ದುಷ್ಕರ್ಮಿಗಳಿಂದ ಹಲ್ಲೆಗೊಳಗಾದ ಮಂಜುನಾಥ 
ಜಿಲ್ಲೆ

ಹೋಟೆಲ್‌ಗೆ ನುಗ್ಗಿ ಕೈ ಕತ್ತರಿಸಿದ ದುಷ್ಕರ್ಮಿಗಳು

ಭೀಕರ ಕೃತ್ಯಕ್ಕೆ ಬೆದರಿ ಚೆಲ್ಲಾಪಿಲ್ಲಿಯಾದ ಜನ ಸಾದಹಳ್ಳಿ ಗೇಟ್ ಬಳಿ ಮಾರಣಾಂತಿಕ ಹಲ್ಲೆ

ದೇವನಹಳ್ಳಿ: ಸಾದಹಳ್ಳಿ ಗೇಟ್‌ನಲ್ಲಿರುವ ಕೃಷ್ಣಸಾಗರ್ ಹೋಟೆಲ್‌ಗೆ ನುಗ್ಗಿದ್ದ ದುಷ್ಕರ್ಮಿಗಳ ತಂಡ ಯುವಕನೊಬ್ಬನ ಕೈ ಕತ್ತರಿಸಿ ಮಾರಣಾಂತಿಕ ಹಲ್ಲೆ ನಡೆಸಿದೆ.

ಸಾದಹಳ್ಳಿ ಸಮೀಪದ ಬೋವಿಪಾಳ್ಯ ನಿವಾಸಿ ಮಂಜುನಾಥ್ (26) ತೀವ್ರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ. ಹಲ್ಲೆಗೊಳಗಾದ ಮಂಜುನಾಥ್‌ನ ಅತ್ತೆ ಮಗನಾದ ಶ್ರೀರಾಮ್ ಹಾಗೂ ಆತನ ಸಹಚರರು ಕೃತ್ಯ ಎಸಗಿದ್ದಾರೆ ಎನ್ನಲಾಗಿದ್ದು, ಚಿಕ್ಕಜಾಲ ಪೊಲೀಸರು ಆರೋಪಿಗಳ ಹುಡುಕಾಟ ನಡೆಸಿದ್ದಾರೆ.

ಊಟ ಮಾಡುವಾಗ ಅಟ್ಯಾಕ್: ಮಂಗಳವಾರ ಮಧ್ಯಾಹ್ನ ಮಂಜುನಾಥ್ ಹೋಟೆಲ್‌ನಲ್ಲಿ ಊಟ ಮಾಡುತ್ತಿದ್ದ ವೇಳೆ ಏಕಾಏಕಿ ಒಳನುಗಿದ್ದ ದುಷ್ಕರ್ಮಿಗಳ ತಂಡ ಮಾರಕಾಸ್ತ್ರಗಳಿಂದ ಮನಬಂದಂತೆ ಹಲ್ಲೆ ನಡೆಸಿದೆ. ಈ ವೇಳೆ ಮಂಜುನಾಥ್ ಕೈ ಕತ್ತರಿಸಿದ ದುಷ್ಕರ್ಮಿಗಳು ಕೇಕೆ ಹಾಕಿ ಭೀಭತ್ಸವಾಗಿ ಕಿರುಚಾಡಿದ್ದಾರೆ. ದಿಢೀರ್ ನಡೆದ ಘಟನೆಗೆ ಬೆಚ್ಚಿದ ಹೋಟೆಲ್‌ನಲ್ಲಿದ್ದ ಗ್ರಾಹಕರು ಚೆಲ್ಲಾಪಿಲ್ಲಿಯಾಗಿ ಹೊರ ಓಡಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಮಂಜುನಾಥ್ ಮೇಲೆ ಮತ್ತೆ ಹಲ್ಲೆ ನಡೆಸಿ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

ಬೋವಿಪಾಳ್ಯದ ನಿವಾಸಿಗಳು: ಹಲ್ಲೆಗೊಳಗಾದ ಮಂಜುನಾಥ್ ಹಾಗೂ ಆರೋಪಿ ಶ್ರೀರಾಮ್ ಸಂಬಂಧಿಕರಾಗಿದ್ದು, ದೇವನಹಳ್ಳಿ ತಾಲೂಕು ವಿಶ್ವನಾಥಪುರ ಠಾಣಾ ವ್ಯಾಪ್ತಿಯ ಬೋವಿಪಾಳ್ಯದ ನಿವಾಸಿಗಳಾಗಿದ್ದಾರೆ. ಶ್ರೀರಾಮ್ ಜತೆ ಬಂದಿದ್ದ ಸಹಚರರೂ ಇದೇ ಬೋವಿಪಾಳ್ಯದ ನಿವಾಸಿಗಳು ಎನ್ನಲಾಗಿದೆ.

ಹಳೇ ದ್ವೇಷ ಕಾರಣ!

ಆರೋಪಿ ಶ್ರೀರಾಮ್ ತಂದೆಯ ಕೊಲೆ ಪ್ರಕರಣದಲ್ಲಿ ಮಂಜುನಾಥ್ ಸಹಾಯ ಮಾಡಿಲ್ಲ ಎಂಬ ಕಾರಣಕ್ಕೆ ದ್ವೇಷ ಸಾಧಿಸುತ್ತಿದ್ದ ಎನ್ನಲಾಗಿದೆ. ಇದೇ ದ್ವೇಷದ ಹಿನ್ನೆಲೆಯಲ್ಲಿ ಸಹಚರರೊಂದಿಗೆ ಕೊಲೆ ಸಂಚು ರೂಪಿಸಿದ್ದ ಶ್ರೀರಾಮ್ ಮಂಜುನಾಥ್‌ನನ್ನು ಹಿಂಬಾಲಿಸಿ ದಾಳಿ ನಡೆಸಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಆರೋಪಿಗಳ ಪತ್ತೆಗೆ ತಂಡ ರಚಿಸಿದ ಪೊಲೀಸರು

ಹಲ್ಲೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಚಿಕ್ಕಜಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗಾಯಾಳುವನ್ನು ಹೆಚ್ಚಿನ ಚಿಕಿತ್ಸೆಗಾಗಿ ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಳೆ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ಯತ್ನ ನಡೆದಿದ್ದು ಆರೋಪಿಗಳ ಬಂಧನಕ್ಕೆ ಪೊಲೀಸರ ಎರಡು ತಂಡ ರಚಿಸಲಾಗಿದೆ ಎಂದು ಎಸಿಪಿ ನವೀನ್‌ಕುಮಾರ್ ತಿಳಿಸಿದ್ದಾರೆ.

ಬಿಗುವಿನ ವಾತಾವರಣ

ಸಿನಿಮೀಯ ರೀತಿ ನುಗ್ಗಿ ಏಕಾಏಕಿ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ ದೃಶ್ಯ ಕಂಡ ಬೆಚ್ಚಿದ ಹೋಟೆಲ್‌ನಲ್ಲಿದ್ದ ಗ್ರಾಹಕರು ಹಾಗೂ ಸಿಬ್ಬಂದಿ ಕಿರುಚಾಡಿಕೊಂಡು ಹೊರಗೋಡಿ ಬಂದಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು ಮುಂಜಾಗ್ರತಾ ಕ್ರಮವಾಗಿ ಪೊಲೀಸರನ್ನು ನಿಯೋಜಿಸಲಾಗಿದೆ.