ಜಿಲ್ಲೆ

ಠಾಣೆಯಲ್ಲೇ ಆತ್ಮಹತ್ಯೆಗೆ ಮಹಿಳೆ ಯತ್ನ

shastrimath

ಬೆಂಗಳೂರು: ಮನೆ ಭೋಗ್ಯಕ್ಕೆ ನೀಡುವುದಾಗಿ ಹಣ ಪಡೆದು ವಂಚಿಸಿದ್ದಾರೆಂದು ಕೋರಮಂಗಲ ಠಾಣೆಗೆ ದೂರು ಕೊಡಲು ಹೋಗಿದ್ದ ಮಹಿಳೆ, ಏಕಾಏಕಿ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದ್ದಾಳೆ. ತಕ್ಷಣ ಜಾಗರೂಕರಾದ ಪೊಲೀಸರು ಆತ್ಮಹತ್ಯೆ ತಪ್ಪಿಸಿದ್ದಾರೆ.

ನೀಲಸಂದ್ರ ನಿವಾಸಿ ಸಲ್ಮಾ ಕಾತುನ್ (27) ಗಾಯಾಳು. ಈಕೆಯನ್ನು ಪೊಲೀಸ್ ಬೆಂಗಾವಲಿನಲ್ಲಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೇ 9ರ ಬೆಳಗ್ಗೆ 11.50ರಲ್ಲಿ ಸಲ್ಮಾ ಕಾತುನ್, ಕೋರಮಂಗಲ ಠಾಣೆಗೆ ಬಂದಿದ್ದಾಳೆ. ತಾನು ನೀಲಸಂದ್ರದ ರೋಸ್​ಗಾರ್ಡನ್​ನಲ್ಲಿ ವಾಸವಿದ್ದೇನೆ. ಮಹಿಳೆಯೊಬ್ಬರು ಎರಡು ಮಹಡಿಯ ಮನೆಯನ್ನು ಭೋಗ್ಯಕ್ಕೆ ನೀಡುವುದಾಗಿ ತಿಳಿಸಿದ್ದರು. ಆಕೆಯ ಮಾತನ್ನು ನಂಬಿ 3.5 ಲಕ್ಷ ರೂ.ಗಳನ್ನು ಕೊಟ್ಟಿದ್ದೇನೆ. ಆದರೆ, ಈವರೆಗೂ ಮನೆಯನ್ನು ಬಿಟ್ಟುಕೊಟ್ಟಿಲ್ಲ. ಅಲ್ಲದೆ, ಕರಾರು ಪತ್ರ ಬರೆದುಕೊಟ್ಟಿಲ್ಲ ಎಂದು ಅಳಲನ್ನು ತೋಡಿಕೊಂಡಿದ್ದಳು.

ಸಮಸ್ಯೆ ಬಗೆಹರಿಸಲು ಸ್ಥಳಕ್ಕೆ ಭೇಟಿ ನೀಡಲು ಹೊಯ್ಸಳ ವಾಹನ ಕರೆಸಲಾಗಿತ್ತು. ಆ ವೇಳೆ ಮಹಿಳೆ ತನ್ನ ಬ್ಯಾಗ್​ನಲ್ಲಿ ಇಟ್ಟುಕೊಂಡು ಬಂದಿದ್ದ ಪೆಟ್ರೋಲ್ ಬಾಟಲಿಯನ್ನು ತೆಗೆದು ಮೈಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಮುಂದಾಗಿದ್ದಾಳೆ. ಕೂಡಲೇ ಎಚ್ಚೆತ್ತ ಮಹಿಳಾ ಸಿಬ್ಬಂದಿ, ಆಕೆಯ ಕೈಯಲ್ಲಿದ್ದ ಬೆಂಕಿಪೊಟ್ಟಣ ಕಸಿದುಕೊಂಡು ಪ್ರಮಾದವನ್ನು ತಪ್ಪಿಸಿದ್ದಾರೆ. ಬಳಿಕ ಪೊಲೀಸ್ ಬೆಂಗಾವಲಿನಲ್ಲಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಗೆ ದಾಖಲಿಸಲಾಗಿದೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಬಳಿಕ ಹೇಳಿಕೆ ಪಡೆದು ತನಿಖೆ ಕೈಗೊಳ್ಳಲಾಗುವುದಾಗಿ ಪೊಲೀಸರು ತಿಳಿಸಿದ್ದಾರೆ.