ಎಂ

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಅತಿವೃಷ್ಟಿ ಅನಾವೃಷ್ಟಿ, ಹವಾಮಾನ ಬದಲಾವಣೆ ಮುಂತಾದ ಪ್ರಕೃತಿ ವಿಕೋಪಗಳಿಂದ ಸಂಭವಿಸುವ ಬೆಳೆ ನಷ್ಟಕ್ಕೆ ವಿಮೆ ಸಹಕಾರಿ ಆಗಲಿದ್ದು ಬೆಳೆ ವಿಮೆ ಮಾಡಿಸಿಕೊಳ್ಳಲು ರೈತರಿಗೆ ಅರಿವು ಮೂಡಿಸಬೇಕು ಎಂದು ಎಂದು ಜಿಲ್ಲಾಧಿಕಾರಿ ಎ.ಬಿ ಬಸವರಾಜು ಅಧಿಕಾರಿಗಳಿಗೆ ಸೂಚಿಸಿದರು.

ದೇವನಹಳ್ಳಿಯ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಮರು ವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯ ಜಿಲ್ಲಾ ಮಟ್ಟದ ತಾಂತ್ರಿಕ ಸಮಿತಿ ಸಭೆಯಲ್ಲಿ ಮಾತನಾಡಿದರು ತಾಪಮಾನ, ಗಾಳಿಯ ವೇಗ, ಮಳೆಯ ಪ್ರಮಾಣ ಮುಂತಾದ ಪ್ರಕೃತಿ ವಿಪತ್ತಿನಿಂದ ಬೆಳೆ ನಾಶವಾಗಿ ನಷ್ಟವಾಗುತ್ತದೆ. ಬೆಳೆಯನ್ನೆ ನಂಬಿ ಜೀವನ ನಡೆಸುತ್ತಿರುವ ರೈತರಿಗೆ ಈ ನಷ್ಟ ಭರಿಸಲು ಸಾಧ್ಯವಾಗುವುದಿಲ್ಲ ಹಾಗಾಗಿ ಬೆಳೆ ವಿಮೆಯ ಅವಶ್ಯಕತೆಯನ್ನು ರೈತರಿಗೆ ಮನದಟ್ಟು ಮಾಡಬೇಕು ಎಂದರು. ಅಧಿಕಾರಿಗಳು ಈ ಬಗ್ಗೆ ಎಲ್ಲ ಕಡೆಗಳಲ್ಲಿ ವ್ಯಾಪಕ ಪ್ರಚಾರ ಮಾಡಬೇಕು, ವಿಮೆ ಇದೆ ಎಂದು ಸುಮ್ಮನಾದರೆ ರೈತಾಪಿ ಜನರಿಗೆ ತಿಳಿಯುವುದಿಲ್ಲ. ಹೇಗೆ ವಿಮೆ ಮಾಡಿಸಬೇಕು ಇದರಿಂದ ಆಗುವ ಪ್ರಯೋಜನವೇನು ಎಂಬುದರ ಬಗ್ಗೆ ಸಮರ್ಪಕ ಮಾಹಿತಿ ನೀಡಬೇಕು ಎಂದು ತಿಳಿಸಿದರು.

ತಾಲೂಕುವಾರು ಜಾಗೃತಿ ಕಾರ್ಯಕ್ರಮ: ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಮರು ವಿನ್ಯಾಸ ಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಗೆ ಯುನೈಟೆಡ್ ಇಂಡಿಯಾ ಇನ್ಸುರೆನ್ಸ್ ಕಂಪನಿಯು ಅಧಿಸೂಚಿತ ವಿಮಾ ಸಂಸ್ಥೆಯಾಗಿದೆ. ವಿಮೆ ಮಾಡಿಸುವ ರೈತರು ಹೆಚ್ಚಿನ ಮಾಹಿತಿಗೆ ಆಯಾ ತಾಲೂಕಿನ ತೋಟಗಾರಿಕೆ ಇಲಾಖೆಯ ಚೇರಿಯನ್ನು ಸಂಪರ್ಕಿಸಬಹುದು. ಅಧಿಕಾರಿಗಳು ಸಹ ತಾಲೂಕುವಾರು ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡು ರೈತರಿಗೆ ವಿಮೆ ಸೌಲಭ್ಯದ ಬಗ್ಗೆ ಅರಿವು ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ದ್ರಾಕ್ಷಿ ಹಾಗೂ ಮಾವಿಗೆ ವಿಮೆ: ಜಿಲ್ಲೆಯಲ್ಲಿನ ತೋಟಗಾರಿಕೆ ಬೆಳೆಗಳಾದ ದ್ರಾಕ್ಷಿ ಮತ್ತು ಮಾವಿನ ಬೆಳೆಗೆ ವಿಮೆ ಕಲ್ಪಿಸಲಾಗಿದ್ದು. ಮಾವು ಬೆಳೆಗೆ ಪ್ರತಿ ಹೆಕ್ಟೇರಿಗೆ 8 ಸಾವಿರ ರೂಪಾಯಿ ವಿಮಾ ಮೊತ್ತ ಸಿಗಲಿದ್ದು, ರೈತರು ಶೇ 5 ರಂತೆ 4 ಸಾವಿರ ರೂಗಳು ಮಾತ್ರ ವಿಮೆ ಪಾವತಿ ಮಾಡಬೇಕು. ದ್ರಾಕ್ಷಿ ಬೆಳೆಗೆ ಪ್ರತಿ ಹೆಕ್ಟೇರಿಗೆ 2.80 ಲಕ್ಷ ರೂ ವಿಮಾ ಮೊತ್ತ ಸಿಗಲಿದ್ದು, ರೈತರು ಪ್ರತಿ ಹೆಕ್ಟೇರಿಗೆ ಶೇ.5 ರಂತೆ 14 ಸಾವಿರ ರೂಪಾಯಿ ವಿಮೆ ಪಾವತಿ ಮಾಡಬೇಕು ಎಂದು ಜಿಲ್ಲಾ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಗುಣವಂತ ತಿಳಿಸಿದರು. ರಾಷ್ಟ್ರೀಯ ಅಧಿಕೃತ ಬ್ಯಾಂಕ್, ಸಾಮಾನ್ಯ ಸೇವಾ ಕೇಂದ್ರ, ಗ್ರಾಮ ಒನ್ ಕೇಂದ್ರಗಳಲ್ಲಿ ನೋಂದಾಯಿಸಬಹುದು ಜತೆಗೆ ವಿಮೆ ಮಾಡಿಸುವ ರೈತರು ಪ್ರೂಟ್ ತಂತ್ರಾಂಶದ ನೋಂದಣಿ ಸಂಖ್ಯೆಯನ್ನು ಹೊಂದಿರಬೇಕಿದ್ದು, ನೋಂದಣಿ ಸಂಖ್ಯೆಗೆ ಪಹಣಿ ವಿವರಗಳನ್ನು ಜೋಡಿಸಬೇಕಿರುತ್ತದೆ. ನೋಂದಣಿ ಸಂಖ್ಯೆ ಇಲ್ಲದ ರೈತರು ನೋಂದಣಿ ಸಂಖ್ಯೆಯನ್ನು ಮಾಡಿಕೊಂಡು ವಿಮೆಯಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು. ಬೆಳೆ ಸಾಲ ಪಡೆದ ರೈತರನ್ನು ಸಂಬಂಧಿಸಿದ ಬ್ಯಾಂಕ್‌ನವರು ವಿಮೆ ವ್ಯಾಪ್ತಿಗೆ ನೋಂದಾಯಿಸಲಿದ್ದು, ಯೋಜನೆಯಲ್ಲಿ ನೋಂದಾಯಿಸಿಕೊಳ್ಳಲು ಇಚ್ಛಿಸದ ರೈತರು ಸಂಬಂಧಿಸಿದ ಬ್ಯಾಂಕ್ ಶಾಖೆಯ ನೋಂದಣಿಯ ಅಂತಿಮ ದಿನಾಂಕಕ್ಕಿಂತ 7 ದಿನಗಳು ಮುಂಚಿತವಾಗಿ ಮುಚ್ಚಳಿಕೆ ಪತ್ರವನ್ನು ನೀಡಿದಲ್ಲಿ ಅಂತಹ ರೈತರನ್ನು ಯೋಜನೆಯಿಂದ ಕೈಬಿಡಲಾಗುವುದು ಎಂದು ಮಾಹಿತಿ ನೀಡಿದರು.