ತಾಲೂಕಿನ ಕೋಗಿಲಮನೆ ಗ್ರಾಮದಲ್ಲಿ ಬುಧವಾರ ರಾತ್ರಿ ಕಾಡಾನೆಗಳ ದಾಳಿಗೆ ಸಿಲುಕಿ ಬೆಳೆ ನಾಶದೊಂದಿಗೆ ನೀರು ಹರಿಸಲು ಅಳವಡಿಸಿದ್ದ ಪೈಪ್, ಮೋಟಾರ್ ಪಂಪ್ ಸೆಟ್‌ಗಳು ಪುಡಿ ಪುಡಿಯಾಗಿರುವುದು  
ಜಿಲ್ಲೆ

ಕೋಗಿಲಮನೆ ಗ್ರಾಮದಲ್ಲಿ ಬೆಳೆ ನಾಶ

ಬೇಲೂರು: ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಕಾಡಾನೆಗಳ ಹಾವಳಿ ಮಿತಿ ಮೀರಿದ್ದು, ಪ್ರತಿನಿತ್ಯ ಒಂದಿಲ್ಲೊಂದು ಗ್ರಾಮಕ್ಕೆ ನುಗ್ಗುತ್ತಿರುವ ಆನೆಗಳ ಹಿಂಡು ಬೆಳೆ ತಿಂದು, ತುಳಿದು ನಾಶಪಡಿಸುತ್ತಿದೆ. ಇತ್ತೀಚೆಗೆ ಕೋಗಿಲಮನೆ ಗ್ರಾಮದಲ್ಲಿ ಬೆಳೆಯನ್ನು ಹಾಳು ಮಾಡಿದೆ.

ತಾಲೂಕಿನ ಬಿಕ್ಕೋಡು ಹೋಬಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ನಾಲ್ಕೈದು ತಿಂಗಳಿಂದ ಬೀಡು ಬಿಟ್ಟಿರುವ ಕಾಡಾನೆಗಳ ಉಪಟಳ ಹೇಳ ತೀರದಾಗಿದೆ. ಕಳೆದ ನಾಲ್ಕೈದು ದಿನಗಳಿಂದ ಬೇಲೂರು ಪಟ್ಟಣದಿಂದ ಕೇವಲ ಐದಾರು ಕಿಲೋಮೀಟರ್ ದೂರದಲ್ಲಿರುವ ಕೋಗಿಲಮನೆ, ಕೊತ್ತನಹಳ್ಳಿ ಗ್ರಾಮದ ಜಮೀನುಗಳಿಗೆ ಹಾಗೂ ಸಮೀಪದ ತಗರೆ ಅರಣ್ಯ ಪ್ರದೇಶಕ್ಕೆ ಆಗಮಿಸಿ ಬೆಳೆ ನಾಶಪಡಿಸುತ್ತಿವೆ. ಕೋಗಿಲಮನೆ ಗ್ರಾಮಕ್ಕೆ ನುಗ್ಗಿರುವ 20ಕ್ಕೂ ಹೆಚ್ಚಿನ ಕಾಡಾನೆಗಳ ಹಿಂಡು ಗ್ರಾಮದಲ್ಲಿ 22ಕ್ಕೂ ಹೆಚ್ಚಿನ ಎಕರೆಯಲ್ಲಿ ಗ್ರಾಮಸ್ಥರು ಬೆಳೆದಿದ್ದ ಜೋಳ, ಕಾಫಿ, ಅಡಕೆ, ಬಾಳೆ ಬೆಳೆ ಹಾಗೂ ಫಸಲಿಗೆ ಬಂದಿದ್ದ 10 ತೆಂಗಿನ ಮರಗಳನ್ನು ಬುಡ ಸಮೇತ ಬೀಳಿಸಿ ನಾಶಪಡಿಸಿವೆ. ಇದಲ್ಲದೆ ತೋಟಗಳಲ್ಲಿ ಬೆಳೆಗೆ ನೀರು ಹಾಯಿಸಲು ಅಳವಡಿಸಿದ್ದ ಪೈಪ್‌ಗಳು, ಮೋಟಾರ್ ಸೆಟ್, ಪಂಪ್‌ಸೆಟ್ ಅಳವಡಿಸಿದ್ದ ಮನೆ ಸೇರಿದಂತೆ ಇತರ ಸಾಮಗ್ರಿಗಳನ್ನು ನಾಶಪಡಿಸಿದೆ.