ಮಂಡ್ಯ: ನರೇಂದ್ರ ಮೋದಿ ಮತ್ತೆ ಪ್ರಧಾನಿಯಾದರೆ ನಾನು ದೇಶ ಬಿಟ್ಟು ಹೋಗುತ್ತೇನೆಂದು ಎಚ್.ಡಿ.ದೇವೇಗೌಡರು ಹೇಳಿದ್ದರು. ಅಂತಹ ಜಾತ್ಯಾತೀತ ನಾಯಕ ಎಚ್‌ಡಿಡಿ ಅವರ ಇಂದಿನ ಪರಿಸ್ಥಿತಿ ನೋಡಿದರೆ ನನಗೆ ನೋವಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಬೇಸರ ವ್ಯಕ್ತಪಡಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ನಾಯಕ ಎಚ್‌ಡಿಡಿ ರಾಜ್ಯದ ಮಣ್ಣಿನ ಮಗ, ಪ್ರಧಾನ ಮಂತ್ರಿಯಾಗಿದ್ದವರು. ಧೃಡವಾದಂತ ಜಾತ್ಯಾತೀತ ಲೀಡರ್‌ಶಿಪ್ ಕಟ್ಟಿಕೊಂಡು ಬಂದಿದ್ದರು. ಇನ್ನೊಂದು ಪಕ್ಷಕ್ಕೆ ಸೇರ್ಪಡೆಯಾಗಿರಲಿಲ್ಲ. ಆದರೆ ಇಂದು ದೇವೇಗೌಡರನ್ನು ಅವರ ಮಕ್ಕಳು, ನಾಯಕರು ಅನೇಕರು ಅವರನ್ನು ಆ ಪರಿಸ್ಥಿತಿಗೆ ತಂದಿದ್ದಾರೆ. ಅದು ನನಗೆ ನೋವಾಗಿದೆ ಎಂದರು.
ಇನ್ನು ಕಾಂಗ್ರೆಸ್‌ನ ಗೆಲುವು ಕಂಡು ಬಿಜೆಪಿಗೆ ಗಾಬರಿಯಾಗಿದೆ. ಬಿಜೆಪಿ ಮತ್ತು ಜೆಡಿಎಸ್‌ಗೆ ವಿಚಾರಗಳು ಇಲ್ಲ, ಕಾರ್ಯಕ್ರಮ ಕೂಡ ಇಲ್ಲ. ಅವರ ಪಕ್ಷ ಕೆಟ್ಟ ಪರಿಸ್ಥಿತಿ ಎದುರುಸುತ್ತಿದೆ. ಆದ್ದರಿಂದ ಕಾಂಗ್ರೆಸ್ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಾರೆ ಎಂದ ಅವರು, ನಮ್ಮ ಪಕ್ಷದಲ್ಲಿ ಯಾವ ಅಸಮಾಧಾನ ಕೂಡ ಇಲ್ಲ. ಒಗ್ಗಟ್ಟಿನಿಂದ ಪಾರ್ಲಿಮೆಂಟ್ ಚುನಾವಣೆ ಎದುರಿಸುತ್ತೇವೆ. ಅವರೆಲ್ಲರೂ ಅನಾವಶ್ಯಕವಾಗಿ ಮಾತನಾಡ್ತಾರೆ ಅಷ್ಟೆ ಎಂದು ತಿರುಗೇಟು ನೀಡಿದರು.
ನಿಗಮ-ಮಂಡಳಿಗೆ ಅಧ್ಯಕ್ಷರ ನೇಮಕ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಪಕ್ಷದ ಮೊದಲ ಆದ್ಯತೆ ಕಾರ್ಯಕರ್ತರಿಗೆ ಕೊಡಬೇಕು. ಅಂತೆಯೇ ಎಂಎಲ್‌ಎ ಹಾಗೂ ಮಂತ್ರಿಯಾಗದಿರುವವರು ಅವರಿಗೂ ಅವಕಾಶ ಕೊಡಬೇಕು ಎನ್ನುವ ಒತ್ತಾಯವಿದೆ. ಆದರಿಂದ ಸ್ವಲ್ಪ ತಡವಾಗಿದೆ, ಆದಷ್ಟು ಬೇಗ ಎಲ್ಲ ಸರಿಪಡಿಸುತ್ತೇವೆ. ಅಸ್ಸಾಂನಲ್ಲಿ ರಾಹುಲ್‌ಗಾಂಧಿ ಯಾತ್ರೆಗೆ ಅಡ್ಡಿ ಮಾಡಲಾಗುತ್ತಿದೆ. ಚಂದ್ರಶೇಖರ್ ನಂತರ ಇಡೀ ರಾಷ್ಟ್ರವನ್ನ ಪ್ರಥಮವಾಗಿ ಸ್ವಾತಂತ್ರ್ಯ ನಂತರ ಈ ವಯಸ್ಸಿನಲ್ಲಿ ಯಾರು ಪಾದಯಾತ್ರೆ ಮಾಡಿಲ್ಲ. ಭಾರತದ ಒಗ್ಗಟ್ಟು, ಜನರ ಬದುಕಿಗಾಗಿ ರಾಹುಲ್‌ಗಾಂಧಿ ಪಾದಯಾತ್ರೆ ಮಾಡುತ್ತಿದ್ದಾರೆ. ಆಂಧ್ರ ಮತ್ತು ಕರ್ನಾಟಕದಲ್ಲಿ ಫಲಿತಾಂಶ ಬದಲಾವಣೆ ಕಂಡು ಬಿಜೆಪಿಗೆ ಗಾಬರಿಯಾಗಿದೆ. ಅದನ್ನು ಪ್ರೋವಕ್ ಮಾಡುತ್ತಾರೆ. ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಮಂಡ್ಯ ಜಿಲ್ಲೆಗೆ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ವಿಚಾರ ನಮ್ಮಲ್ಲಿ ಅಂತಿಮಕ್ಕೆ ತಲುಪಿದ್ದೇವೆ. ಮತ್ತೊಂದು ಬಾರಿ ಶಾಸಕರು, ಮುಖಂಡರು ಚರ್ಚೆ ಮಾಡಿ ಕೆಪಿಸಿಸಿಗೆ ಕೊಡುತ್ತೇವೆ. ಅವರು ಅಂತಿಮ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತಾರೆ ಎಂದರು.
ಶ್ರೀರಾಮನ ಕುರಿತು ಸಚಿವ ಪ್ರಿಯಾಂಕಾ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿದ ಚಲುವರಾಯಸ್ವಾಮಿ, ಅದು ಅವರ ವೈಯಕ್ತಿಕ, ನಾವು ರಾಮನ ಭಕ್ತರೇ. ಸಿದ್ದರಾಮಯ್ಯ ಅವರೇ ಜೈ ಶ್ರೀರಾಮ್ ಎಂದು ಹೇಳಿಲ್ವಾ. ರಾಮ ಮಂದಿರ ಈಗಾಗಲೇ ಉದ್ಘಾಟನೆಯಾಗಿದೆ. ಆದರೆ ಬಿಜೆಪಿಯವರು ಚುನಾವಣೆಗಾಗಿ ಬಳಸಿಕೊಳ್ತಿದ್ದಾರೆ. ಚುನಾವಣೆ ಬಿಟ್ಟು ನಾವು ವೈಯಕ್ತಿಕವಾಗಿ ದೇವರ ಪೂಜೆ ಮಾಡುತ್ತೇವೆ ಎಂದು ಹೇಳಿದರು.