ಜಿಲ್ಲೆ

ಚಂಡಿಗೆ ಬದುಕು ಥಂಡಿ; ವರ್ಷಧಾರೆಗೆ ಬೆಳೆ ನಾಶ, ಮನೆಗಳ ಕುಸಿತ

ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಾಗಿರುವ ವಾಯುಭಾರ ಕುಸಿತದ ಪರಿಣಾಮ ಮೂರು ದಿನಗಳಿಂದ ಅಬ್ಬರಿಸುತ್ತಿರುವ ಮಳೆಗೆ ಇಡೀ ಉತ್ತರ ಕರ್ನಾಟಕ ತತ್ತರಿಸಿದೆ. ಬಿಟ್ಟೂ ಬಿಡದೆ ಸುರಿದ ಮಳೆಯಿಂದಾಗಿ ಸಾವಿರಾರು ಎಕರೆ ಬೆಳೆ ನೀರಿನಲ್ಲಿ ಕೊಚ್ಚಿಹೋಗಿದ್ದರೆ, ಸಾವಿರಕ್ಕೂ ಅಧಿಕ ಮನೆಗಳು ಹಾನಿಗೀಡಾಗಿ ಕುಸಿಯುವ ಆತಂಕದಲ್ಲಿದೆ. ಈ ಆಘಾತ ಸಾಲದೆಂಬಂತೆ ಬಾಗಲಕೋಟೆ, ರಾಯಚೂರು ಸೇರಿ 6 ಜಿಲ್ಲೆಗಳಲ್ಲಿ ಇನ್ನೂ 3 ದಿನ ವ್ಯಾಪಕ ಮಳೆಯಾಗುವ ಕುರಿತು ಹವಾಮಾನ ಇಲಾಖೆ ಎಚ್ಚರಿಸಿರುವುದು ಮತ್ತಷ್ಟು ಆತಂಕ ಸೃಷ್ಟಿಸಿದೆ.

ವಿಜಯಪುರ ಜಿಲ್ಲೆಯಲ್ಲೇ ಮಳೆಯಿಂದಾಗಿ 128 ಮನೆಗಳಿಗೆ ಹಾನಿಯಾಗಿದೆ. ಯಾದಗಿರಿಯಲ್ಲಿ 87 ಮನೆಗಳ ಗೋಡೆಗಳು ಬಿರುಕು ಬಿಟ್ಟಿವೆ. ಕೊಪ್ಪಳದಲ್ಲಿ 800 ಮನೆಗಳಿಗೆ ಹಾನಿಯಾಗಿವೆ. ಸಾವಿರಾರು ಹೆಕ್ಟರ್ ಬೆಳೆ ನಾಶವಾಗಿದೆ. ದಾವಣಗೆರೆಯಲ್ಲಿ 200 ಎಕರೆ ಮೆಕ್ಕೆಜೋಳ ಹಾಗೂ 50 ಎಕರೆ ಭತ್ತ ನೀರು ಪಾಲಾಗಿದ್ದು, ಬಳ್ಳಾರಿಯಲ್ಲಿ 40 ಹೆಕ್ಟೇರ್ ಬೆಳೆ ಕೊಚ್ಚಿ ಹೋಗಿದೆ. ಯಾದಗಿರಿ ಗುರುಸಣಗಿ ಬ್ಯಾರೇಜ್​ನಿಂದ ಭೀಮಾ ನದಿಗೆ 40 ಸಾವಿರ ಕ್ಯೂಸೆಕ್ ನೀರು ಬಿಡಲಾಗಿದೆ. ಇದರಿಂದ ನದಿ ಪಾತ್ರದ ಗ್ರಾಮಸ್ಥರಲ್ಲಿ ಮತ್ತೆ ಪ್ರವಾಹ ಭೀತಿ ಎದುರಾಗಿದೆ. ರಾಯಚೂರು ನಾರಾಯಣಪುರ ಡ್ಯಾಂನಿಂದ ಕೃಷ್ಣಾ ನದಿಗೆ 91 ಸಾವಿರ ಕ್ಯೂಸೆಕ್ ನೀರು ಹರಿಬಿಟ್ಟಿದ್ದರಿಂದ ದೇವದುರ್ಗ ತಾಲೂಕು ಹೂವಿನಹೆಡಗಿಯ ಶ್ರೀ ಗಡ್ಡೆಗೂಳಿ ಬಸವೇಶ್ವರ ದೇವಸ್ಥಾನ ಮುಳುಗಡೆಯಾಗಿದೆ. ಹಲವೆಡೆ ಜಲಾವೃತಗೊಂಡು ಜನ ಸಂಚಾರ ಕಷ್ಟವಾಗಿದೆ. ಜಲಾಶಯಗಳು ತುಂಬಿ ಹರಿಯುತ್ತಿರುವುದರಿಂದ ಪ್ರವಾಹಭೀತಿ ಶುರುವಾಗಿದೆ. ಕರಾವಳಿ ತೀರದಲ್ಲಿ ಗಂಟೆಗೆ 40-45 ಕಿಮೀ ಗಾಳಿ ಬೀಸುತ್ತಿರುವ ಹಿನ್ನೆಲೆಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಇಲಾಖೆ ಎಚ್ಚರಿಕೆ ನೀಡಿದೆ.

ಪೂರ್ವದಿಂದ ಪಶ್ಚಿಮ ದಿಕ್ಕಿನ ಕಡೆ ಮಾರುತಗಳು ಚಲಿಸುತ್ತಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತ ಗೋವಾ ಮತ್ತಿತರ ರಾಜ್ಯಗಳಲ್ಲಿ ಭಾರಿ ಮಳೆಯಾಗಲಿದೆ. ಇದರ ಪರಿಣಾಮ ರಾಜ್ಯದಲ್ಲಿ ಮಳೆಯಾಗುತ್ತಿದೆ. ಆದರೆ, ಒಂದು ವೇಳೆ ಗಾಳಿಯ ವೇಗ ಹೆಚ್ಚಾದರೆ ಚಂಡಮಾರುತ ಉಂಟಾಗುವ ಸಾಧ್ಯತೆ ಇದೆ ಎಂದು ಇಲಾಖೆ ನಿರ್ದೇಶಕ ಸಿ.ಎಸ್.ಪಾಟೀಲ ಮಾಹಿತಿ ನೀಡಿದರು.

6 ಜಿಲ್ಲೆಗಳಲ್ಲಿ ರೆಡ್ ಅಲರ್ಟ್

ಬಾಗಲಕೋಟೆ ಮತ್ತು ವಿಜಯಪುರದಲ್ಲಿ ಮುಂದಿನ 48 ಗಂಟೆ ಹಾಗೂ ಬೀದರ್, ಕಲಬುರಗಿ, ರಾಯಚೂರು, ಯಾದಗಿರಿಯಲ್ಲಿ ಮುಂದಿನ 24 ಗಂಟೆ ಭಾರಿ ಮಳೆಯಾಗಲಿರುವ ಹಿನ್ನೆಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಬೆಳಗಾವಿ, ಧಾರವಾಡ, ಗದಗ ಮತ್ತು ಹಾವೇರಿಯಲ್ಲಿ ಅ.15ರಂದು ವ್ಯಾಪಕ ಮಳೆಯಾಗಲಿದೆ. ಈ ಅವಧಿಯಲ್ಲಿ 204.5 ಮಿಮೀ ಮಳೆಯಾಗುವ ಸಾಧ್ಯತೆ ಇದೆ.

ಕರಾವಳಿಗೆ ಆರೆಂಜ್ ಅಲರ್ಟ್

ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದಲ್ಲಿ ಮುಂದಿನ 48 ಗಂಟೆ ಹಾಗೂ ಮಲೆನಾಡು ಜಿಲ್ಲೆಗಳಾದ ಚಿಕ್ಕಮಗಳೂರು, ಕೊಡಗು ಮತ್ತು ಶಿವಮೊಗ್ಗದಲ್ಲಿ ಮುಂದಿನ 24 ಗಂಟೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಬಳ್ಳಾರಿ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಹಾಸನ ಮತ್ತು ತುಮಕೂರಿನಲ್ಲಿ ಅ.14ರಂದು ಯೆಲ್ಲೋ ಅಲರ್ಟ್ ಇರಲಿದೆ.

ಆಂಧ್ರ, ತೆಲಂಗಾಣದಲ್ಲಿ ಭಾರಿ ಮಳೆ

ವಿಜಯವಾಡ: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಆಂಧ್ರ ಪ್ರದೇಶ, ತೆಲಂಗಾಣದ ಹಲವು ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿದೆ. ಈವರೆಗೆ ಇಬ್ಬರು ಸಾವನ್ನಪ್ಪಿದ್ದಾರೆ. ವಿಶಾಖಪಟ್ಟಣದ ನರ್ಶಿಪಟ್ಟಣಂ-ತೂನಿ ಹೆದ್ದಾರಿಯಲ್ಲಿ ಮಹಿಳೆಯೊಬ್ಬರು ಪ್ರವಾಹದಲ್ಲಿ ಕೊಚ್ಚಿಹೋಗಿದ್ದಾರೆ. ವಿಜಯವಾಡದ ಇಂದ್ರಕೀಳಾದ್ರಿಯಲ್ಲಿ ಭೂಕುಸಿತ ಉಂಟಾಗಿದ್ದು, ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಶ್ರೀಕಾಕುಳಂ, ವಿಶಾಖಪಟ್ಟಣ, ವಿಜಯನಗರಂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರಿ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.

ಕ್ರಮಕ್ಕೆ ಸಿಎಂ ಬಿಎಸ್​ವೈ ಸೂಚನೆ
ಬೆಂಗಳೂರು: ಸತತವಾಗಿ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ಅಧಿಕಾರಿಗಳು ಸ್ಥಳದಲ್ಲಿಯೇ ಮೊಕ್ಕಾಂ ಮಾಡಿ ಪರಿಹಾರ ಕಾರ್ಯ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಾಕೀತು ಮಾಡಿದ್ದಾರೆ. ಉತ್ತರ ಕರ್ನಾಟಕ ಸೇರಿದಂತೆ ಹಲವು ಕಡೆಯಲ್ಲಿ ಅತಿವೃಷ್ಟಿಯಿಂದಾಗಿ ಆಸ್ತಿಪಾಸ್ತಿ ಹಾನಿಯಾಗಿದೆ.

ಜನ ಜಾನುವಾರುಗಳಿಗೆ ಸಂಕಷ್ಟ ಎದುರಾಗಿದೆ. ಆದ್ದರಿಂದ ಸಮರೋಪಾದಿಯಲ್ಲಿ ಕೆಲಸ ಮಾಡಲು ಜಿಲ್ಲಾಡಳಿತ ಮುಂದಾಗಬೇಕೆಂದು ಸೂಚಿಸಿದ್ದಾರೆ.

ಅತಿವೃಷ್ಟಿ ಹಾನಿ ಮತ್ತು ಪರಿಹಾರೋಪಾಯ ಕ್ರಮಗಳ ಬಗ್ಗೆ ವರದಿ ತರಿಸಿಕೊಂಡು ಮೇಲುಸ್ತುವಾರಿ ಮಾಡುವಂತೆ ಮುಖ್ಯ ಕಾರ್ಯದರ್ಶಿಗಳಿಗೂ ಸೂಚಿಸಿದ್ದಾರೆ. ಸಂಬಂಧಿಸಿದ ಜಿಲ್ಲಾ ಸಚಿವರು, ಪ್ರವಾಹ ಹಾನಿ ಸ್ಥಳಗಳಿಗೆ ಭೇಟಿ ನೀಡಿ ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಖುದ್ದು ಸಿಎಂ ತಿಳಿಸಿದ್ದಾರೆಂದು ಮುಖ್ಯಮಂತ್ರಿಗಳ ಸಚಿವಾಲಯ ತಿಳಿಸಿದೆ.

ಜಿಲ್ಲಾವಾರು ಹಾನಿ
  • ಯಾದಗಿರಿ: ಸುರಪುರ ತಾಲೂಕಿನಲ್ಲಿ 17 ಮನೆ, ಶಹಾಪುರ 27, ವಡಗೇರಾ 11 ಹಾಗೂ ಹುಣಸಗಿ ತಾಲೂಕಿನಲ್ಲಿ 32 ಮನೆಗಳ ಗೋಡೆ ಬಿರುಕು ಬಿಟ್ಟ ಬಗ್ಗೆ ಜಿಲ್ಲಾಡಳಿತ ತಿಳಿಸಿದೆ. ಇನ್ನು ಕ್ರಮೇಣ ಒಳಹರಿವು ಹೆಚ್ಚುತ್ತಿರುವುದರಿಂದ ನಾರಾಯಣಪುರದ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ಪಾತ್ರಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸಲಾಗುತ್ತಿದೆ. ನದಿ ಪಾತ್ರದ ಗ್ರಾಮಸ್ಥರಲ್ಲಿ ಮತ್ತೆ ಪ್ರವಾಹ ಭೀತಿ ಎದುರಾಗಿದೆ.
  • ಬಾಗಲಕೋಟೆ: 769 ಮನೆಗಳಿಗೆ ಹಾನಿಯಾಗಿದ್ದು, ಗೋಡೆಗಳು ಉರುಳಿ ಬೀಳುತ್ತಿವೆ. ಘಟಪ್ರಭೆ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿದ್ದು, ಮತ್ತೆ ಮುಧೋಳ ತಾಲೂಕಿನ ಮಾಚಕನೂರು ಗ್ರಾಮದ ಪ್ರಸಿದ್ಧ ಹೊಳೆಬಸವೇಶ್ವರ ದೇವಸ್ಥಾನ ಜಲಾವೃತಗೊಂಡಿದೆ. ಪಟ್ಟಣದ ನಾಲ್ಕೈದು ಬಡಾವಣೆಗಳು ಸಂಪೂರ್ಣ ಜಲಾವೃತವಾಗಿವೆ. ಈವರೆಗೆ ಜಿಲ್ಲೆಯಲ್ಲಿ ಒಟ್ಟು 75 ಸಾವಿರ ಹೆಕ್ಟೇರ್​ಗೂ ಅಧಿಕ ಬೆಳೆ ನಾಶವಾಗಿದೆ ಎಂದು ಅಂದಾಜಿಸಲಾಗಿದೆ.
  • ದಾವಣಗೆರೆ: ಸೋಮವಾರ ರಾತ್ರಿ ಸುರಿದ ಮಳೆಯಿಂದ 50 ಎಕರೆ ಭತ್ತ ಹಾಗೂ 200 ಎಕರೆ ಮೆಕ್ಕೆಜೋಳ ಬೆಳೆ ಜಲಾವೃತವಾಗಿದೆ. 14 ಮನೆಗಳು ಭಾಗಶಃ ಹಾನಿಗೀಡಾಗಿವೆ.
  • ರಾಯಚೂರು: ಜಿಲ್ಲೆಯಲ್ಲಿ 4.67 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಹತ್ತಿ ಮತ್ತು ತೊಗರಿ, ಸಜ್ಜೆ, ಸೂರ್ಯಕಾಂತಿ ಬೆಳೆ ಹೆಚ್ಚು ಬಿತ್ತಲಾಗಿದೆ. ಅದರಲ್ಲೂ 99,026 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತಲಾಗಿದೆ. ಈಗ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಈ ಬೆಳೆಗೆ ಹಾನಿ ಉಂಟಾಗಿದೆ. ಹತ್ತಿಯ ಕಾಯಿ ಕೊಳೆತು ಉದುರುತ್ತಿದೆ. ಮತ್ತೊಂದೆಡೆ ತೊಗರಿ ಬೆಳೆಗೆ ಪೋಷಕಾಂಶ ಲಭ್ಯವಾಗದೆ ಹೂವು ಕಟ್ಟುತ್ತಿಲ್ಲ. ನಾರಾಯಣಪುರ ಡ್ಯಾಂನಿಂದ ಕೃಷ್ಣಾ ನದಿಗೆ 91 ಸಾವಿರ ಕ್ಯೂಸೆಕ್ ನೀರು ಹರಿಬಿಟ್ಟಿದ್ದರಿಂದ ದೇವದುರ್ಗ ತಾಲೂಕು ಹೂವಿನಹೆಡಗಿಯ ಶ್ರೀ ಗಡ್ಡೆಗೂಳಿ ಬಸವೇಶ್ವರ ದೇವಸ್ಥಾನ ಮುಳುಗಡೆಯಾಗಿದೆ.
  • ಕೊಪ್ಪಳ: 60 ಹೆಕ್ಟರ್ ಬೆಳೆಹಾನಿಯಾಗಿದೆ. ಭತ್ತ, ಮೆಕ್ಕೆಜೋಳ, ಹತ್ತಿ ಬೆಳೆಗಳು ಹಾನಿಗೀಡಾಗಿವೆ. ಕಳೆದ ಮೂರ್ನಾಲ್ಕು ದಿನದಲ್ಲಿ ಮಳೆಯಿಂದ 1100 ಹೆ. ಬೆಳೆ ಹಾನಿಯಾಗಿದೆ. 800 ಕ್ಕೂ ಅಧಿಕ ಮನೆಗಳು ಹಾನಿಯಾಗಿವೆ. ಕುಷ್ಟಗಿ ತಾಲೂಕಿನ ಪ್ರತ್ಯೇಕ ಘಟನೆಗಳಲ್ಲಿ ಹಳ್ಳದ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಮೂವರು ಬೈಕ್ ಸವಾರರನ್ನು ಸ್ಥಳೀಯರು ಸೋಮವಾರ ರಾತ್ರಿ ರಕ್ಷಿಸಿದ್ದಾರೆ.
  • ಗದಗ: ಕಳೆದ ಮೂರ್ನಾಲ್ಕು ತಿಂಗಳಿಂದ ಸುರಿದ ಮಳೆ ಮತ್ತು ಮಲಪ್ರಭಾ ನದಿ ಮತ್ತು ಬೆಣ್ಣೆಹಳ್ಳಿ ಪ್ರವಾಹದಿಂದ ಶೇಂಗಾ 16 ಸಾವಿರ ಹೆಕ್ಟೇರ್, ಈರುಳ್ಳಿ 7 ಸಾವಿರ ಹೆಕ್ಟೇರ್, ಹತ್ತಿ 9900 ಹೆಕ್ಟೇರ್ ಮತ್ತು ಮೆಕ್ಕೆಜೋಳ 19 ಸಾವಿರ ಹೆಕ್ಟೇರ್ ಬೆಳೆ ಹಾನಿಯಾಗಿದೆ.
  • ವಿಜಯಪುರ: ಸೋಮವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಒಟ್ಟು 128 ಮನೆಗಳಿಗೆ ಹಾನಿಯಾಗಿದೆ.