ಮಂಡ್ಯ: ಮಾಜಿ ಶಾಸಕ ಕೆ.ಸುರೇಶ್‌ಗೌಡರು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರನ್ನು ಟೀಕಿಸುವ ಭರದಲ್ಲಿ ಬಳಸಿರುವ ಕೀಳಮಟ್ಟದ ಪದಗಳು ನಾಗಮಂಗಲ ತಾಲೂಕಿಗೆ ಅವಮಾನವಾದಂತಾಗಿದೆ ಎಂದು ರಾಜ್ಯ ಒಕ್ಕಲಿಗರ ಸಂಘದ ಮಾಜಿ ಉಪಾಧ್ಯಕ್ಷ ಎಚ್.ಟಿ.ಕೃಷ್ಣೇಗೌಡ ಹಾಗೂ ಮನ್‌ಮುಲ್ ಮಾಜಿ ಅಧ್ಯಕ್ಷ ಜವರೇಗೌಡ ಅಸಮಾಧಾನ ವ್ಯಕ್ತಪಡಿಸಿದರು.
ಆರೋಪಗಳು ರಾಜಕೀಯ ನೆಲೆಗಟ್ಟಿನಲ್ಲಿರಬೇಕು. ಭಾಷಾ ಬಳಕೆ ಉತ್ತಮವಾಗಿರಬೇಕು ಎಂಬ ಕನಿಷ್ಟ ತಿಳುವಳಿಕೆ ಇಲ್ಲದ ಸುರೇಶ್‌ಗೌಡರಿಂದ ತಾಲೂಕಿನ ಹಿರಿಯ ರಾಜಕಾರಣಿಗಳಾಗಿದ್ದ ಟಿ.ಎನ್.ಮಾದಪ್ಪಗೌಡ, ಚಿಗರಿಗೌಡ, ಶಂಕರಲಿಂಗೇಗೌಡ, ಎಚ್.ಟಿ.ಕೃಷ್ಣಪ್ಪ ಅವರ ಸಂಸ್ಕಾರಕ್ಕೆ ಧಕ್ಕೆ ಬಂದಿದೆ ಎಂದು ಜಂಟಿ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
2008ರಲ್ಲಿ ಬಿಜೆಪಿ ಪಕ್ಷ ಸೇರ್ಪಡೆಯಾಗಲು ಬೆಂಗಳೂರಿನ ಖಾಸಗಿ ಹೋಟೇಲ್‌ನಲ್ಲಿ ಆರ್.ಅಶೋಕ್ ಅವರ ಕಾಲು ಹಿಡಿಯಲು ಮುಂದಾಗಿದ್ದ ಸುರೇಶ್‌ಗೌಡರಿಗೆ ಎಸ್.ಎಂ.ಕೃಷ್ಣ ಅವರನ್ನು ಪರಿಚಯಿಸಿ ಕಾಂಗ್ರೆಸ್‌ಗೆ ಕರೆತಂದವರಿಗೆ ವಂಚಿಸಿ, ಬಿ.ಾರ್ಮ್ ಕಬಳಿಸಿದ ಭೂಪ. 2008ರ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪರವಾಗಿ ಚುನಾವಣಾ ಖರ್ಚು ಮಾಡಿದ್ದ ಹಲವರಿಗೆ ಹಣ ನೀಡದೇ ವಂಚಿಸಿರುವ ಸುರೇಶ್‌ಗೌಡರಿಂದ ಚಲುವರಾಯಸ್ವಾಮಿ ಪಾಠ ಕಲಿಯುವ ಅಗತ್ಯವಿಲ್ಲವಾಗಿದ್ದು, ಟೀಕಿಸುವ ಭರದಲ್ಲಿ ಕೀಳುಪದ ಪ್ರಯೋಗಿಸಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸರ್ಕಾರಿ ಜಾಗ ಕಬಳಿಸಿ ಕಾಂಪೌಂಡ್ ನಿರ್ಮಿಸಿದ್ದನ್ನು ವಿರೋಸಿದ್ದಕ್ಕೆ ಚಲುವರಾಯಸ್ವಾಮಿ ಅವರ ಮೇಲೆ ವೈಯಕ್ತಿಕ ದ್ವೇಷ ಸಾರುವ ಸುರೇಶ್‌ಗೌಡರ ಭೂ ಕಬಳಿಕೆ ಹೊರ ತೆಗೆಯಲು ಜಿಲ್ಲೆಯ ಕಂದಾಯ ಅಧಿಕಾರಿಗಳು ಮುಂದಾಗಬೇಕು. ತಮ್ಮ ಶಾಸಕತ್ವದ ಅವಧಿಯಲ್ಲಿ ಕೇವಲ ಮೂರ‌್ನಾಲ್ಕು ಮಂದಿ ಗುತ್ತಿಗೆದಾರರಿಗೆ ಕಾಮಗಾರಿಗಳನ್ನು ನೀಡಿ, ವಂಚಿಸಿರುವ ಪ್ರಕರಣದ ಬಗ್ಗೆ ತನಿಖೆಯಾಗಬೇಕು, ಈ ಬಗ್ಗೆ ತನಿಖೆ ನಡೆಸಲು ಜಿಲ್ಲಾಡಳಿತಕ್ಕೆ ಉಸ್ತುವಾರಿ ಸಚಿವರು ನಿರ್ದೇಶನ ನೀಡಬೇಕೆಂದು ಆಗ್ರಹಿಸಿದರು.
2018ರ ಚುನಾವಣೆಯಲ್ಲಿ ಸುಮಾರು 47 ಸಾವಿರ ಮತಗಳ ಅಂತರದಿಂದ ಜಯಗಳಿಸಿದ್ದ ನೀವು, ಈ ಬಾರಿಯ ಚುನಾವಣೆಯಲ್ಲಿ 5 ಸಾವಿರ ಮತಗಳ ಅಂತರದಿಂದ ಸೋಲು ಕಂಡಿದ್ದೀರಿ, ಮತದಾರರ ತೀರ್ಮಾನದಿಂದ ಹತಾಶರಾಗಿ ರಾಜಕೀಯವಾಗಿ ಆರೋಪಿಸುವುದನ್ನು ಅಸ ಮಾಡಿಕೊಂಡಿರುವುದು, ಶಾಸಕರಾದವರಿಗೆ ತರವಲ್ಲ. ಜಮೀನು ಒತ್ತುವರಿ ಸಮಿತಿಯ ಅರ್ಜಿಗಳ ವಿಲೇವಾರಿ ಹೆಸರಿನಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಸಿರುವುದು ಕಂಡು ಬಂದಿದ್ದು, ಅಕ್ರಮದ ವಾರಸುದಾರರಾಗಿರುವ ನೀವು ಇನ್ನೊಬ್ಬರ ಮೇಲೆ ಸುಳ್ಳು ಆರೋಪ ಮಾಡಿದರೆ ಜನತೆ ನಂಬುವುದಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕೆಂದರು.
ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ತಿಮ್ಮರಾಯಿಗೌಡ, ಮುಖಂಡರಾದ ಪ್ರಸನ್ನ, ರಾಜೇಗೌಡ, ಸಿ.ಎಂ.ದ್ಯಾವಪ್ಪ, ನವೀನ್ ಇತರರಿದ್ದರು.