ಮೈಸೂರು: ಸ್ಕೂಟರ್‌ನಲ್ಲಿ 4.50 ಲಕ್ಷ ರೂ. ಮೌಲ್ಯದ ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಇತ್ತೀಚೆಗೆ ಪೊಲೀಸರು ಬಂಧಿಸಿದ್ದು, ಮತ್ತೊಬ್ಬ ಆರೋಪಿ ಪರಾರಿಯಾಗಿದ್ದಾನೆ.
ದಾಸಪ್ಪ ವೃತ್ತದ ಬಳಿ ವಾಹನ ತಪಾಸಣೆ ನಡೆಸುತ್ತಿದ್ದ ಸಂದರ್ಭ ಇಬ್ಬರು ಪ್ಲಾಸ್ಟಿಕ್ ಚೀಲವನ್ನು ಸ್ಕೂಟರ್ ಮುಂಭಾಗದಲ್ಲಿ ಇಟ್ಟುಕೊಂ ಡು ಬರುವುದು ಕಂಡು ಬಂತು. ವಾಹನ ನಿಲ್ಲಿಸುವಂತೆ ಸೂಚಿಸಿದಾಗ ಸ್ಕೂಟರ್‌ಅನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಲು ಯತ್ನಿಸಿದರು. ಈ ಸಂದರ್ಭ ಒಬ್ಬ ಆರೋಪಿಯನ್ನು ಸೆರೆ ಹಿಡಿದು 9.350 ಕೆ.ಜಿ. ಗಾಂಜಾವನ್ನು ವಶಕ್ಕೆ ಪಡೆಯಲಾಯಿತು.
ಡಿಸಿಪಿಗಳಾದ ಎಂ.ಮುತ್ತುರಾಜು, ಎಸ್. ಜಾಹ್ನವಿ ಮಾರ್ಗದರ್ಶನದಲ್ಲಿ ದೇವರಾಜ ಉಪ ವಿಭಾಗದ ಎಸಿಪಿ ಶಾಂತಮಲ್ಲಪ್ಪ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಇನ್ಸ್‌ಪೆಕ್ಟರ್ ಟಿ.ಬಿ. ಶಿವಕುಮಾರ್, ಪಿಎಸ್‌ಐ ಪ್ರಭು, ಸಿಬ್ಬಂದಿ ಮಧುಕೇಶ್, ಸೋಮಶೆಟ್ಟಿ, ಸುರೇಶ್, ವೇಣುಗೋಪಾಲ್, ನಂದೀಶ್, ಪ್ರದೀಪ್, ಮಾರುತಿರಾವ್ ಪಾಲ್ಗೊಂಡಿದ್ದರು.