ಅರಸೀಕೆರೆ: ಪ್ರಧಾನ ಮಂತ್ರಿ ಆವಾಸ್ ವಸತಿ ಯೋಜನೆ ಅವ್ಯವಹಾರದ ಕಿಂಗ್‌ಪಿನ್, ಪ್ರಮುಖ ಆರೋಪಿ ರಾಜೇಶ್‌ನನ್ನು ಪೊಲೀಸರು ನಗರದ ಲಾಡ್ಜ್‌ವೊಂದರಲ್ಲಿ ಬಂಧಿಸಿದ್ದಾರೆ.
ತಾಪಂ ಇಒ ಸೇರಿದಂತೆ ಉನ್ನತಾಧಿಕಾರಿಗಳ ಪಾಸ್ವರ್ಡ್ ದುರುಪಯೋಗ ಮಾಡಿಕೊಂಡು ಸಕಲೇಶಪುರ ಒಳಗೊಂಡಂತೆ 347 ಜನರ ಖಾತೆಗೆ ತಲಾ 30 ಸಾವಿರ ರೂ. ಸಂದಾಯ ಮಾಡಿದ್ದ ಆರೋಪ ರಾಜೇಶ್ ಮೇಲಿತ್ತು. ಅಲ್ಲದೆ ತಾಲೂಕಿನ ಬಾಣಾವರ ಗ್ರಾಮ ಪಂಚಾಯಿತಿಯಲ್ಲಿ ಪಿಡಿಒ ಕುಮಾರಸ್ವಾಮಿ ಜತೆ ಶಾಮೀಲಾಗಿ ವಸತಿ ಯೋಜನೆ ಫಲಾನುಭವಿಗಳನ್ನು ವಂಚಿಸಿ ಹಣ ಲಪಟಾಯಿಸಿದ್ದು, ಈ ಸಂಬಂಧ ಸಕಲೇಶಪುರ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಪೋಲಿಸರಿಗೆ ಸಿಕ್ಕಿ ಬಿದ್ದಿದ್ದಾನೆ. ಮತೊಬ್ಬ ಆರೋಪಿ ಬಾಣಾವರ ಪಿಡಿಒ ಕುಮಾರಸ್ವಾಮಿ ತಲೆಮರೆಸಿಕೊಂಡಿದ್ದಾನೆ. ವಸತಿ ಹಗರಣದ ಪ್ರಮುಖ ಆರೋಪಿ ಅರಸೀಕೆರೆ ನಗರದ ಲಾಡ್ಜ್‌ನಲ್ಲಿ ಸಿಕ್ಕಿ ಬಿದ್ದಿರುವುದು ಚರ್ಚೆಗೆ ಗ್ರಾಸವಾಗಿದೆ.