ಹೊಳೆಆಲೂರ: ಕಳೆದ ನವೆಂಬರ್ನಲ್ಲಿ ಹೊಳೆಆಲೂರಿನ ಮಲಪ್ರಭಾ ನದಿಯ ದಂಡೆ ಮೇಲೆ ಮೊಸಳೆ ಕಾಣಿಸಿಕೊಂಡು ಆತಂಕ ಮೂಡಿಸಿದ್ದ ಘಟನೆ ಮಾಸುವ ಮುನ್ನವೇ, ಮೆಣಸಗಿ ಗ್ರಾಮದಲ್ಲಿ ಗುರುವಾರ ಸಂಜೆ ಅಂದಾಜು 6 ಅಡಿ ಉದ್ದದ ಮೊಸಳೆ ಪ್ರತ್ಯಕ್ಷವಾಗಿದೆ.
ಇದರಿಂದ ಸುತ್ತಮುತ್ತಲಿನ ಗ್ರಾಮಗಳ ಜನರು ಭಯಭೀತರಾಗಿದ್ದಾರೆ. ಮೊಸಳೆ ಕಾಣಿಸಿದ ಪ್ರದೇಶದಲ್ಲಿ ನದಿಯ ಎರಡೂ ದಂಡೆಗಳ ಮೇಲೆ 70-80 ರೈತರ ಪಂಪ್ಸೆಟ್ಗಳಿದ್ದು, ಹೊಲಗಳಿಗೆ ನೀರು ಹಾಯಿಸಲು ನಿತ್ಯ ನದಿ ದಡಕ್ಕೆ ತೆರಳಲೇಬೇಕಿದೆ. ಮೊಸಳೆ ಕಾಣಿಸಿದ ವಿಷಯ ತಿಳಿಯುತ್ತಿದ್ದಂತೆ ಎಲ್ಲ ರೈತರು ತಮ್ಮ ಪಂಪ್ಸೆಟ್ ಬಂದ್ ಮಾಡಿ ಮನೆಯತ್ತ ತೆರಳಿದರು.
ನವೆಂಬರ್ನಲ್ಲಿ ಹೊಳೆಆಲೂರಿ ನಲ್ಲಿ ಕಾಣಿಸಿದ್ದ ಏಳು ಅಡಿ ಉದ್ದದ ಮೊಸಳೆಗಾಗಿ ಅರಣ್ಯ ಇಲಾಖೆ ಸಿಬ್ಬಂದಿ 3 ದಿನ ಶೋಧ ನಡೆಸಿದರೂ ಪತ್ತೆಯಾಗಿರಲಿಲ್ಲ. ಆದರೆ, ನಾಲ್ಕನೆಯ ದಿನ ಮೊಸಳೆಯ ಶವ ಪತ್ತೆಯಾಗಿತ್ತು. ನದಿಯಲ್ಲಿ ನೀರು ಅಷ್ಟೊಂದು ಆಳವಾಗಿಲ್ಲ. ಬಹುಶಃ ಆಗಸ್ಟ್ನಲ್ಲಿ ಉಂಟಾದ ನೆರೆ ಹಾವಳಿ ಸಂದರ್ಭದಲ್ಲಿ ನವಿಲುತೀರ್ಥ ಅಣೆಕಟ್ಟಿನಿಂದ ಮೊಸಳೆಗಳು ಬಂದಿರಬಹುದು ಎಂದು ಸಾರ್ವಜನಿಕರು ಶಂಕೆ ವ್ಯಕ್ತಪಡಿಸುತ್ತಾರೆ.
ಎರಡು ತಿಂಗಳಲ್ಲಿ ಎರಡನೇ ಬಾರಿಗೆ ಮೊಸಳೆ ಪ್ರತ್ಯಕ್ಷರಾಗಿರುವುದು ಮೆಣಸಗಿ, ಶಿರೋಳ, ಹೊಳೆಮಣ್ಣೂರ, ಕಿತ್ತಲಿ ಗ್ರಾಮಗಳ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಅರಣ್ಯ ಇಲಾಖೆಗೆ ಗ್ರಾಮಸ್ಥರು ಮಾಹಿತಿ ನೀಡಿದ್ದು, ಗದಗನಿಂದ ಶುಕ್ರವಾರ ಅರಣ್ಯ ಇಲಾಖೆಯ ಸಿಬ್ಬಂದಿ ಆಗಮಿಸಿ ಶೋಧ ನಡೆಸಲಿದ್ದಾರೆ.