ಬೆಳಗಾವಿ: ಸುಫಾರಿ ಪಡೆದು ಸರಣಿ ಕೊಲೆ ಮಾಡುತ್ತಿದ್ದ ಹಂತಕರನ್ನು ಹೆಡೆಮುರಿ ಕಟ್ಟಿದ ಯಮಕನಮರಡಿ ಪೊಲೀಸರು, ಮೂರು ವರ್ಷಗಳ ಅವಧಿಯಲ್ಲಿ ಮೂರು ಸುಫಾರಿ ಕೊಲೆ ಮಾಡಿದ ಖತರನಾಕ್ ಗ್ಯಾಂಗ್ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಸುಫಾರಿ ಹಂತಕರಾದ ಹುಕ್ಕೇರಿ ತಾಲೂಕಿನ ಹಟ್ಟಿಆಲೂರದ ಆಕಾಶ ಬಸಲಿಂಗಪ್ಪ ಗೋಕಾವಿ, ರಮೇಶ ಲಗಮಪ್ಪಾ ಮಾಳಗಿ ಹಾಗೂ ಪಾಶ್ಚಾಪುರದ ಅಪ್ಪಣ್ಣ ಮುಶೆಪ್ಪ ನಾಯಿಕ, ಸುಫಾರಿ ನೀಡಿದ ಮೃತರ ಪತ್ನಿ ಮಾಲಾ ಸುಟಕಣ್ಣವರ, ಮೃತರ ಪತ್ನಿ ಯಲ್ಲವ್ವ ವಿಠ್ಠಲ ಮರೆಪ್ಪಗೋಳ ಹಾಗೂ ಈಕೆಯ ಪ್ರಿಯಕರ ನಾಗಪ್ಪ ಮಾಳಗಿ ಎಂಬಾತರನ್ನು ಹೆಡೆಮುರಿ ಕಟ್ಟಿದ ಪೊಲೀಸರು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
ಪತ್ನಿ ಕೊಟ್ಟಿದ್ದಳು 70 ಸಾವಿರ ರೂ.: ಹುಕ್ಕೇರಿ ತಾಲೂಕಿನ ಹಳ್ಳದಕೇರಿಯ ಹಾಲಿ ಹಟ್ಟಿಆಲೂರದ ಮಹಾಂತೇಶ ಭೀಮಪ್ಪ ಸುಟಕಣ್ಣವರ(34) ಎಂಬಾತ 2024 ಏಪ್ರೀಲ್‌ನಲ್ಲಿ ಮಲಗಿದ್ದಲ್ಲಿಯೇ ಮೃತಪಟ್ಟಿದ್ದನು. ಈ ಬಗ್ಗೆ ಈತನ ಸಹೋದರ ಕಲ್ಪಪ್ಪ ಸುಟಗನ್ನವರ ಜ. 10ರಂದು ಠಾಣೆಗೆ ಬಂದು ದೂರು ನೀಡಿ, ಮೃತನ ಹೆಂಡತಿ ಹಾಗೂ ಇತರರ ಮೇಲೆ ಸಂಶಯದ ಬಗ್ಗೆ ದೂರು ನೀಡಿದ್ದನು. ಇದರ ಬೆನ್ನತ್ತಿದ ಪೊಲೀಸರು ಪತ್ನಿ ಮಾಲಾ ಮಹಾಂತೇಶ ಸುಟಕಣ್ಣವರಳನ್ನು ವಿಚಾರಣೆಗೆ ಒಳಪಡಿಸಿದಾಗ, ತನ್ನ ಪತಿ ಕುಡಿದು ಕಿರುಕುಳ ನೀಡುತ್ತಿದ್ದನು. ಹೀಗಾಗಿ ಆಕಾಶ ಗೋಕಾವಿ ಎಂಬಾತನಿಗೆ 70 ಸಾವಿರ ರೂ. ಸುಫಾರಿ ಕೊಟ್ಟು ಕೊಲೆ ಮಾಡಿಸಿದ್ದಾಗಿ ಒಪ್ಪಿಕೊಂಡಿದ್ದಾಳೆ. 30 ಸಾವಿರ ರೂ. ಫೋನ್‌ಪೇ ಮಾಡಿದ್ದಳು.
ಆಕಾಶ ಈತನ ಸ್ನೇಹಿತರಾದ ರಮೇಶ ಮಾಳಗಿ ಹಾಗೂ ಅಪ್ಪಣ್ಣ ನಾಯಿಕ ಸೇರಿ ಮಹಾಂತೇಶನಿಗೆ ಸಾರಾಯಿ ಕುಡಿಸಿ ಹಗ್ಗದಿಂದ ಕುತ್ತಿಗೆ ಹಿಸುಕಿ ಕೊಲೆ ಮಾಡಿ ಮೃತದೇಹವನ್ನು ಮನೆಗೆ ತಂದು ಕೊಟ್ಟಿದ್ದರು. ಪತ್ನಿ ಮಾಲಾ, ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ನಾಟಕವಾಡಿ ಅಂತ್ಯಕ್ರಿಯೆ ನಡೆಸಿದ್ದಳು.
ಗಂಡನ ಕೊಲ್ಲಲು 65 ಸಾವಿರ ರೂ. ಸುಫಾರಿ: ಹಟ್ಟಿಆಲೂರದ ಯಲ್ಲವ್ವ ನಾಗಪ್ಪ ಮರೆಪ್ಪಗೋಳ ಹಾಗೂ ನಾಗಪ್ಪ ಸಿದ್ದಪ್ಪ ಮಾಳಗಿ ಎಂಬವರ ಮಧ್ಯೆ ಅನೈತಿಕ ಸಂಬAಧ ಇತ್ತು. ಇದಕ್ಕೆ ಪತಿ ನಾಗಪ್ಪ ವಿಠ್ಠಲ ಮರೆಪ್ಪಗೋಳ ಅಡ್ಡಿಪಡಿಸುತ್ತಿದ್ದಾನೆ ಎಂದು ಯಲ್ವವ್ವ ಹಾಗೂ ಪ್ರಿಯಕರ ಸೇರಿ ರಮೇಶ, ಅಪ್ಪಣ್ಣಗೆ 3 ಲಕ್ಷ ರೂ. ಸುಫಾರಿ ಕೊಡಲು ಒಪ್ಪಿ ಮುಂಗಡವಾಗಿ 65 ಸಾವಿರ ರೂ. ಹಣ ಕೊಟ್ಟಿದ್ದರು. ನಾಗಪ್ಪ ಮರೆಪ್ಪಗೋಳನನ್ನು ಸಾವಳಗಿ ಜಾತ್ರೆಗೆ ಕರೆದುಕೊಂಡು ಹೋಗಿ ಸಾರಾಯಿ ಕುಡಿಸಿ ಹಗ್ಗದಿಂದ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದರು. ಮೃತದೇಹವನ್ನು ಪರಕನಟ್ಟಿ ಸಮೀಪ ರೈಲ್ವೆ ಹಳಿ ಮೇಲೆ ಮಲಗಿಸಿ ಆತ್ಮಹತ್ಯೆಯನ್ನಾಗಿ ಬಿಂಬಿಸಿದ್ದರು.
ಅಣ್ಣನನ್ನೇ ಕೊಂದ ಕಿರಾತಕ: ಹಟ್ಟಿಆಲೂರದ ಆರೋಪಿ ರಮೇಶ ಲಗಮಪ್ಪ ಮಾಳಗಿಯ ಹಿರಿಯಣ್ಣ ವಿಠ್ಠಲ ಮಾಳಗಿ ಸಾರಾಯಿ ಚಟಕ್ಕೆ ಅಂಟಿಕೊAಡಿದ್ದನು. ತನ್ನ ಜಮೀನು 22 ಲಕ್ಷ ರೂ. ಗೆ ಅಡವಿಟ್ಟಿದ್ದರಿಂದ ಅಣ್ಣ ವಿಠ್ಠಲನ ಮೇಲೆ ಕುಪಿತಗೊಂಡಿದ್ದನು. 2022ರಲ್ಲಿ ರಮೇಶ ತನ್ನ ಸ್ನೇಹಿತರಾದ ಆಕಾಶ ಗೋಕಾವಿ, ಅಪ್ಪಣ್ಣ ನಾಯಿಕನೊಂದಿಗೆ ಸೇರಿ ವಿಠ್ಠಲನನ್ನು ಪಾಶ್ಚಾಪೂರ ಹತ್ತಿರದ ಕುಂದರಗಿ ಗುಡ್ಡಕ್ಕೆ ಕರೆದುಕೊಂಡು ಹೋಗಿ ಸಾರಾಯಿ ಕುಡಿಸಿದ್ದಾರೆ. ಕುತ್ತಿಗೆಗೆ ಹಗ್ಗದಿಂದ ಬಿಗಿದು ಕೊಲೆ ಮಾಡಿ ಹೆಣವನ್ನು ಬೈಕ್ ಮೇಲೆ ತೆಗೆದುಕೊಂಡು ಬಂದು ಅವರ ಮನೆಯ ಹತ್ತಿರದ ರಸ್ತೆಯಲ್ಲಿ ಕೆಡವಿ ಅಪಘಾತ ಮಾಡಿಕೊಂಡು ಮೃತಪಟ್ಟಿರುವುದಾಗಿ ಕತೆ ಕಟ್ಟಿದ್ದಾರೆ. ಪೊಲೀಸರಿಗೂ ದೂರು ನೀಡದೇ ತರಾತುರಿಯಲ್ಲಿ ಮೃತದೇಹ ಸುಟ್ಟು ಅಂತ್ಯಕ್ರಿಯೆ ಮಾಡಿ ಸಾಕ್ಷಿ ಪುರಾವೆ ನಾಶಪಡಿಸಿದ್ದರು.
ನಾಗಪ್ಪ ಮರೆಪ್ಪಗೋಳ ಸಾವಿನ ಬಗ್ಗೆ ಸಹೋದರ ಅಪ್ಪಯ್ಯ ಮರೆಪ್ಪಗೋಳ ದೂರು ನೀಡಿದ್ದಕ್ಕೆ ನಾಗಪ್ಪ ಸಿದ್ದಪ್ಪ ಮಾಳಗಿ, ಯಲ್ಲವ್ವ ನಾಗಪ್ಪ ಮರೆಪ್ಪಗೋಳನ್ನು ಬಂಧಿಸಲಾಗಿದೆ. ವಿಠ್ಠಲ ಲಗಮಪ್ಪಾ ಮಾಳಗಿ ಸಾವಿನ ಬಗ್ಗೆ ಅವರ ಅಕ್ಕ ಹುಣಶ್ಯಾಳದ ಲಕ್ಷಿö್ಮÃ ಶಿವನಗೌಡ ಕುರಿ ಅವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಆರೋಪಿತನಾದ ರಮೇಶ, ಅಪ್ಪಣ್ಣಾ ನಾಯಿಕರನ್ನು ಬಂಧಿಸಲಾಗಿದೆ.
ಯಮಕನಮರಡಿ ಸಿಪಿಐ ಜಾವೇದ ಮುಶಾಪುರಿ ನೇತೃತ್ವದಲ್ಲಿ ಪಿಎಸ್‌ಐ ಎಸ್.ಕೆ. ಮನ್ನಿಕೇರಿ, ಸಿಬ್ಬಂದಿಗಾಳದ ಕೆ.ಬಿ. ಚಂಡೂರಿ, ಎಸ್.ಬಿ. ಪೂಜೇರಿ, ಪಿ.ಎಂ. ಅರಬಳ್ಳಿ, ಶಂಕರ ಚೌಗಲಾ, ಎಲ್.ಬಿ. ಹಮಾಣಿ, ಸುನೀಲ ಚಂದರಿ, ಪಿ.ಡಿ. ಗವಾಣಿ, ರಾಜಶ್ರೀ ನಾಯಿಕ, ಮಾಲಾ ಸನದಿ ಕಾರ್ಯಾಚರಣೆ ನಡೆಸಿದ್ದಾರೆ.