ಜಿಲ್ಲೆ

ಗುಂಪು ಘರ್ಷಣೆಯಲ್ಲಿ ಗಾಯಗೊಂಡಿದ್ದ ವ್ಯಕ್ತಿ ಸಾವು, ಗೌಡಹಳ್ಳಿಯಲ್ಲಿ ಉದ್ರಿಕ್ತರಿಂದ ಮನೆ, ವಾಹನಗಳ ಮೇಲೆ ದಾಳಿ

Kolar

ಶ್ರೀನಿವಾಸಪುರ: ಗೌಡಹಳ್ಳಿಯಲ್ಲಿ ಮೇ 20ರಂದು ಗುಂಪುಗಳ ಘರ್ಷಣೆಯಲ್ಲಿ ಗಾಯಗೊಂಡಿದ್ದ ವ್ಯಕ್ತಿ ಭಾನುವಾರ ಮೃತಪಟ್ಟ ಹಿನ್ನೆಲೆಯಲ್ಲಿ ಉದ್ರಿಕ್ತ ಗುಂಪು ಎದುರಾಳಿ ಗುಂಪಿನ ಮನೆಗಳ ಮೇಲೆ ದಾಳಿ ನಡೆಸಿ ಬೈಕ್ ಹಾಗೂ ಟ್ರ್ಯಾಕ್ಟರ್‌ಗೆ ಬೆಂಕಿ ಹಚ್ಚಿದೆ.

ವೆಂಕಟಕೃಷ್ಣಪ್ಪ (54) ಮೃತರಾಗಿದ್ದು, 10 ಬೈಕ್, 3 ಟ್ರ್ಯಾಕ್ಟರ್‌ಗಳು ಭಸ್ಮವಾಗಿವೆ. ಸದ್ಯ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ.

ಮಾಸ್ತೇನಹಳ್ಳಿ ಗ್ರಾಪಂನ ಜಲಗಾರ ಗೌಡಹಳ್ಳಿಯ ರಾಮಚಂದ್ರಪ್ಪ ಮತ್ತು ಗ್ರಾಪಂನ ಜೆಡಿಎಸ್ ಬೆಂಬಲಿತ ಸದಸ್ಯ ವೆಂಕಟರೆಡ್ಡಿ ನಡುವೆ ಬುಧವಾರ ಗ್ರಾಪಂನಲ್ಲಿ ಗಲಾಟೆ ನಡೆದಿತ್ತು. ನನ್ನ ಸಂಬಳ ನಿಲ್ಲಿಸಲು ನೀನೇ ಕಾರಣ ಎಂದು ಜಲಗಾರ ಆರೋಪಿಸಿದ್ದರು. ಇದೇ ವಿಚಾರವಾಗಿ ಅಂದು ಸಂಜೆ ಗೌಡಹಳ್ಳಿಯಲ್ಲೂ ಇಬ್ಬರ ನಡುವೆ ಗಲಾಟೆ ನಡೆದಿತ್ತು. ಈ ಸಂದರ್ಭದಲ್ಲಿ ರಾಮಚಂದ್ರಪ್ಪ ಅವರ ಸಹಾಯಕ್ಕೆ ಸಹೋದರ ವೆಂಕಟಕೃಷ್ಣಪ್ಪ ಧಾವಿಸಿದಾಗ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಎರಡು ಗುಂಪುಗಳ ನಡುವೆ ಘರ್ಷಣೆಯಾಗಿ ವೆಂಕಟಕೃಷ್ಣಪ್ಪ ತಲೆಗೆ ಪೆಟ್ಟಾಗಿ ನಿಮ್ಹಾನ್ಸ್‌ಗೆ ದಾಖಲಾಗಿದ್ದರು. ಹಲ್ಲೆ ಸಂಬಂಧ ಮತ್ತೊಂದು ಗುಂಪಿನ ನಾರಾಯಣಮ್ಮ, ಮುನಿಯಪ್ಪ, ಶ್ರೀನಿವಾಸ್‌ಗೆ ಗಾಯಗಳಾಗಿರುವ ಬಗ್ಗೆ ಗ್ರಾಪಂ ಸದಸ್ಯ ವೆಂಕಟರೆಡ್ಡಿ ಠಾಣೆಗೆ ದೂರು ನೀಡಿದರೆ, ಗಾಯಾಳು ಕಡೆಯಿಂದ ಗ್ರಾಪಂ ಸದಸ್ಯ ಹಾಗೂ ಇತರರ ವಿರುದ್ಧ ಪ್ರತಿ ದೂರು ದಾಖಲಾಗಿತ್ತು.

ಈ ಮಧ್ಯೆ ವೆಂಕಟಕೃಷ್ಣಪ್ಪ ಅವರನ್ನು ನಿಮ್ಹಾನ್ಸ್‌ನಿಂದ ಶನಿವಾರ ಶ್ರೀನಿವಾಸಪುರ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಭಾನುವಾರ ಮಧ್ಯಾಹ್ನ ಮೃತಪಟ್ಟಿದ್ದಾರೆ.

ವೃತ್ತ ನಿರೀಕ್ಷಕ ರಾಘವೇಂದ್ರ ಪ್ರಸಾದ್ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದು, ಎಸ್ಪಿ ಕಾರ್ತಿಕ್‌ರೆಡ್ಡಿ ಗ್ರಾಮದಲ್ಲಿ ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ.

ಮರಣೋತ್ತರ ಪರೀಕ್ಷೆ ಮುಗಿದ ನಂತರ ಅಂತ್ಯಸಂಸ್ಕಾರ ನೆರವೇರಿಸುವಂತೆ ಎಸ್ಪಿ ಕಾರ್ತಿಕ್ ಸೂಚಿಸಿದಾಗ ಆಂಧ್ರದಿಂದ ಸಂಬಂಧಿಕರು ಬರಬೇಕಿರುವುದರಿಂದ ಈ ದಿನ ಸಾಧ್ಯವಿಲ್ಲ ಎಂದು ಪಟ್ಟು ಹಿಡಿದರು. ಸೋಮವಾರ ರಂಜಾನ್ ಇರುವುದರಿಂದ ಭದ್ರತಾ ವ್ಯವಸ್ಥೆಗೆ ಸಮಸ್ಯೆ ಆಗಲಿದ್ದು, ರಾತ್ರಿಯೇ ಅಂತ್ಯಸಂಸ್ಕಾರ ನೆರವೇರಿಸಬೇಕೆಂದು ಎಸ್ಪಿ ಖಡಕ್ ಸೂಚನೆ ನೀಡಿದರು.

9 ಜನರ ವಿರುದ್ಧ ದೂರು ದಾಖಲು: ಗ್ರಾಪಂ ಸದಸ್ಯ ವೆಂಕಟರೆಡ್ಡಿ, ನಾರಾಯಣಮ್ಮ, ನರಸಿಂಹಪ್ಪ, ಮುನಿಕೃಷ್ಣ, ಶ್ರೀನಿವಾಸ್ ಸೇರಿ 9 ಮಂದಿ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ. ಎರಡೂ ಗುಂಪಿನವರು ಭೋವಿ ಸಮುದಾಯದವರಾಗಿದ್ದಾರೆ. ಮೃತ ವ್ಯಕ್ತಿ ಕಾಂಗ್ರೆಸ್ ಬೆಂಬಲಿಗ, ಆರೋಪಿ ಜೆಡಿಎಸ್ ಬೆಂಬಲಿಗ ಎನ್ನಲಾಗಿದ್ದು ಘಟನೆ ಯಾವ ತಿರುವು ಪಡೆಯುತ್ತದೋ ಎಂದು ಜನ ಆತಂಕ ವ್ಯಕ್ತಪಡಿಸಿದ್ದಾರೆ.