ಅರಸೀಕೆರೆ: ತಾಲೂಕಿನ ಬಾಣಾವರ ಗ್ರಾಮ ಪಂಚಾಯಿತಿಯಲ್ಲಿ ಪ್ರಧಾನ ಮಂತ್ರಿ ಆವಾಸ್ ವಸತಿ ಯೋಜನೆ ಅಡಿ 93 ನಕಲಿ ಫಲಾನುಭವಿಗಳ ಖಾತೆಗೆ ತಲಾ 30 ಸಾವಿರ ರೂ. ಹಾಕಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟುಮಾಡಿದ್ದ ಆರೋಪದ ಮೇರೆಗೆ ಪಿಡಿಒ ಕುಮಾರಸ್ವಾಮಿಯನ್ನು ಡಿವೈಎಸ್ಪಿ ಬಿ.ಆರ್.ಗೋಪಿ ನೇತೃತ್ವದ ತಂಡ ಬುಧವಾರ ಹಾಸನದಲ್ಲಿ ಬಂಧಿಸಿದೆ.
ಭಾರಿ ಪ್ರಮಾಣದ ಅವ್ಯವಹಾರದ ಸುಳಿಗೆ ಸಿಲುಕಿದ್ದ ಆತ ಹಲವು ದಿನಗಳಿಂದ ಪೊಲೀಸರ ಕಣ್ಣು ತಪ್ಪಿಸಿ ಜಾಮೀನು ಪಡೆಯಲು ಕಸರತ್ತು ನಡೆಸುತ್ತಿದ್ದ ಎನ್ನಲಾಗಿದೆ. ಆರೋಪಿ ಹಾಸನಕ್ಕೆ ಬಂದಿರುವ ಖಚಿತ ಮಾಹಿತಿ ಪಡೆದು ಸಿನಿಮೀಯ ರೀತಿಯಲ್ಲಿ ವಶಕ್ಕೆ ಪಡೆಯಲಾಗಿದೆ. ಅವ್ಯವಹಾರದ ಕಿಂಗ್‌ಪಿನ್ ಮತ್ತೊಬ್ಬ ಪ್ರಮುಖ ಆರೋಪಿ ರಾಜೇಶ್‌ನನ್ನು ಪೊಲೀಸರು ಅರಸೀಕೆರೆ ನಗರದ ಖಾಸಗಿ ಲಾಡ್ಜ್ ನಲ್ಲಿ ಕಳೆದೆರಡು ದಿನಗಳ ಹಿಂದೆ ಬಂಧಿಸಿದ್ದರು.
ತಾಪಂ ಇಒ ಸೇರಿದಂತೆ ಉನ್ನತಾಧಿಕಾರಿಗಳ ಪಾಸ್ವರ್ಡ್ ದುರುಪಯೋಗ ಮಾಡಿಕೊಂಡು ಬಾಣಾವರ ಗ್ರಾಮ ಪಂಚಾಯಿತಿಯ 93 ಸೇರಿದಂತೆ ಒಟ್ಟು 347 ಜನರ ಖಾತೆಗೆ ತಲಾ 30 ಸಾವಿರ ರೂ. ಹಾಕಿದ್ದ ಆರೋಪ ಇವರ ಮೇಲಿದೆ. ವಸತಿ ಹಗರಣದ ಎಲ್ಲ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.