ಮದ್ದೂರು: ಒಕ್ಕಲಿಗರು ಅಭಿವೃದ್ಧಿ ಹೊಂದಿದರೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಹಿಸಲ್ಲ. ಹಾಗಾಗಿ, ಅವರು ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.
ತಾಲೂಕಿನ ಆಬಲವಾಡಿ ಗ್ರಾಮದ ತೋಪಿನ ತಿಮ್ಮಪ್ಪ ಹರಿಸೇವೆಯಲ್ಲಿ ದೇವರ ದರ್ಶನ ಪಡೆದು, ತಾವರೆ ಎಲೆ ಊಟ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಮಂಡ್ಯ ಜಿಲ್ಲೆಯಾಗಲಿ, ಅಕ್ಕಪಕ್ಕದ ಜಿಲ್ಲೆಯವರೇ ಆಗಲಿ ಕುಮಾರಸ್ವಾಮಿ ಅವರಿಗೆ ಒಕ್ಕಲಿಗರ ಅಭಿವೃದ್ಧಿ ಕಣ್ಣಿಗೆ ಕಾಣುವ ಆಗಿಲ್ಲ. ಈ ಹಿನ್ನೆಲೆಯಲ್ಲಿ ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಇದು ಅವರಿಗೆ ಮಾಮೂಲಿಯಾಗಿದೆ. ಅವರೂ ಅಧಿಕಾರ ಮಾಡುವುದಿಲ್ಲ, ಬೇರೆಯವರೂ ಅಧಿಕಾರ ನಡೆಸುವುದನ್ನು ಸಹಿಸುವುದಿಲ್ಲ ಎಂದು ಹೇಳಿದರು.
ಸೋಮವಾರ ವಿಧಾನಸಭೆಯಲ್ಲಿ ಪೆನ್‌ಡ್ರೈವ್‌ನಲ್ಲಿ ಇರೋ ದಾಖಲೆಯನ್ನು ಕುಮಾರಸ್ವಾಮಿ ಬಿಡುಗಡೆ ಮಾಡಲಿ. ಯಾರು ಬೇಡ ಅಂತಾರೆ? ವಿಧಾನಸಭೆ ಅಧಿವೇಶನ ಕರೆದಿರೋದೇ ಚರ್ಚೆ ಮಾಡಲಿ ಅಂತಾ. ವಿಧಾನಸಭೆಯಲ್ಲಿಯೇ ಬಿಡುಗಡೆ ಮಾಡಲಿದ್ದಾರಂತೆ. ಅಲ್ಲಿಯವರೆಗೂ ಕಾದು ನೋಡೋಣ ಎಂದರು.
ಬಜೆಟ್‌ನಲ್ಲಿ ಮಂಡ್ಯ ಜಿಲ್ಲೆಗೆ ಅನುದಾನ ಕಡಿಮೆ ವಿಚಾರವಾಗಿ ಮಾತನಾಡಿದ ಅವರು, ಇದು ಪರಿಷ್ಕೃತ ಬಜೆಟ್. ಹೊಸ ಬಜೆಟ್‌ನಲ್ಲಿ ಹೆಚ್ಚು ಅನುದಾನ ಸಿಗುತ್ತದೆ ಎಂದು ವಿಶ್ವಾಸವ್ಯಕ್ತಪಡಿಸಿದ ಅವರು, ಚುನಾವಣೆಯಲ್ಲಿ ಗೆದ್ದು ಸರ್ಕಾರ ಬರಲಿ ಎಂದು ಹರಕೆ ಮಾಡಿಕೊಂಡಿದ್ದೆ. ಹೀಗಾಗಿ ದೇವಸ್ಥಾನಕ್ಕೆ ಬಂದು ಹರಕೆ ತೀರಿಸಿದ್ದೇನೆ. ರಾಜ್ಯ ಹಾಗೂ ಜಿಲ್ಲೆಯ ಅಭಿವೃದ್ಧಿಗೆ ಶಕ್ತಿ ಮೀರಿ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.
ವರ್ಗಾವಣೆ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಕೆಎಸ್‌ಆರ್‌ಟಿಸಿ ನಿರ್ವಾಹಕ ಜಗದೀಶ್ ಅವರ ಆರೋಗ್ಯ ಚೆನ್ನಾಗಿದೆ. ಇಲಾಖೆಯ ವತಿಯಿಂದ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಬಗ್ಗೆ ಸಾಕಷ್ಟು ಚರ್ಚೆಯಾಗಿದ್ದು, ಈ ಬಗ್ಗೆ ಮತ್ತೇಕೆ ಪ್ರಸ್ತಾಪ ಎಂದರು.
ನಾಗಮಂಗಲ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ದಿವಾಕರ್, ತಾಪಂ ಮಾಜಿ ಸದಸ್ಯ ತೋಯಾಜಾಕ್ಷ, ಗ್ರಾಪಂ ಸದಸ್ಯ ಕುಮಾರ್ ಕೊಪ್ಪ, ಮುಖಂಡರಾದ ಘಟ್ಟಹಳ್ಳಿ ಹರೀಶ್, ಚಿಕ್ಕೊನಹಳ್ಳಿ ತಮ್ಮಯ್ಯ, ರಾಮಚಂದ್ರು, ಜಯರಾಮು ಇದ್ದರು.