ಜಿಲ್ಲೆ

ಸರ್ವೆ ಗೌರಿ ಹೊಳೆಯಲ್ಲಿ ಮೊಸಳೆ ಪ್ರತ್ಯಕ್ಷ : ಕಾಡಾನೆ ಹಾವಳಿಯ ನಡುವೆ ಇನ್ನೊಂದು ಆತಂಕ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಪುತ್ತೂರು ಗ್ರಾಮಾಂತರ/ಕಡಬ

ಪುತ್ತೂರು- ಸವಣೂರು- ಸುಬ್ರಹ್ಮಣ್ಯ ರಸ್ತೆ ಬದಿಯಲ್ಲಿ ಹಾದು ಹೋಗುವ ಸರ್ವೆ ಗೌರಿ ಹೊಳೆಯಲ್ಲಿ ನದಿಯ ನಡುವಣ ಭಾಗದಲ್ಲಿನ ಮರಳಿನ ರಾಶಿಯಲ್ಲಿ ಮೊಸಳೆಯೊಂದು ಸೋಮವಾರ ಕಾಣಿಸಿಕೊಂಡಿದೆ.

ಮೊಸಳೆ ಇರುವುದನ್ನು ನೋಡಿರುವ ಸ್ಥಳೀಯರಾದ ಸರ್ವೆಯ ಕೇಶವ ಚಂದ್ರ ಎಂಬುವರು ಈ ಕುರಿತು ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ಮೊಸಳೆಯ ಫೋಟೋ, ವಿಡಿಯೋ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಸರ್ವೆ ಗೌರಿ ಹೊಳೆಯ ಒಂದು ಬದಿ ಪುತ್ತೂರು ತಾಲೂಕು ವ್ಯಾಪ್ತಿಯಲ್ಲಿದ್ದರೆ, ಮತ್ತೊಂದು ಬದಿ ಕಡಬ ತಾಲೂಕು ವ್ಯಾಪ್ತಿಯಲ್ಲಿದೆ. ಕಳೆದ ವರ್ಷವೂ ಡಿಸೆಂಬರ್‌ನಲ್ಲಿ ಸರ್ವೆ ಗೌರಿ ಹೊಳೆಯಲ್ಲಿ ಮೊಸಳೆ ಕಾಣಿಸಿಕೊಂಡಿತ್ತು. ಮತ್ತೆ ಅಲ್ಲಿ ಮೊಸಳೆ ಪ್ರತ್ಯಕ್ಷವಾಗಿರುವುದರಿಂದ ಹೊಳೆಯ ಭಾಗದ ಕೃಷಿಕರಲ್ಲಿ ಭಯದ ವಾತಾವರಣ ಸೃಷ್ಟಿಸಿದೆ.

ಕೋಳಿಯಂಗಡಿ, ಮಾಸದಂಗಡಿ ನಡೆಸುವ ಕೆಲವರು, ಕೆಲವೊಂದು ಸಮಾರಂಭ ನಡೆಸುವವರು ತ್ಯಾಜ್ಯ ತಂದು ಸರ್ವೆ ಗೌರಿ ಹೊಳೆಗೆ ಎಸೆಯುತ್ತಿದ್ದಾರೆ. ಸರ್ವೆಗೆ 3 ಕಿ.ಮೀ. ದೂರದಲ್ಲಿರುವ ಕುಮಾರಧಾರಾ ನದಿಯಲ್ಲಿ ಹಲವು ಮೊಸಳೆಗಳಿದ್ದು, ಅಲ್ಲಿಂದ ಮೊಸಳೆ ಆಹಾರ ಹುಡುಕಿಕೊಂಡು ತ್ಯಾಜ್ಯ ಎಸೆಯುವ ಭಾಗಕ್ಕೆ ಬರುತ್ತಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಮೊಸಳೆಯನ್ನು ಸ್ಥಳಾಂತರಿಸಬೇಕು ಎಂದು ಆಗ್ರಹಿಸಿದ್ದಾರೆ.