ಹಲಗೂರು ಸಮೀಪ ಕಾಡಾನೆ ದಾಳಿಗೆ ಅಡಿಕೆ ಬಾಳೆ ನಾಶವಾಗಿರುವುದು. 
ಜಿಲ್ಲೆ

ಕಾಡಾನೆಗಳ ಹಾವಳಿಗೆ ಬೆಳೆ ನಾಶ

ನಾಗೇಶ ಎಸ್

ಹಲಗೂರು: ಸಮೀಪದ ಗಾಣಾಳು ಗ್ರಾಮ ವ್ಯಾಪ್ತಿಯಲ್ಲಿ ಶುಕ್ರವಾರ ರಾತ್ರಿ ಶಿಂಷಾ ಅರಣ್ಯ ಪ್ರದೇಶದಿಂದ ಬಂದ ಕಾಡಾನೆಗಳು ಬಾಳೆ ಮತ್ತು ಅಡಕೆ ಗಿಡಗಳನ್ನು ಹಾಳುಮಾಡಿವೆ.

ಬೆಂಗಳೂರು ಮೂಲದ ಅರುಣ್ ಕುಮಾರ್ ತಮ್ಮ ಒಂದು ಎಕರೆ ಜಮೀನಿನಲ್ಲಿ ಅಡಕೆ ಬೇಸಾಯ ಮಾಡಿದ್ದರು. ಉಪ ಬೆಳೆಯಾಗಿ ಬಾಳೆ ಗಿಡಗಳನ್ನು ಬೆಳೆಸಿದ್ದರು. ಶುಕ್ರವಾರ ತಡ ರಾತ್ರಿ ಆಗಮಿಸಿದ ಎರಡು ಕಾಡಾನೆಗಳು ಮುಳ್ಳು ತಂತಿಯ ಬೇಲಿ, ಬಾಳೆ, ಅಡಕೆ ಬೆಳೆಗೆ ಹಾನಿ ಮಾಡಿವೆ. ಕಾಡು ಪ್ರಾಣಿಗಳ ದಾಳಿಯಿಂದ ಫಸಲು ರಕ್ಷಿಸಿಕೊಳ್ಳುವ ಜತೆಗೆ ನಮ್ಮ ಜೀವ ರಕ್ಷಣೆ ಮಾಡಿಕೊಳ್ಳಬೇಕಾದ ಆತಂಕ ಎದುರಿಸುವಂತಾಗಿದೆ. ದಿನನಿತ್ಯ ಕಾಡಾನೆ, ಜಿಂಕೆ, ಹಂದಿ ದಾಳಿಯಿಂದ ಫಸಲನ್ನು ಉಳಿಸಿಕೊಳ್ಳಲು ರಾತ್ರಿಯಿಡೀ ಜಮೀನಿನಲ್ಲಿ ಉಳಿಯಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ದೊಡ್ಡ ಎಲಚಗೆರೆ ಮಹದೇವ ನೋವು ತೋಡಿಕೊಂಡರು.

ಸಂಬಂಧಿಸಿದ ಇಲಾಖೆ ಅಧಿಕಾರಿ ಸಿದ್ದರಾಮ ಪೂಜಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾಹಿತಿ ಪಡೆದು ಪರಿಹಾರ ನೀಡುವ ಭರವಸೆ ನೀಡಿದರು.