ಜಿಲ್ಲೆ

ಸಾರ್ವಜನಿಕರ ಸಹಕಾರದಿಂದ ಅಪರಾಧ ನಿಯಂತ್ರಣ ಸಾಧ್ಯ

ಹುಬ್ಬಳ್ಳಿ: ಕರ್ನಾಟಕ ಪೊಲೀಸ್ ಸುವರ್ಣ ಮಹೋತ್ಸವ ವರ್ಷದ ನಿಮಿತ್ತ ಮಾದಕ ವಸ್ತುಗಳಿಂದ ಸಾರ್ವಜನರಿಕಗೆ ಉಂಟಾಗುವ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಲು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತಾಲಯದಿಂದ ಕರ್ನಾಟಕ ಪೊಲೀಸ್ ರನ್ ನಗರದಲ್ಲಿ ಭಾನುವಾರ ಏರ್ಪಡಿಸಲಾಗಿತ್ತು.
ಇಲ್ಲಿಯ ಬಿವಿಬಿ ಕಾಲೇಜ್ ಕ್ಯಾಂಪಸ್‌ನಲ್ಲಿ ಪೊಲೀಸ್ ರನ್‌ಗೆ ಹು-ಧಾ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ್ ಚಾಲನೆ ನೀಡಿದರು. ಇಲ್ಲಿಂದ ತೋಳನಕೆರೆವರೆಗೆ ನಡೆದ ನಡಿಗೆಯಲ್ಲಿ ವಿವಿಧ ಸೇವಾ ಸಂಘಟನೆಗಳ ಕಾರ್ಯಕರ್ತರು, ಎನ್‌ಜಿಒಗಳು, ವಿದ್ಯಾರ್ಥಿಗಳು ಸೇರಿದಂತೆ ಸಾವಿರಾರು ಜನರು ಪಾಲ್ಗೊಂಡಿದ್ದರು.
ತೋಳನಕೆರೆ ಉದ್ಯಾನದ ಬಯಲುರಂಗ ಮಂದಿರದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಪೊಲೀಸ್ ಸಿಬ್ಬಂದಿ, ಬಿವಿಬಿ ಕಾಲೇಜ್ ವಿದ್ಯಾರ್ಥಿಗಳು ಮಾದಕ ವಸ್ತುಗಳ ಸೇವನೆಯಿಂದಾಗುವ ಹಾನಿ, ಕೆವೈಸಿ ಅಪಡೇಟ್ ನೆಪದ ವಂಚನೆ, ಅಪ್ರಾಪ್ತರಿಗೆ ವಾಹನ ಚಾಲನೆ ಮಾಡದಂತೆ ನೋಡಿಕೊಳ್ಳುವುದು, ಬಂಗಾರ ತೊಳೆದು ಕೊಡುವ ನೆಪದಲ್ಲಿ ಮೋಸ ಹೀಗೆ ಹಲವು ಅಪರಾಧ ಪ್ರಕರಣಗಳು ಕುರಿತು ರೂಪಕ ಪ್ರದರ್ಶನ ನೀಡಿದರು.
ನಂತರ ಮಾತನಾಡಿದ ರೇಣುಕು ಸುಕುಮಾರ, ಸಾರ್ವಜನಿಕರ ಸಹಕಾರದಿಂದ ಅಪರಾಧ ತಡೆಯಬಹುದು. ಬೀದಿ ನಾಟಕ, ರೂಪ ಪ್ರದರ್ಶನದ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿ ಎಚ್ಚರಿಕೆಯ ಸಂದೇಶ ರವಾನಿಸುವ ಯತ್ನ ಇದಾಗಿದೆ ಎಂದರು.
ಸ್ವರ್ಣ ಗ್ರೂಪ್ ಆಫ್ ಕಂಪನಿಗಳ ವ್ಯವಸ್ಥಾಪಕ ನಿರ್ದೇಶಕ ಡಾ.ವಿ.ಎಸ್.ವಿ. ಪ್ರಸಾದ, ಡಿಸಿಪಿಗಳಾದ ಎಂ. ರಾಜೀವ, ಸಿ.ಆರ್. ರವೀಶ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಲೋಚನೇಶ ಹೂಗಾರ, ಕೆಎಲ್‌ಇ ತಾಂತ್ರಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಸಂಜಯ ಕೊಟಬಾಗಿ ಇತರರು ಉಪಸ್ಥಿತರಿದ್ದರು.