ಜಿಲ್ಲೆ

ಒತ್ತಾಯದಿಂದ ಜಮೀನು ಕಿತ್ತುಕೊಳ್ಳುವ ಯತ್ನ

Uttara Kannada - Subash Hegde

ಕಾರವಾರ: ಮುಂಡಗೋಡಿನಲ್ಲಿ ನಡೆದ ಜಮೀನು ಖರೀದಿ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕು ಮಾಡಿದ್ದಾರೆ. ಅಪಹರಣ ಮಾಡಿಕೊಂಡು ಹೋಗಿ, ಜೀವ ಬೆದರಿಕೆ ಹಾಕಿ ತಮ್ಮ ಜಮೀನನ್ನು ತಮ್ಮಿಂದ ಒತ್ತಾಯಪೂರ್ವಕವಾಗಿ ತಮ್ಮ ಹೆಸರಿಗೆ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಹಳೂರ ಓಣಿಯ ರೈತ ರಾಜೇಶ ಚಿದಾನಂದ ಹುಲಿಯಪ್ಪನವರ್ ಶಿರಸಿ ಠಾಣೆಯಲ್ಲಿ 6 ಜನರ ವಿರುದ್ಧ ದೂರು ದಾಖಲಿಸಿದ್ದರು. ಅದನ್ನು ಮುಂಡಗೋಡ ಠಾಣೆಗೆ ಹಸ್ತಾಂತರಿಸಲಾಗಿದೆ.

ಮುಂಡಗೋಡ ಪಟ್ಟಣದ ಜಮೀರ್ ಅಹ್ಮದ್ ದರ್ಗಾವಾಲೆ, ತೋಫಿನ್, ಸಾಧಿಕ ಚಾವೂಸ, ಸಾನು ಶಾನವಾಜ್, ಜಾಫರ್ ಕಾರ್ಪೆಂಟರ್, ಯೂಸೂಫ್ ಗಡವಾಲೆ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ರಾಜೇಶ ಅವರ 2.33 ಎಕರೆ ಜಮೀನನ್ನು ಎನ್‌ಎ ಮಾಡಿಸಿಕೊಡುತ್ತೇನೆ. ಶೇ.60 ಮತ್ತು 40 ರ ಅನುಪಾತದಲ್ಲಿ ವ್ಯವಹಾರ ಮಾಡೋಣ ಎಂದು ಹೇಳಿಕೊಂಡು 21.5 ಲಕ್ಷ ರೂ.ಗಳನ್ನು ಸಾಲಗಾರರಿಗೆ ನೀಡಿದ್ದ ದರ್ಗಾವಾಲೆ ಜಮೀನಿನ ಪತ್ರಗಳನ್ನು ಬಿಡಿಸಿದ್ದ ಎನ್ನಲಾಗಿದೆ. ನಂತರ ತಾನು ಹಾಗೂ ತನ್ನ ಸಹೋದರನನ್ನು ಅಪಹರಣ ಮಾಡಿಕೊಂಡು ಹೋಗಿ, ಬೆದರಿಕೆ ಹಾಕಿ ಒತ್ತಾಯಪೂರ್ವಕವಾಗಿ ಜಮೀನು ಮಾರಾಟ ಪತ್ರಕ್ಕೆ ಸಹಿ ಮಾಡಿಸಿಕೊಂಡಿದ್ದಾನೆ ಎಂದು ರಾಜೇಶ್ ದೂರಿನಲ್ಲಿ ತಿಳಿಸಿದ್ದಾರೆ.