ಜಿಲ್ಲೆ

ಚಿನ್ನಾಭರಣ ಕದ್ದಿದ್ದವನ ಬಂಧನ

ನಾಗೇಶ ಎಸ್

ಶನಿವಾರಸಂತೆ: ಮನೆಯ ಬಾಗಿಲು ಮುರಿದು ಬೀರುವಿನಲ್ಲಿದ್ದ 51.5 ಗ್ರಾಂ ಚಿನ್ನಾಭಾರಣ ಕಳುವು ಮಾಡಿದ್ದ ಆರೋಪಿಯನ್ನು ಪತ್ತೆ ಮಾಡುವಲ್ಲಿ ಶನಿವಾರಸಂತೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಸಮೀಪದ ಸುಳುಗಳಲೆ ಕಾಲನಿ ನಿವಾಸಿ ಜೀವನ್(25) ಬಂಧಿತ ಆರೋಪಿ. ಇದೇ ಕಾಲನಿ ನಿವಾಸಿ ಬಿ.ಕೆ.ಸುಂದರ್ ಅವರು ಮೇ 24 ರಂದು ಮನೆಗೆ ಬೀಗ ಹಾಕಿಕೊಂಡು ಕೆಲಸಕ್ಕೆ ಹೋಗಿದ್ದರು. ಮಧ್ಯಾಹ್ನ ಸುಂದರ್ ಮಗಳು ಮನೆಗೆ ಬಂದಾಗ ಮನೆಯ ಬಾಗಿಲು ಮುರಿದಿರುವುದನ್ನು ಗಮನಿಸಿ ಮನೆಯೊಳಗೆ ನೋಡಿದಾಗ ಬೀರಿನಲ್ಲಿದ್ದ ಚಿನ್ನಾಭರಣ ಕಳುವಾಗಿರುವುದು ಗಮನಕ್ಕೆ ಬಂದಿದೆ. ಈ ಸಂಬಂಧ ಬಿ.ಕೆ.ಸುಂದರ್ ಶನಿವಾರಸಂತೆ ಪೊಲೀಸರಿಗೆ ದೂರು ನೀಡಿದ್ದರು.

ಪೊಲೀಸರು ಆರೋಪಿ ಪತ್ತೆಗೆ 2 ತಂಡಗಳನ್ನು ರಚಿಸಿ ಶೋಧ ಕಾರ್ಯ ನಡೆಸಿದ್ದರು. ಮೇ 27 ರಂದು ಆರೋಪಿಯನ್ನು ಪತ್ತೆ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, 43 ಗ್ರಾಂ ಚಿನ್ನಾಭರಣ ವಶ ಪಡಿಸಿಕೊಂಡಿದ್ದಾರೆ. ಈ ಸಂಬಂಧ ಪೊಲೀಸರು ಆರೋಪಿ ಜೀವನ್‌ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಡಿವೈಎಸ್‌ಪಿ ಗಂಗಾಧರಪ್ಪ, ಸಿಐ ಪ್ರೀತಮ್, ಪಿಎಸ್‌ಐ ಕೆ.ಆರ್.ರವಿಶಂಕರ್, ಶನಿವಾರಸಂತೆ ಪಿಎಸ್‌ಐ ಗೋವಿಂದ್‌ರಾಜ್, ಸಿಬ್ಬಂದಿ ಪಾಲ್ಗೊಂಡಿದ್ದರು.