ಮೈಸೂರು: ಮನಸ್ಥಿತಿಯನ್ನು ನಿಯಂತ್ರಿಸುವ ಮೂಲಕ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡರೆ ಅಪರಾಧಗಳು ಕಡಿಮೆಯಾಗುತ್ತದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನಿಂದ ನಗರದ ಕೇಂದ್ರ ಕಾರಾಗೃಹದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಮನರಂಜನೆಯಿಂದ ಮನವಪರಿವರ್ತನೆ’ ಕನ್ನಡ ಗೀತೆಗಳ ರಸಮಂಜರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಯಾವುದೇ ದೇಶ ಅಭಿವೃದ್ಧಿ ಕಾಣಬೇಕಾದರೆ ಶೈಕ್ಷಣಿಕ ಪ್ರಗತಿ, ಆರೋಗ್ಯ ಪರಿಸ್ಥಿತಿ ಹಾಗೂ ನೈತಿಕತೆಯ ಮನಸ್ಥಿತಿ ಮುಖ್ಯವಾಗುತ್ತದೆ. ಮನಸ್ಥಿತಿ ಉದ್ದೀಪನಕ್ಕೆ ಧ್ಯಾನ ಮಾಡಿ ಪರಿಸ್ಥಿತಿ ನಿಯಂತ್ರಕಣಕ್ಕೆ ಮೌನ ವಹಿಸಿದರೆ ಪರಿಸ್ಥಿತಿಯನ್ನು ನಿಭಾಯಿಸಿ ಅಪರಾಧ ನಡೆಯದಂತೆ ತಡೆಯಬಹುದು ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇದೇ ಮೊದಲ ಬಾರಿಗೆ ಜೈಲಿನಲ್ಲಿ ರಾಜ್ಯೋತ್ಸವ ಅಂಗವಾಗಿ ಕಾರಾಗೃಹ ವಾಸಿಗಳಿಗಾಗಿ ವಿಶೇಷ ಕಾರ್ಯಕ್ರಮ ಏರ್ಪಡಿಸಿರುವುದು ಶ್ಲಾಘನೀಯ. ಇದರ ಸದುಪಯೋಗ ಮಾಡಿಕೊಂಡು ನಿಮ್ಮಲ್ಲಿ ಬದಲಾವಣೆಯಾಗಬೇಕು. ಕಗ್ಗತ್ತಲು ಹೋಗುವ ಕ್ಷಣ ಆಗಬೇಕು ಎಂದರು.
ಕೇಂದ್ರ ಕಾರಾಗೃಹ ಮುಖ್ಯ ಅಧೀಕ್ಷಕ ಪಿ.ಎಸ್. ರಮೇಶ್ ಮಾತನಾಡಿ, ಮನರಂಜನೆಯಿಂದ ಪರಿವರ್ತನೆ ಸಾಧ್ಯ ಎನ್ನುವುದನ್ನು ಮನಗಂಡು ಆಗಾಗ್ಗೆ ಹಲವು ಕಾರ್ಯಕ್ರಮಗಳನ್ನು ನೆಡಸಿಕೊಂಡು ಬರಲಾಗುತ್ತಿದೆ. ಪ್ರಜಾಪಿತ ಬ್ರಹ್ಮಕುಮಾರಿ, ಆರ್ಟ್ ಆಫ್ ಲಿವಿಂಗ್ ಸೇರಿದಂತೆ ಇನ್ನಿತರ ಸಂಸ್ಥೆಗಳ ಮೂಲಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದರು.
ಹಲವು ಸಜಾಬಂಧಿಗಳು ದಸರಾ ಕವಿಗೋಷ್ಠಿ ಸೇರಿದಂತೆ ಕೆಲ ವಿಷಯ ಕುರಿತು ಕವನ ವಾಚಿಸಲಿದ್ದಾರೆ. ಅಂತಹವರಿಗೆ ಉತ್ತೇಜನ ನೀಡಲಾಗುವುದು. ಮುಂದಿನ ದಿನಗಳಲ್ಲಿ ವಚನ ಕಮ್ಮಟ, ಜಾನಪದ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವ ಉದ್ದೇಶವಿದೆ ಎಂದರು.
ಕನ್ನಡ ಭಾಷೆ ಮತ್ತು ಸಂಸ್ಕೃತಿ ಶ್ರೀಮಂತವಾಗಿದೆ. ನಾಡು- ನುಡಿಗೆ ಉತ್ತೇಜನ ಕೊಡುವ ಕೆಲಸ ಆಗಬೇಕು. ಕನ್ನಡ ಬೆಳೆಸಲು ಎಲ್ಲರೂ ಕೈ ಜೋಡಿಸಬೇಕು ಎಂದು ಹೇಳಿದರು.
ಸುವರ್ಣ ಕರ್ನಾಟಕ ಸಂಭ್ರಮ 50ರ ಕುರಿತು ಕಸಾಪ ಜಿಲ್ಲಾ ಮಾಜಿ ಅಧ್ಯಕ್ಷ ಡಾ.ವೈ.ಡಿ. ರಾಜಣ್ಣ ಮಾತನಾಡಿ, ಏಕೀಕರಣ ಉದ್ದೇಶ ಸಫಲವಾಗಬೇಕು. ಕನ್ನಡಕ್ಕೆ ಆದ್ಯತೆ ದೊರೆಯಬೇಕು. ಆಲೂರು ವೆಂಕಟರಾಯರು, ದೇಶಪಾಂಡೆ, ದೊಡ್ಡಮೇಟಿ, ಡೆಪ್ಯೂಟಿ ಚನ್ನಬಸಪ್ಪ, ಕುವೆಂಪು, ಗೊರೂರು ರಾಮಸ್ವಾಮಿ ಅಯ್ಯಂಗಾರ್, ಕೆಂಗಲ್ ಹನುಮಂತಯ್ಯ ಮೊದಲಾದ ಮಹನೀಯರು ಏಕೀಕರಣ ಹೋರಾಟದಲ್ಲಿ ಭಾಗವಹಿಸಿದ್ದರು. ಮೆಸೂರು ರಾಜ್ಯಕ್ಕೆ ಕರ್ನಾಟಕ ಎಂಬ ನಾಮಕರಣ ಮಾಡಬೇಕು ಎಂಬುದು 1973 ರ ನ. 1 ರಂದು ಡಿ. ದೇವರಾಜ ಅರಸು ಅವರಿಂದ ಸಾಕಾರವಾಯಿತು ಎಂದು ವಿವರಿಸಿದರು.
ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಸಾಪ ಜಿಲ್ಲಾ ಮಾಜಿ ಅಧ್ಯಕ್ಷ ಎಂ. ಚಂದ್ರಶೇಖರ್ ಆಶಯ ಭಾಷಣ ಮಾಡಿದರು. ಕರಾಗೃಹದ ಸಹಾಯಕ ಅಧೀಕ್ಷಕಿ ದೀಪಾ, ಜೇಲರ್ ಧರಣೇಶ್ ಇದ್ದರು.
‘ಗಾನನಂದ’ ತಂಡದ ಎನ್. ಬೆಟ್ಟೇಗೌಡ, ಡಾ.ವೈ.ಡಿ. ರಾಜಣ್ಣ ಸೇರಿದಂತೆ ಇತರರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಕೇಂದ್ರ ಕಾರಾಗೃಹ ಸಂದರ್ಶಕ ಮಂಡಳಿ ಸದಸ್ಯರಾದ ಜಿಲ್ಲಾ ಕಸಾಪ ಉಪಾಧ್ಯಕ್ಷ ಜಾಕೀರ್ ಹುಸೇನ್, ಮತ್ತೊಬ್ಬ ಉಪಾಧ್ಯಕ್ಷ ಡೇರಿ ವೆಂಕಟೇಶ್, ಕಸಾಪ ಮೈಸೂರು ತಾಲೂಕು ಅಧ್ಯಕ್ಷ ಎ.ಸಿ. ಮಂಜುನಾಥ್, ಡಿ.ದೇವರಾಜ ಅರಸು ಪ್ರತಿಮೆ ಪ್ರತಿಷ್ಠಾಪನಾ ಸಮಿತಿ ಸಂಚಾಲಕ ರದಿವುಲ್ಲಾ ಖಾನ್, ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ಆರ್ಯ, ವಕೀಲರಾದ ಕೆ.ಎಸ್. ನಾಗರಾಜ್, ಮೆಹಬೂಬ್ ಷರೀಫ್, ಮುಖಂಡರಾದ ಬೋರೇಗೌಡ, ರಾಬರ್ಟ್, ಆಲ್ಬರ್ಟ್ ಇತರರು ಇದ್ದರು.