ಜಿಲ್ಲೆ

23 ಲಕ್ಷ ರೂ ಮೌಲ್ಯದ ಮೊಬೈಲ್ ವಶ: ವಾರಸುದಾರರ ಕೈ ಸೇರಿದ 130 ಸ್ಮಾರ್ಟ್‌ಫೋನ್

ಕೆ.ಎನ್.ರಾಘವೇಂದ್ರ

ಮಂಡ್ಯ: ಜಿಲ್ಲೆಯಲ್ಲಿ ಕೆಲ ತಿಂಗಳಿಂದ ಕಳುವಾಗಿದ್ದ ಲಕ್ಷಾಂತರ ರೂ ಮೌಲ್ಯದ ಮೊಬೈಲ್‌ಗಳನ್ನು ಸೆಂಟರ್ ಎಕ್ಯೂಪ್ಮೆಂಟ್ ಐಡೆಂಟಿಟಿ ರಿಜಿಸ್ಟರ್(ಸಿಇಐಆರ್) ತಂತ್ರಾಶದ ಮೂಲಕ ವಶಪಡಿಸಿಕೊಂಡು ವಾರಸುದಾರರಿಗೆ ಒಪ್ಪಿಸುವಲ್ಲಿ ಮಂಡ್ಯ ಸಿ.ಇ.ಎನ್ ಪೊಲೀಸರು ಯಶಸ್ವಿಯಾಗಿದ್ದಾರೆ.

ನಗರದ ಪೊಲೀಸ್ ಭವನದಲ್ಲಿ ಗುರುವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಜಿಲ್ಲೆಯಲ್ಲಿ 759 ಮೊಬೈಲ್‌ಗಳ ಕಳ್ಳತನ ಪ್ರಕರಣಗಳು ವಿವಿಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಸಿ.ಇ.ಎನ್ ಪೊಲೀಸರ ತಂಡ ಸಿಇಐಆರ್ ತಂತ್ರಾಶದ ಸಹಾಯದಿಂದ ಕಾರ್ಯಾಚರಣೆ ನಡೆಸಿತು. ಅದರಂತೆ ಕಳುವಾಗಿದ್ದ ಮೊಬೈಲ್‌ಗಳನ್ನು ಪ್ರಸ್ತುತ ಬಳಕೆ ಮಾಡುತ್ತಿದ್ದವರನ್ನು ಸಂಪರ್ಕಿಸಿ ಠಾಣೆಗೆ ಒಪ್ಪಿಸುವಂತೆ ತಿಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಕೆಲವರು ನೇರವಾಗಿ ಹಾಗೂ ಕೊರಿಯರ್ ಮೂಲಕ ಠಾಣೆಗೆ ಕಳುಹಿಸಿದ್ದಾರೆ ಎಂದು ಹೇಳಿದರು.

ಒಂದು ತಿಂಗಳ ಅವಧಿಯಲ್ಲಿ ಸುಮಾರು 23 ಲಕ್ಷ ರೂ ಮೌಲ್ಯದ 130 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ರಾಜ್ಯ ಸೇರಿದಂತೆ ತಮಿಳುನಾಡು, ಕೇರಳದಿಂದಲೂ ಕೊರಿಯರ್ ಮೂಲಕ ಕಳುಹಿಸಿದ್ದಾರೆ. ಇನ್ನು ಹಲವು ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಬೈಲ್‌ಗಳು ಪತ್ತೆಯಾಗಬೇಕಿದೆ. ಅದರ ಬಗ್ಗೆಯೂ ಕಾರ್ಯಾಚರಣೆ ನಡೆಯುತ್ತಿದೆ. ಇನ್ನು 130ರಲ್ಲಿ ಒಂದು ಲಕ್ಷ ರೂ ಮೌಲ್ಯದಿಂದ 15 ಸಾವಿರ ರೂ ಮೌಲ್ಯದ ಮೊಬೈಲ್‌ಗಳಿವೆ ಎಂದು ವಿವರಿಸಿದರು.

ತನಿಖಾ ತಂಡದಲ್ಲಿದ್ದ ಸಿಇಎನ್ ಅಪರಾಧ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕ ಎನ್.ಜಯಕುಮಾರ್, ಪಿಎಸ್‌ಐಗಳಾದ ರಾಘವೇಂದ್ರ ಎಂ.ಕಠಾರಿ, ರಸೂಲಸಾಬ ಎಂ.ಗೌಂಡಿ, ಸಿಬ್ಬಂದಿ ಎ.ಎಂ.ರಾಜೇಅರಸ್, ಎಸ್.ಗಿರೀಶ್, ಎಚ್.ಆರ್.ಸುಮನ್ ಸೇರಿದಂತೆ ಎಲ್ಲರನ್ನು ಅಭಿನಂದಿಸಿ ಪ್ರಶಂಶೆ ಪತ್ರ ವಿತರಿಸಲಾಗಿದೆ ಎಂದು ಹೇಳಿದರು.

ಅಪರ ಪೊಲೀಸ್ ವರಿಷ್ಠಾಧಿಕಾರಿ ಸಿ.ಇ.ತಿಮ್ಮಯ್ಯ ಇದ್ದರು.