ಜಿಲ್ಲೆ

ಎಡಿಸಿ ಕಾರು ಚಾಲಕನ ಮೇಲೆ ಹಲ್ಲೆ

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಈಗಾಗಲೇ ಅಪರಾಧ ಪ್ರಕರಣಗಳಲ್ಲಿ ಜೈಲು ಸೇರಿ ಜಾಮೀನಿನ ಮೇಲೆ ಹೊರಬಂದಿದ್ದ ಕಿಡಿಗೇಡಿಯೊಬ್ಬ ತನ್ನ ಸಹಚರನೊಂದಿಗೆ ಸೇರಿ ಸರ್ಕಾರಿ ಕಾರನ್ನು ಅಡ್ಡಗಟ್ಟಿ ಚಾಲಕನ ಮೇಲೆ ಹಲ್ಲೆ ನಡೆಸಿದ್ದಲ್ಲದೇ ಕಾರು ಜಖಂಗೊಳಿಸಿದ ಪ್ರಕರಣ ದೇವನಹಳ್ಳಿಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಹಲ್ಲೆ ನಡೆಸಿದ ಆರೋಪದ ಮೇಲೆ ಆನಂದ್ (25) ಹಾಗೂ ಶ್ರೀನಿವಾಸ್ (28) ಎಂಬುವರನ್ನು ವಶಕ್ಕೆ ಪಡೆದ ದೇವನಹಳ್ಳಿ ಠಾಣಾ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಸಾರ್ವಜನಿಕರು ಮೂಕಪ್ರೇಕ್ಷಕರು: ಡಿ.31 ರ ಸಂಜೆ ವೇಳೆ ದೇವನಹಳ್ಳಿ ಪಟ್ಟಣದ ಬಿಬಿ ರಸ್ತೆಯಲ್ಲಿನ ಪ್ರವಾಸಿಮಂದಿರ ಬಳಿ ಪ್ರಕರಣ ನಡೆದಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಎಚ್.ಅಮರೇಶ್ ಅವರ ಕಾರು ಚಾಲಕನಿಗೆ ಸಣ್ಣಪುಟ್ಟ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಕಾರನ್ನು ಜಖಂಗೊಳಿಸಿ ಚಾಲಕನ್ನು ಎಳೆದಾಡುತ್ತಿದ್ದ ದೃಶ್ಯಕ್ಕೆ ಸಾರ್ವಜನಿಕರು ಮೂಕಪ್ರೇಕ್ಷಕರಾಗಿದ್ದರು. ಯಾರೋಬ್ಬರು ಚಾಲಕನ ರಕ್ಷಣೆಗೆ ಬಂದಿಲ್ಲ. ದುಷ್ಕರ್ಮಿಗಳಿಬ್ಬರು ಕ್ರಿಮಿನಲ್ ಹಿನ್ನೆಲೆಯವರರಾಗಿದ್ದರಿಂದ ಸ್ಥಳೀಯರು ಮಧ್ಯೆ ಪ್ರವೇಶಿಸಿಲ್ಲ ಎಂಬ ಮಾತು ಕೇಳಿಬಂದಿದೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ದಾವಿಸಿ ಆರೋಪಿಗಳನ್ನು ವಶಕ್ಕೆ ಪಡೆಯುವ ವೇಳೆಯೂ ಸ್ಥಳೀಯರು ಯಾರೂ ಸಾಕ್ಷಿ ಹೇಳಲು ಮುಂದೆ ಬರಲಿಲ್ಲ. ಸಿನಿಮಾದಲ್ಲಿ ತೋರಿಸುವ ರೌಡಿಗಳ ಅಟ್ಟಹಾಸದಂತೆ ಇಡೀ ಪ್ರಕರಣ ಕಂಡುಬಂದಿತ್ತು. ಮಾಧ್ಯಮದರೊಬ್ಬರು ಮುಂದೆ ಬಂದು ಪ್ರತ್ಯಕ್ಷ ಸಾಕ್ಷಿ ಹೇಳುವ ಮೂಲಕ ಆರೋಪಿಗಳ ಬಂಧನಕ್ಕೆ ದಿಟ್ಟತನ ತೋರಿಸಿದ್ದಾರೆ.

ಬೈಕ್ ಅಡ್ಡಬರ‌್ತೀಯಾ: ಸಂಜೆ ಹೋಟೆಲ್‌ನಲ್ಲಿ ಉಪಹಾರ ಸೇವಿ ಕಾರು ಹತ್ತಿದ ಚಾಲಕ ಕಾರನ್ನು ಚಲಾಯಿಸುತ್ತಿದ್ದಂತೆ ದ್ವಿಚಕ್ರವಾಹನದಲ್ಲಿ ಪ್ರತ್ಯಕ್ಷವಾದ ಕಿಡಿಗೇಡಿಗಳು ಕಾರಿಗೆ ಅಡ್ಡ ನಿಂತಿದ್ದಾರೆ. ದ್ವಿಚಕ್ರ ವಾಹನ ತೆಗೆಯುವಂತೆ ಕಾರಿನ ಚಾಲಕ ಹಾರ್ನ್ ಮಾಡುತ್ತಿದ್ದಂತೆ ಏಕಾಏಕಿ ಚಾಲಕನ ಮೇಲೆ ಮುಗಿಬಿದ್ದ ದುಷ್ಕರ್ಮಿಗಳು ಬೈಕ್‌ಗೆ ಅಡ್ಡಬರ‌್ತೀಯಾ ಎಂದು ಪ್ರಶ್ನಿಸಿ ಚಾಲಕನ ಕತ್ತಿನಪಟ್ಟಿ ಹಿಡಿದು ಎಳೆದಾಡಿದ್ದಾರೆ, ಈ ವೇಳೆ ಚಾಲಕನ ಉಸಿರುಕಟ್ಟಿದಂತಾಗಿದೆ ಅಸ್ವಸ್ಥರಾಗಿದ್ದಾರೆ. ಇಷ್ಟಕ್ಕೂ ಸುಮ್ಮನಾಗದ ಕಿಡಿಗೇಡಿಗಳು ಕಾರಿನ ಗಾಜಿನ ಮೇಲೆ ಕಲ್ಲು ಎತ್ತಿಹಾಕಿ ಅಟ್ಟಹಾಸ ಮೆರೆದಿದ್ದಾರೆ.

ಪೋಕ್ಸೋ ಆರೋಪಿ: ಪ್ರಕರಣದಲ್ಲಿ ಬಂಧಿತರಾಗಿರುವ ಇಬ್ಬರ ಪೈಕಿ ಆನಂದ್ ಎಂಬುವನು ಪೋಕ್ಸೋ ಪ್ರಕರಣದಲ್ಲಿ ಜೈಲು ಸೇರಿ ಜಾಮೀನಿನ ಮೇಲೆ ಇತ್ತೀಚಿಗೆ ಬಿಡುಗಡೆಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈತನ ಸಹಚರ ಶ್ರೀನಿವಾಸ್ ಸಹ ಅಪರಾಧ ಪ್ರಕರಣ ಹಿನ್ನೆಲೆಯುಳ್ಳವನಾಗಿದ್ದು, ಸಾರ್ವಜನಿಕರೊಂದಿಗೆ ಕಿರಿಕಿರಿ ಬೆದರಿಕೆ ಪ್ರಕರಣಗಳು ದಾಖಲಾಗಿವೆ. ಪ್ರಕರಣದ ಹಿನ್ನೆಲೆಯಲ್ಲಿ ಚಾಲಕನ ಮೇಲೆ ಹಲ್ಲೆ ಸರ್ಕಾರಿ ವಾಹನ ಜಖಂಗೊಳಿಸಿದ ಅಪರಾಧದಡಿ ಇಬ್ಬರ ಮೇಲೆ ಕೇಸ್ ದಾಖಲಿಸಲಾಗಿದ್ದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಗಾಂಜಾ ಮತ್ತಿನಲ್ಲಿದ್ದರು? ಪ್ರಕರಣ ನಡೆದ ಸಂದರ್ಭದಲ್ಲಿ ಇಬ್ಬರೂ ಆರೋಪಿಗಳೂ ಗಾಂಜಾ ಅಥವಾ ಮಾದಕ ವಸ್ತಗಳನ್ನು ಸೇವಿಸಿದ್ದರು ಎಂಬ ಮಾತು ಕೇಳಿಬರುತ್ತಿದೆ.ಮೈ ಮೇಲೆ ಎಚ್ಚರವಿಲ್ಲದಂತೆ ವರ್ತಿಸುತ್ತಿದ್ದರು. ಪೊಲೀಸರು ವಶಕ್ಕೆ ಪಡೆಯುವ ವೇಳೆಯೂ ಆರೋಪಿಗಳು ತೂರಾಡುತ್ತಿದ್ದರು ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.

ಅಪರ ಜಿಲ್ಲಾಧಿಕಾರಿ ಅವರ ಸರ್ಕಾರಿ ಕಾರು ಜಖಂಗೊಳಿಸಿ ಚಾಲಕನ ಮೇಲೆ ಹಲ್ಲೆ ನಡೆಸಿದ ಆರೋಪದದಡಿ ಇಬ್ಬರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಓರ್ವ ಆರೋಪಿ ಮೇಲೆ ಈಗಾಗಲೇ ಅಪರಾಧ ಪ್ರಕರಣ ದಾಖಲಾಗಿದ್ದು ಜೈಲು ವಾಸದ ಬಳಿಕ ಇತ್ತೀಚಿಗೆ ಜಾಮೀನಿನ ಮೇಲೆ ಹೊರಬಂದಿದ್ದಾನೆ. ಚಾಲಕ ಹಾಗೂ ಸ್ಥಳೀಯರು ನೀಡಿದ ದೂರಿನ ಮೇಲೆ ಇಬ್ಬರ ಮೇಲೂ ಪ್ರಕರಣ ದಾಖಲಾಗಿದೆ.

ಧರ್ಮೆಗೌಡ, ಪೊಲೀಸ್ ಇನ್ಸ್‌ಪೆಕ್ಟರ್ ದೇವನಹಳ್ಳಿ

-------