ಮಂಡ್ಯ: ನಾನು ಸದನದಲ್ಲಿ ಎಚ್.ಡಿ.ದೇವೇಗೌಡರ ಬಗ್ಗೆ ಮಾತನಾಡಿಲ್ಲ. ಆದರೆ ಕುಮಾರಸ್ವಾಮಿಗೆ ಎಚ್‌ಡಿಡಿ ಬಗ್ಗೆ ಮಾತಾಡಿಲ್ಲ ಎಂದರೆ ಬೇಳೆಕಾಳು ಬೇಯಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ವ್ಯಂಗ್ಯವಾಡಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿವೇಶನದಲ್ಲಿ ದೇವೇಗೌಡರ ವಿಚಾರವನ್ನು ಯಾರು ಚರ್ಚೆ ಮಾಡಲಿಲ್ಲ. ಆದರೆ ಎಚ್‌ಡಿಕೆ ಅವರೇ ದೇವೇಗೌಡರ ವಿಚಾರವನ್ನು ಎತ್ತುತ್ತಾರೆ. ಎಚ್‌ಡಿಡಿ ಹಿರಿಯರು, ಪ್ರಧಾನಿಯಾಗಿದ್ದವರು. ರಾಷ್ಟ್ರ ಹಾಗೂ ರಾಜ್ಯದಲ್ಲಿ ಜನರು ಹಾಗೂ ನಾವು ಪ್ರೀತಿ ಮಾಡುತ್ತೇವೆ. ಕುಮಾರಸ್ವಾಮಿ ಅವರ ಹೆಸರು ತರಲಿಲ್ಲ ಎಂದರೆ ನೆಮ್ಮದಿ ಇಲ್ಲ. ದೇವೇಗೌಡರ ಹೆಸರು ಹೇಳದೆ ಕುಮಾರಸ್ವಾಮಿ ರಾಜಕೀಯ ಮಾಡಲು ಆಗಲ್ಲ ಎಂದು ಟೀಕಿಸಿದರು.
ಕುಮಾರಸ್ವಾಮಿ ಆಡಿಯೋ ಬಿಡುಗಡೆ ಮಾಡುವುದನ್ನು ನಾವು ಹಿಡಿದುಕೊಳ್ಳುವುದಕ್ಕೆ ಆಗುತ್ತಾ. ಸರ್ಕಾರದ ವಿರುದ್ಧ ದಾಖಲೆಗಳು ಇದ್ದರೆ ಬಿಡುಗಡೆ ಮಾಡಬೇಡಿ ಎನ್ನುವುದಕ್ಕೆ ಆಗಲ್ಲ. ಅವರು ಸದನದಲ್ಲಿಯೇ ಬಿಡುಗಡೆ ಮಾಡಲಿ ಸಂತೋಷ. ನನಗೆ ಆ ಬಗ್ಗೆ ಯಾವುದೇ ಕುತೂಹಲವಿಲ್ಲ. ಇವರು ಹೀಗೆ ಸಾಕಷ್ಟು ಸಲ ಹೇಳಿದ್ದಾರೆ ಎಂದು ವ್ಯಂಗ್ಯವಾಡಿದರು.
ಎಚ್‌ಡಿಕೆ ಒಕ್ಕಲಿಗರನ್ನು ದೂರ ಇಡುತ್ತಾ ಬಂದಿದ್ದಾರೆ. ಈಗ ಅವರಿಗೆ ನನ್ನ ಸರದಿ ಇತ್ತು. ನನ್ನನ್ನು ಗೆಲ್ಲುವುದೇ ಇಲ್ಲ ಎಂದುಕೊಂಡಿದ್ದರು. ಮಂಡ್ಯದ ಜನ ನನ್ನ ಪಾಪದ ಹುಡುಗ ಎಂದು ಗೆಲ್ಲಿಸಿದ್ದಾರೆ. ಈಗ ನಾನು ಮಂತ್ರಿನೂ ಆಗಿದ್ದೇನೆ. ಆದ್ದರಿಂದ ಎಚ್‌ಡಿಕೆ ಹೇಗೆ ಸಹಿಸುತ್ತಾರೆ. ಅವರಿಗೆ ಸಹಿಸಿಕೊಳ್ಳುವುದಕ್ಕೆ ಕಷ್ಟ ಆಗುತ್ತೆ, ನಾವು ಅರ್ಥ ಮಾಡಿಕೊಳ್ಳಬೇಕು. ನಮಗೆ ಅವರ ಮೇಲೆ ಹೊಟ್ಟೆ ಹುರಿ ಇಲ್ಲ. ರಾಜ್ಯದಲ್ಲಿ ಅವರು ಇನ್ನೂ ಒಂದು ಬಾರಿ ಸಿಎಂ ಆದರೂ ಬೇಸರ ಇಲ್ಲ. ಹಳೆ ಮೈಸೂರು ಭಾಗದ ಜನರಿಗೆ ಇವರು ಒಕ್ಕಲಿಗರನ್ನು ಬೆಳಸಲ್ಲ ಎಂಬುದು ಗೊತ್ತಾಗಿದೆ. ನಾನು ಒಕ್ಕಲಿಗ ಎಂದು ಅವರಿಗೆ ದ್ವೇಷ ಎಂದು ಆರೋಪಿಸಿದರು.
ಮಳೆಗಾಗಿ ಮಂಡ್ಯ ಜಿಲ್ಲೆಯ ಶಾಸಕರು ಪ್ರಾರ್ಥನೆ ಮಾಡಿ ಬಂದಿದ್ದೇವೆ. ಕೆಆರ್‌ಎಸ್ ಡ್ಯಾಂನಲ್ಲಿ 84.50 ಅಡಿಗೆ ನೀರು ಏರಿಕೆಯಾಗಿದೆ. 100 ಅಡಿ ದಾಟಿದರೆ ನಮಗೆ ಅನುಕೂಲ ಆಗುತ್ತದೆ. 85 ಅಡಿ ಬಂದ ಮೇಲೆ ರೈತರಿಗೆ ನೀರು ಕೊಡಲು ಸಹಕಾರಿಯಾಗುತ್ತದೆ ಎಂದ ಅವರು, ಬಜೆಟ್‌ನಲ್ಲಿ ಮಂಡ್ಯ ಜಿಲ್ಲೆ ಕಡೆಗಣನೆ ಆರೋಪಕ್ಕೆ ಪ್ರತಿಕ್ರಿಯಿಸಿ, ಗ್ಯಾರಂಟಿ ಯೋಜನೆಯ 40 ಸಾವಿರ ಕೋಟಿ ರೂ ಮಂಡ್ಯಕ್ಕೆ ತಲುಪಲ್ವ?. ಮಹಿಳೆಯರಿಗೆ 2 ಸಾವಿರ ರೂ, ಅಕ್ಕಿ, ಕರೆಂಟ್ ಬಿಲ್ ಮಂಡ್ಯ ಜನರಿಗೆ ತಲುಪಲ್ವ. ಮಂಡ್ಯ ಅಭಿವೃದ್ದಿ ಮಾಡಿ ತೋರಿಸುತ್ತೇವೆ. ಮೂರು ವರ್ಷದಲ್ಲಿಯೇ ಮಂಡ್ಯ ಬದಲಾವಣೆ ಮಾಡುತ್ತೇವೆ. ವಿಶ್ವೇಶ್ವರಯ್ಯ ನಾಲೆ ಆಧುನೀಕರಣ ಸಂಬಂಧ ರೈತರು, ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು.