ಜಿಲ್ಲೆ

ಭತ್ತ ಕಟಾವು ಯಂತ್ರಕ್ಕೆ ಡಿಮಾಂಡ್

ಹರೀಶ್ ಮೋಟುಕಾನ ಮಂಗಳೂರು

ದೀಪಾವಳಿ ಸಮೀಪಿಸುತ್ತಿರುವಂತೆ ಕರಾವಳಿಯಲ್ಲಿ ಭತ್ತ ಕೃಷಿ ಕಟಾವು ಪ್ರಕ್ರಿಯೆ ಚುರುಕುಗೊಂಡಿದೆ. ಬಹುತೇಕ ಭತ್ತ ಕೃಷಿ ಒಂದೇ ಬಾರಿಗೆ ಕಟಾವಿಗೆ ಬಂದಿರುವುದರಿಂದ ಹಾಗೂ ಮಳೆಯೂ ವಿರಾಮ ಘೋಷಿಸಿರುವುದರಿಂದ ಭತ್ತದ ಕಟಾವು ಯಂತ್ರಕ್ಕೆ ಭಾರಿ ಬೇಡಿಕೆ ಬಂದಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 11,247 ಹೆಕ್ಟೇರ್ ಹಾಗೂ ಉಡುಪಿ ಜಿಲ್ಲೆಯಲ್ಲಿ 35,756 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಕೃಷಿ ಮಾಡಲಾಗಿದೆ. ಪ್ರಸ್ತುತ ಕಟಾವಿಗೆ ಬಂದಿದ್ದು, ಕೂಲಿಯಾಳುಗಳ ಕೊರತೆ ಇರುವುದರಿಂದ ಯಂತ್ರವನ್ನೇ ನೆಚ್ಚಿಕೊಂಡಿದ್ದಾರೆ. ಕೃಷಿ ಇಲಾಖೆಯಲ್ಲಿ ಸೀಮಿತ ಯಂತ್ರಗಳು ಇರುವುದರಿಂದ ಖಾಸಗಿಯವರ ಅವಲಂಬನೆ ಅನಿವಾರ್ಯ.

ಹೊರ ರಾಜ್ಯ ಹಾಗೂ ಜಿಲ್ಲೆಗಳಿಂದ ಖಾಸಗಿ ಯಂತ್ರಗಳು ಬಂದಿದ್ದು, ರೈತರು ಕಟಾವು ಯಂತ್ರ ಪಡೆಯಲು ಪೈಪೋಟಿ ನಡೆಸುತ್ತಿದ್ದಾರೆ. ಯಂತ್ರದ ಮಾಲೀಕರು ಹಾಗೂ ಮಧ್ಯವರ್ತಿಗಳು ಇದರ ಲಾಭ ಪಡೆಯುತ್ತಿದ್ದಾರೆ. ಹೆಚ್ಚಿನ ಬಾಡಿಗೆ ನಿಗದಿ ಮಾಡಿ ರೈತರಿಂದ ಲೂಟಿ ಮಾಡಲಾರಂಭಿಸಿದ್ದಾರೆ. ಇದರ ನಿಯಂತ್ರಣ ಇಲಾಖೆಗೂ ಸಾಧ್ಯವಾಗುತ್ತಿಲ್ಲ.

ಮಧ್ಯವರ್ತಿಗಳ ಕಾಟ: ಕೃಷಿ ಇಲಾಖೆ ಬಳಿ ಉಡುಪಿಯಲ್ಲಿ 8 ಹಾಗೂ ದಕ್ಷಿಣ ಕನ್ನಡದಲ್ಲಿ 7 ಕಟಾವು ಯಂತ್ರಗಳಷ್ಟೇ ಇವೆ. ಎಲ್ಲರಿಗೂ ಇದನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಖಾಸಗಿಯಾಗಿ ತಮಿಳುನಾಡು, ದಾವಣಗೆರೆ, ರಾಯಚೂರು ಮೊದಲಾದ ಕಡೆಗಳಿಂದ ಕಟಾವು ಯಂತ್ರಗಳು ಕರಾವಳಿಗೆ ಬಂದಿವೆ. ಕೃಷಿ ಇಲಾಖೆ ಗಂಟೆಗೆ 1800 ರೂ.ಹಾಗೂ ಸಾಗಾಟ ವೆಚ್ಚವನ್ನು ನಿಗದಿ ಮಾಡಿದೆ. ಆದರೆ ಖಾಸಗಿಯವರು 2,400 ರೂ.ನಿಂದ 2,600 ರೂ. ತನಕ ಬಾಡಿಗೆ ಪಡೆಯುತ್ತಿದ್ದಾರೆ. ಯಂತ್ರಗಳ ಕೊರತೆ ಹಾಗೂ ರೈತರ ಬೇಡಿಕೆಯನ್ನು ಮಧ್ಯವರ್ತಿಗಳು ಬಂಡವಾಳವನ್ನಾಗಿಸಿ ಖಾಸಗಿ ಮಾಲೀಕರನ್ನು ಸಂಪರ್ಕಿಸಿ ದರ ನಿಗದಿ ಮಾಡುತ್ತಾರೆ. ದಿನಕ್ಕೆ/ಗಂಟೆಗೆ ಇಂತಿಷ್ಟು ಕಮಿಷನ್ ಕೊಡಿ, ರೈತರಿಂದ 50 ಅಥವಾ 100 ರೂ.ಹೆಚ್ಚು ಪಡೆದುಕೊಳ್ಳಿ ಎಂಬ ಸಲಹೆಯನ್ನೂ ನೀಡುತ್ತಿದ್ದಾರೆ. ಕಟಾವು ಯಂತ್ರದ ಮಾಲೀಕರು ನಿಗದಿ ಮಾಡಿದ ಬಾಡಿಗೆ ದರಕ್ಕಿಂತ ಹೆಚ್ಚಿನ ದರವನ್ನು ಮಧ್ಯವರ್ತಿಗಳೇ ನಿಗದಿ ಮಾಡುತ್ತಿರುವುದು ರೈತರಿಗೆ ಹೊರೆಯಾಗಿದೆ.

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗೆ 350ರಷ್ಟು ಖಾಸಗಿ ಭತ್ತದ ಕಟಾವು ಯಂತ್ರಗಳು ವಿವಿಧ ಕಡೆಗಳಿಂದ ಬಂದಿವೆ. ಇಲಾಖೆಯಲ್ಲಿ 15 ಯಂತ್ರಗಳಿವೆ. ಎಲ್ಲ ಕೃಷಿಕರಿಗೆ ಪೂರೈಸಲು ಸಾಧ್ಯವಾಗುತ್ತಿಲ್ಲ. ಇಲಾಖೆಯಲ್ಲಿ ಯಂತ್ರದ ಬಾಡಿಕೆ ಗಂಟೆಗೆ 1800 ರೂ. ಮತ್ತು ಸಾಗಾಟ ವೆಚ್ಚವನ್ನು ನಿಗದಿ ಮಾಡಿದ್ದೇವೆ. ಖಾಸಗಿ ನಿಯಂತ್ರಣ ನಮ್ಮ ವ್ಯಾಪ್ತಿಯಲ್ಲಿಲ್ಲ. ಹಲವು ರೈತರು ಒಟ್ಟಾಗಿ ಭತ್ತ ಕಟಾವು ನಡೆಸುವ ಮೂಲಕ ಕಡಿಮೆ ದರ ನಿಗದಿ ಮಾಡಿ ಖಾಸಗಿ ಮಾಲೀಕರಿಗೆ ನೀಡಬೇಕು. -ಕೆಂಪೇಗೌಡ , ಉಪ ನಿರ್ದೇಶಕರು, ಕೃಷಿ ಇಲಾಖೆ, ಉಡುಪಿ ದಕ್ಷಿಣ ಕನ್ನಡ ಜಿಲ್ಲೆಯ ಭತ್ತದ ಕೃಷಿಕರು ಹೊರ ರಾಜ್ಯ ಹಾಗೂ ಜಿಲ್ಲೆಯ ಬಾಡಿಗೆ ಯಂತ್ರಗಳನ್ನು ಅವಲಂಬಿಸುವುದು ಕಡಿಮೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಕೃಷಿಕರಿಗೆ ಕಡಿಮೆ ಬಾಡಿಗೆಯಲ್ಲಿ ಯಂತ್ರಗಳನ್ನು ಪೂರೈಕೆ ಮಾಡಲಾಗುತ್ತಿದೆ. ಆದರೆ ಉಡುಪಿ ಜಿಲ್ಲೆಯಲ್ಲಿ ಭತ್ತ ಬೆಳೆಯುವ ಪ್ರಮಾಣವೂ ಅಧಿಕ. ಹಾಗಾಗಿ ಹೊರಗಿನಿಂದ ಯಂತ್ರಗಳನ್ನು ತಂದು ಹೆಚ್ಚಿನ ಬಾಡಿಗೆ ಪಡೆಯುತ್ತಾರೆ. ಕಡಿಮೆ ಪ್ರಮಾಣದಲ್ಲಿ ಗದ್ದೆ ಹೊಂದಿರುವವರಿಗೆ ಇದರಿಂದ ನಷ್ಟವಾಗುತ್ತದೆ. -ದಿವಾಕರ ಶೆಟ್ಟಿ, ಭತ್ತದ ಕೃಷಿಕ, ಕುಪ್ಪಿಲ, ಬಂಟ್ವಾಳ