ರಾಯಚೂರಿನ ಕನ್ನಡ ಭವನದಲ್ಲಿ ಭಾನುವಾರ ಜರುಗಿದ ಕಾರ್ಯಕ್ರಮದಲ್ಲಿ ರಾಮಪುರದ ಬಕ್ಕಪ್ಪಯ್ಯನ ತತ್ತ್ವಪದಗಳು ಮತ್ತು ತ್ರಿಪದಿಗಳು ಕೃತಿಯನ್ನು ಕಸಾಪ ನಿಕಟಪೂರ್ವ ಜಿಲ್ಲಾಧ್ಯಕ್ಷ ಮಹಾಂತೇಶ ಮಸ್ಕಿ ಬಿಡುಗಡೆಗೊಳಿಸಿದರು. ಸಾಹಿತಿಗಳಾದ ವೀರಹನುಮಾನ, ಸಾಹೇಬಗೌಡ ಬಿರಾದರ, ಕಸಾಪ ತಾಲೂಕು ಅಧ್ಯಕ್ಷ ವೆಂಕಟೇಶ ಬೇವಿನಬೆಂಚಿ, ಪ್ರಕಾಶಕ ಮಲ್ಕಪ್ಪ ಪಾಟೀಲ್, ಗಾಯಕ ಶರಣಪ್ಪ ಗೋನಾಳ ಇದ್ದರು. 
ಜಿಲ್ಲೆ

ತತ್ತ್ವ ಪದಕಾರರಿಂದ ಜನರ ಬದುಕಿನ ವಿಮರ್ಷೆ

ರಾಯಚೂರು: ತತ್ತ್ವ ಪದಕಾರರ ಪದಗಳ ಅರ್ಥ ಬೇಗ ನಿಲುಕುವುದಿಲ್ಲ. ಪದಗಳ ಬಳಕೆಯಲ್ಲಿ ಗೂಡಾರ್ಥಗಳು ಇರುವುದನ್ನು ಕಾಣುತ್ತೇವೆ. ಬಹುತೇಕ ತತ್ತ್ವ ಪದಕಾರರು ಜನರ ಹಾಗೂ ತಮ್ಮ ಬದುಕನ್ನು ತಮ್ಮ ಕಾವ್ಯಗಳ ಮೂಲಕ ವಿಮರ್ಷೆ ಮಾಡಿರುವುದನ್ನು ಕಾಣುತ್ತೇವೆ ಎಂದು ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಜಿಲ್ಲಾಧ್ಯಕ್ಷ ಮಹಾಂತೇಶ ಮಸ್ಕಿ ಹೇಳಿದರು.
ಸ್ಥಳೀಯ ಕನ್ನಡ ಭವನದಲ್ಲಿ ಕಸಾಪದಿಂದ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವೀರಹನುಮಾನ ಸಂಪಾದಕತ್ವದ ರಾಮಪುರದ ಬಕ್ಕಪ್ಪಯ್ಯನ ತತ್ತ್ವಪದಗಳು ಮತ್ತು ತ್ರಿಪದಿಗಳು ಹಾಗೂ ತತ್ತ್ವಗಾನ ಮಲ್ಲಿಗೆ ಧ್ವನಿ ಸಾಂದ್ರಿಕೆ ಲೋಕಾರ್ಪಣೆ ಮಾಡಿ ಮಾತನಾಡಿದರು.
ನಮ್ಮ ಮೂಲ ಬದುಕನ್ನು ಯಾವ ದಾರಿಯಲ್ಲಿ ನಡೆಸಬೇಕು. ಬದುಕು ಹೇಗಿರಬೇಕು ಎನ್ನುವುದನ್ನು ತತ್ತ್ವ ಪದಕಾರರು ಹೇಳಿದ್ದಾರೆ. ಮೋಕ್ಷಕ್ಕೆ ಹೆಚ್ಚಿನ ಒತ್ತು ನೀಡಿದ ಅವರು ಏನನ್ನು ಮಾಡಬಾರದು, ಏನು ಮಾಡಬೇಕು ಎನ್ನುವುದನ್ನು ತಿಳಿಸಿಕೊಟ್ಟಿದ್ದಾರೆ.
ಬಕ್ಕಪ್ಪಯ್ಯರು ಬಳಸಿದ ಪದಗಳು ವಿಭಿನ್ನವಾಗಿದ್ದು, ಬದುಕಿನ ಒಳಾರ್ಥವನ್ನು ತಿಳಿಸುವ ಕೆಲಸವನ್ನು ತಮ್ಮ ಪದಗಳ ಮೂಲಕ ಮಾಡಿದ್ದಾರೆ. ಅವರ ತತ್ತ್ವಪದಗಳನ್ನು ಕ್ರೋಢಿಕರಿಸುವ ಕೆಲಸ ಮಾಡಿರುವುದು ಶ್ಲಾಘನೀಯವಾಗಿದೆ ಎಂದು ಮಹಾಂತೇಶ ಮಸ್ಕಿ ಹೇಳಿದರು.
ಯಾದಗಿರಿ ಜಿಲ್ಲೆ ಬೆನಕನಹಳ್ಳಿಯ ಸಾಹಿತಿ ಸಾಹೇಬಗೌಡ ಬಿರಾದರ ತತ್ತ್ವಗಾನ ಮಲ್ಲಿಗೆ ಧ್ವನಿ ಸಾಂದ್ರಿಕೆ ಬಿಡುಗಡೆಗೊಳಸಿ ಮಾತನಾಡಿ, ತನ್ನನ್ನು ತಾನು ತಿಳಿಯುವುದೆ ತತ್ತ್ವಪದ. ಹೆಸರಿಗಾಗಿ, ಪದವಿಗಾಗಿ ತತ್ತ್ವಪದಕಾರರು ಹಾಡಲಿಲ್ಲ. ಬದುಕನ್ನು ಎಲ್ಲ ದೃಷ್ಟಿಕೋನಗಳಿಂದ ವಿಮರ್ಷಿಸಲು ಹಾಡಿದ್ದಾರೆ. ಮೋಕ್ಷದ ದಾರಿಯ ಹುಡುಕಾಟದಲ್ಲಿ ಪದಗಳನ್ನು ರಚನೆ ಮಾಡಿದ್ದಾರೆ ಎಂದರು.
ಕೃತಿ ಸಂಪಾದಕ ವೀರಹನುಮಾನ ಮಾತನಾಡಿ, ತತ್ತ್ವಪದಕಾರರು ಸಿದ್ಧ ಪೀಠಿಕೆಗಳನ್ನು ಬಿಟ್ಟು ತಾವು ಕಂಡ ಸತ್ಯವನ್ನು ಪದಗಳಲ್ಲಿ ಹೇಳಿದ್ದಾರೆ. ಬಕ್ಕಪ್ಪಯ್ಯರ ಸಾಹಿತ್ಯ ಸಂಗ್ರಹಕ್ಕೆ ಹೋದಾಗ ರಾಮಪುರ ಗ್ರಾಮಸ್ಥರು ಎಲ್ಲ ರೀತಿಯ ಸಹಕಾರ ನೀಡಿದರು ಎಂದು ತಿಳಿಸಿದರು.
ಕೃತಿ ಪ್ರಕಾಶಕ ಮಲ್ಕಪ್ಪ ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಸಾಪ ತಾಲೂಕು ಅಧ್ಯಕ್ಷ ವೆಂಕಟೇಶ ಬೇವಿನಬೆಂಚಿ ಅಧ್ಯಕ್ಷತೆ ವಹಿಸಿದ್ದರು. ಹಮದರ್ದ ಪಿಯು ಕಾಲೇಜು ಪ್ರಾಚಾರ್ಯ ಡಾ.ಕಾಶಪ್ಪ ಬುದ್ಧ ಕೃತಿ ಪರಿಚಯ ಮಾಡಿಕೊಟ್ಟರು. ಗಾಯಕ ಶರಣಪ್ಪ ಗೋನಾಳ, ಶಿಕ್ಷಕ ರುದ್ರಪ್ಪಗೌಡ ಪಾಟೀಳ್, ಸಿದ್ರಾಮಣ್ಣ ಗೌಡ ಉಪಸ್ಥಿತರಿದ್ದರು.