ಲಕ್ಷ್ಮೇಶ್ವರ: ಅಪರಾಧ ತಡೆ ಮಾಸಾಚರಣೆ ಮತ್ತು ರಸ್ತೆ ಸುರಕ್ಷತಾ ಅರಿವು ಅಭಿಯಾನದ ಅಂಗವಾಗಿ ಪಟ್ಟಣದಲ್ಲಿ ಶುಕ್ರವಾರ ಜನ ಜಾಗೃತಿ ಜಾಥಾ ನಡೆಸಲಾಯಿತು.
ಗದಗ ಜಿಲ್ಲಾ ಪೋಲಿಸ್, ಗದಗ ಉಪವಿಭಾಗ, ಶಿರಹಟ್ಟಿ ವೃತ್ತ ಹಾಗೂ ಪಟ್ಟಣದ ಪೋಲಿಸ್ ಠಾಣೆಯ ವತಿಯಿಂದ ಆಯೋಜಿಸಿದ್ದ ಅಭಿಯಾನದಲ್ಲಿ ಪಟ್ಟಣದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ ನಂ.4ರ ವಿದ್ಯಾರ್ಥಿಗಳು ಪಾಲ್ಗೊಂಡು ರಸ್ತೆ ಸುರಕ್ಷತೆಯ ಘೋಷಣೆಗಳನ್ನು ಮೊಳಗಿಸಿ ಜನ ಜಾಗೃತಿ ಮೂಡಿಸಿದರು. ಪಂಪವೃತ್ತದ ಬಳಿ ಮಾನವ ಸರಪಳಿ ನಿರ್ಮಿಸಿ ಗಮನ ಸೆಳೆದರು.
ಪಿಎಸ್‌ಐ ನಾಗರಾಜ ಗಡಾದ ಮಾತನಾಡಿ, ‘ಕಾನೂನಿನ ಅರಿನಿಂದಲೇ ಅಪರಾಧ ತಡೆಗಟ್ಟಲು ಸಾಧ್ಯ. ಪ್ರತಿ ಗ್ರಾಮದಲ್ಲಿ ಜನಸ್ನೇಹಿ ಪೊಲೀಸರನ್ನು ನೇಮಕ ಮಾಡಿದ್ದು, ಅವರ ವಿಳಾಸ, ಫೋನ್ ನಂಬರ್ ಆಯಾ ಗ್ರಾಮದಲ್ಲೇ ಸಿಗುತ್ತದೆ. ಕಡ್ಡಾಯವಾಗಿ ಹೆಲ್ಮೆಟ್ ಧರಿಸುವುದು ಕಾರು ಚಲಾಯಿಸುವಾಗ ಸೀಟ್ ಬೆಲ್ಟ್ ಧರಿಸುವುದು ಎಲ್ಲವೂ ಜೀವ ಉಳಿಸುವ ದಾರಿಗಳು ಹೊರತು ಕೇವಲ ಕಾನೂನುಗಳಲ್ಲ. ನಮ್ಮ ಜೀವವನ್ನು ಕಾಪಾಡಿಕೊಳ್ಳುವುದರ ಜತೆಗೆ ಇತರರ ಜೀವಕ್ಕೂ ಹಾನಿಯಾಗದಂತೆ ಎಚ್ಚರ ವಹಿಸುವಂತೆ ಕ್ರಮ ವಹಿಸಬೇಕು ಎಂದರು.
ಕೆಲವೆಡೆ ಮನೆಕಳ್ಳತನ, ವಾಹನ ಕಳ್ಳತನ ನಡೆಯುತ್ತಿದ್ದು, ಸಾರ್ವಜನಿಕರು ಬೇರೆ ಕಡೆ ತೆರಳುವ ಸಂದರ್ಭದಲ್ಲಿ ಮನೆಗಳಿಗೆ ಕೀಲಿ ಹಾಕಿ ಪೊಲೀಸರಿಗೆ ಮಾಹಿತಿ ನೀಡಿ ಅಪರಾಧಗಳನ್ನು ತಡೆಗಟ್ಟಲು ಸಹಕರಿಸಬೇಕು ಎಂದು ಸಲಹೆ ನೀಡಿದರು.