ವಿಜಯಪುರ: ಸಮೀಕ್ಷೆ ಸಮರ್ಪಕವಾಗಿ ಕೈಗೊಳ್ಳದೇ ಪರಿಹಾರ ವಿತರಣೆಯಲ್ಲಾಗುತ್ತಿರುವ ಅನ್ಯಾಯ ಸರಿಪಡಿಸಲು ಆಗ್ರಹಿಸಿ ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶದ ಪದಾಧಿಕಾರಿಗಳು ಗುರುವಾರ ಜಿಲ್ಲಾಧಿಕಾರಿ ಟಿ.ಭೂಬಾಲನ್‌ಗೆ ಮನವಿ ಸಲ್ಲಿಸಿದರು.
ಸಂಘಟನೆಯ ಉತ್ತರ ಪ್ರಾಂತ ಉಪಾಧ್ಯಕ್ಷ ಮಲ್ಲನಗೌಡ ಪಾಟೀಲ ಮಾತನಾಡಿ, ಬಸವನ ಬಾಗೇವಾಡಿ ತಾಲೂಕಿನ ಡೋಣೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಬೊಮ್ಮನಹಳ್ಳಿ ಗ್ರಾಮದಲ್ಲಿ ಬೆಳೆ ವಿಮೆ ಪರಿಹಾರಕ್ಕಾಗಿ ಕೈಗೊಳ್ಳಲಾದ ಸಮೀಕ್ಷೆ ಅಸಮರ್ಪಕವಾಗಿದೆ. ಹೀಗಾಗಿ ಸಮರ್ಪಕವಾಗಿ ಸಮೀಕ್ಷೆ ನಡೆಸಿ ಬೆಳೆ ಪರಿಹಾರ ಕಲ್ಪಿಸಬೇಕೆಂದು ಮನವಿ ಮಾಡಿದರು.
ಬೊಮ್ಮನಹಳ್ಳಿ ಗ್ರಾಮಕ್ಕೆ ಪ್ರತಿ ಎಕರೆಗೆ 1300-1700ರೂ. ವರೆಗೆ ಪರಿಹಾರ ನೀಡಿದ್ದಾರೆ. ಕೆಲವು ಕಡೆ ಹೆಚ್ಚಿನ ಪರಿಹಾರ ನೀಡಿದ್ದಾರೆ. ಸರಿಯಾಗಿ ಬೆಳೆ ವೀಕ್ಷಣೆ ಮಾಡದೆ ಪರಿಹಾರ ವಿಮೆ ನೀಡಿದ್ದಾರೆ. ಹೀಗಾಗಿ ತಾರತಮ್ಯ ಸರಿಪಡಿಸಿ ಹೆಚ್ಚಿನ ಪರಿಹಾರ ಕಲ್ಪಿಸಬೇಕೆಂದು ಮನವಿ ಮಾಡಿದರು.
ಮುಖಂಡರಾದ ಸಚಿನ ಪಾಟೀಲ, ಯಮನಪ್ಪ ಹಾದಿಮನಿ, ಆರ್.ಎಚ್. ಅಕ್ಕಾಗೋಳ, ಬಸವರಾಜ ಡೊಮನಾಳ, ಕೆ.ಟಿ. ಅಗಸರ, ಲಗಮಣ ತಳವಾರ, ಆರ್.ಎಂ. ವಾಲಿಕಾರ, ಪಿ.ಬಿ. ಗುನ್ನಾಪೂರ, ಶಂಕ್ರಪ್ಪ ಹಿಪ್ಪರಗಿ, ನಿಂಗು ತುಂಬಗಿ, ಭೀಮರಾವ ತಳವಾರ, ನಾನಾಗೌಡ ಮದರಗಿ, ಅಣ್ಣಪ್ಪ ಮಧಭಾವಿ, ಬಿ.ಬಿ. ಹಾದಿಮನಿ ಮತ್ತಿತರರಿದ್ದರು.