ಜಿಲ್ಲೆ

ಅಪರಾಧ ತಡೆಗೆ ಕೈಜೋಡಿಸಿ

ಬೆಳಗಾವಿ: ಕಾನೂನು ಸುವ್ಯವಸ್ಥೆ ಕಾಪಾಡುವುದು ಮತ್ತು ಮಹಿಳೆ, ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಪೊಲೀಸ್ ಕಮಿಷನರೇಟ್ ಘಟಕ ತೆರೆದಿರುವ ಸಾಮಾಜಿಕ ಜಾಲತಾಣಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಸಂಚಾರ ಉಲ್ಲಂಘನೆ, ಅಪರಾಧ ಪ್ರಕರಣ ಸೇರಿ ಅಕ್ರಮ ಚಟುವಟಿಕೆ ನಿಯಂತ್ರಿಸುವ ನಿಟ್ಟಿನಲ್ಲಿ ನಗರ ಪೊಲೀಸರು ಒಂದೂವರೆ ವರ್ಷದ ಹಿಂದೆಯೇ ಜಾರಿಗೆ ತಂದಿರುವ ವಾಟ್ಸ್‌ಆ್ಯಪ್, ಫೇಸ್‌ಬುಕ್ ಹಾಗೂ ಟ್ವೀಟರ್‌ಗಳ ಫಾಲೋವರ್ಸ್‌ಗಳ ಸಂಖ್ಯೆ ಹೆಚ್ಚುತ್ತಿದೆ.

ದೂರು ಸಲ್ಲಿಕೆ: ಅಕ್ರಮ ಚಟುವಟಿಕೆ ತಡೆಗಟ್ಟುವುದಕ್ಕೆ ಇಲಾಖೆ ತೆರೆದಿರುವ ಫೇಸ್‌ಬುಕ್‌ಗೆ ಇದುವರೆಗೂ ಸುಮಾರು 32,176 ಸಾವಿರ ಫಾಲೋವರ್ಸ್‌ಗಳಾಗಿದ್ದಾರೆ. ಟ್ವೀಟರ್‌ನಲ್ಲಿ 1,735 ಜನರು ಅನುಸರಿಸುತ್ತಿದ್ದಾರೆ. ಪ್ರತಿನಿತ್ಯ ವಾಟ್ಸ್ ಆ್ಯಪ್ ಮೂಲಕ 15-20 ದೂರು ನೀಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ಸಲ್ಲಿಕೆಯಾಗುವ ದೂರುಗಳನ್ನು ಆಯುಕ್ತರ ಕಚೇರಿ ಸಿಬ್ಬಂದಿ ವರ್ಗ ಆಯಾ ಠಾಣಾಧಿಕಾರಿಗಳ ಕಚೇರಿಗೆ ಸಲ್ಲಿಸುತ್ತಿದ್ದಾರೆ.

ಯಾವುದೇ ದೂರಿದ್ದರೂ ಸಾರ್ವಜನಿಕರು ಪೊಲೀಸ್ ಠಾಣೆಗಳಿಗೆ ಬರುವುದಕ್ಕೆ ಹಿಂಜರಿಯುತ್ತಾರೆ. ಸಾರ್ವಜನಿಕರ ಸಮಸ್ಯೆಗಳನ್ನು ನಿವಾರಿಸಲೆಂದೇ ಸೋಷಿಯಲ್ ಮೀಡಿಯಾ ಬಳಕೆ ಮಾಡುತ್ತಿದ್ದೇವೆ. ಈ ಮೂಲಕ ಪೊಲೀಸ್ ಇಲಾಖೆಯನ್ನು ಇನ್ನಷ್ಟು ಜನಹ್ನೇಹಿ ಮಾಡಲು ಪ್ರಯತ್ನಿಸುತ್ತಿದ್ದೇವೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಸೈಬರ್ ಕ್ರೈಮ್ ತಡೆಗೆ ಜಾಗೃತಿ: ವಾಟ್ಸ್ ಆ್ಯಪ್‌ಗೆ ಕರೆ ಮಾಡಿ ದೂರು ಸಲ್ಲಿಸುವ ಸಾರ್ವಜನಿಕರಿಗೆ ಇಲಾಖೆ ಸಿಬ್ಬಂದಿ ಸೈಬರ್ ಕ್ರೈಮ್ ತಡೆಯುವ ಬಗ್ಗೆ ಜಾಗೃತಿ ಮೂಡಿಸುತ್ತಿದೆ. ಜತೆಗೆ ವೈಯಕ್ತಿಕ ರಕ್ಷಣೆ ಕುರಿತಂತೆ ಅರಿವು ಮೂಡಿಸುತ್ತಿದ್ದಾರೆ. ಹೀಗೆ ಸೋಷಿಯಲ್ ಮೀಡಿಯಾಗಳಲ್ಲಿ ದಾಖಲಾಗುತ್ತಿರುವ ದೂರು, ಸಮಸ್ಯೆಗಳಿಗೆ ಸ್ಪಂದಿಸುವುದರ ಜತೆಗೆ ಪೊಲೀಸ್ ಇಲಾಖೆ ತನ್ನ ಕಾರ್ಯವೈಖರಿಯಲ್ಲೂ ಬದಲಾವಣೆ ಮಾಡಿಕೊಳ್ಳುತ್ತಿದೆ. ವಾಟ್ಸ್ ಆ್ಯಪ್ ಮತ್ತು ಫೇಸ್‌ಬುಕ್ ಪೇಜ್‌ಗಳಲ್ಲಿ ದಾಖಲಾಗುತ್ತಿರುವ ಪ್ರತಿಕ್ರಿಯೆಗಳು, ದೂರುಗಳು ಪರಿಣಾಮಕಾರಿ ಬದಲಾವಣೆಗೆ ಕಾರಣವಾಗುತ್ತಿವೆ.

ಸಾರ್ವಜನಿಕರ ಸಮಸ್ಯೆಗಳಿಗೆ ಹಿರಿಯ ಅಧಿಕಾರಿಗಳು ಸ್ಪಂದಿಸುತ್ತಿರುವ ಉತ್ತಮ ಬೆಳವಣಿಗೆಯಾಗಿದೆ. ತುರ್ತು ಸಂದರ್ಭದಲ್ಲಿ ದೂರು, ಸಲಹೆ ನೀಡಿದ ವ್ಯಕ್ತಿಗಳಿಗೆ ವೈಯಕ್ತಿಕವಾಗಿಯೂ ಸಂದೇಶ ಕಳುಹಿಸಲಾಗುತ್ತಿದೆ.

ವಾಟ್ಸ್ ಆ್ಯಪ್ ಸಂಖ್ಯೆಗೆ ಸಮಸ್ಯೆ, ದೂರು ನೀಡಿ

ಸಾಮಾಜಿಕ ಜಾಲತಾಣಗಳ ಮೂಲಕ ದಾಖಲಾಗುತ್ತಿರುವ ದೂರುಗಳಲ್ಲಿ ಶೇ. 50ರಷ್ಟು ದೂರುಗಳು ಸಂಚಾರ ಉಲ್ಲಂಘನೆ ಪ್ರಕರಣಗಳೇ ಇರುತ್ತವೆ. ನಂತರದ ಸ್ಥಾನದಲ್ಲಿ ಜೂಜಾಟ, ಅಕ್ರಮ ಚಟುವಟಿಕೆಗಳ ಕುರಿತಂತೆ ಸಾರ್ವಜನಿಕರು ದೂರು ನೀಡುತ್ತಿದ್ದಾರೆ. ಪೊಲೀಸರು ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಲಾಗುತ್ತಿದೆ. ಸಾರ್ವಜನಿಕರು ತಮ್ಮ ಸುತ್ತಲಿನ ಪ್ರದೇಶದ ಸಮಸ್ಯೆ ಅಥವಾ ದೂರು ನೀಡಲು ವಾಟ್ಸ್ ಆ್ಯಪ್ 9483931100 ಸಂಖ್ಯೆ ಬಳಸಬಹುದು ಬೆಳಗಾವಿ ನಗರ ಪೊಲೀಸರು ತಿಳಿಸಿದ್ದಾರೆ.

ಅಪರಾಧ ಪ್ರಕರಣ ತಡೆಗಟ್ಟಲು ಸಾಮಾಜಿಕ ಮಾಧ್ಯಮಗಳೂ ಸಹಕಾರಿ ಆಗುತ್ತಿವೆ. ಇಲಾಖೆ ಸೃಷ್ಟಿಸಿರುವ ಫೇಸ್‌ಬುಕ್, ವಾಟ್ಸ್ ಆ್ಯಪ್‌ಗಳಿಗೆ ಜನರು ದೂರು ನೀಡುತ್ತಿದ್ದಾರೆ. ಇಲಾಖೆ ತೆರೆದಿರುವ ಫೇಸ್‌ಬುಕ್‌ನ ಫಾಲೋವರ್ಸ್‌ಗಳ ಸಂಖ್ಯೆಯೂ ಹೆಚ್ಚುತ್ತಿದೆ.| ಡಾ. ಕೆ.ತ್ಯಾಗರಾಜನ್ ಪೊಲೀಸ್ ಆಯುಕ್ತರು, ಬೆಳಗಾವಿ

| ಜಗದೀಶ ಹೊಂಬಳಿ ಬೆಳಗಾವಿ