ಬಸಪ್ಪನದೊಡ್ಡಿ ಗ್ರಾಮದ ಆರೋಪಿ ನಾಪತ್ತೆ
ಹನೂರು : ತಾಲೂಕಿನ ಬಸಪ್ಪನದೊಡ್ಡಿ ಗ್ರಾಮದ ಮನೆಯೊಂದರಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಅಕ್ರಮವಾಗಿ ಸಂಗ್ರಹಿಸಿದ್ದ ಪಡಿತರ ಅಕ್ಕಿಯನ್ನು ರಾಮಾಪುರ ಪೊಲೀಸರು ಗುರುವಾರ ವಶಕ್ಕೆ ಪಡೆದಿದ್ದಾರೆ.
ಗ್ರಾಮದ ಸಲೀಂ ಎಂಬಾತ ಗ್ರಾಮಗಳಲ್ಲಿ ಜನರಿಂದ ಕಡಿಮೆ ಬೆಲೆಗೆ ಪಡಿತರ ಅಕ್ಕಿಯನ್ನು ಖರೀದಿಸಿ ಮನೆಯಲ್ಲಿ ಸಂಗ್ರಹಿಸಿದ್ದ. ಈ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಪ್ರಭಾರ ಆಹಾರ ನಿರೀಕ್ಷಕ ವಿಷ್ಣುಮೂರ್ತಿ ರಾಮಾಪುರ ಪೊಲೀಸರ ಗಮನಕ್ಕೆ ತಂದರು. ಬಳಿಕ ಸಬ್ ಇನ್ಸ್‌ಪೆಕ್ಟರ್ ಲೊಕೇಶ್, ವಿಷ್ಣುಮೂರ್ತಿ ಹಾಗೂ ಸಿಬ್ಬಂದಿ ತಂಡ ಮನೆಯ ಮೇಲೆ ದಾಳಿ ನಡೆಸಿ ಪರಿಶೀಲಿಸಿದಾಗ 643 ಕೆ.ಜಿ. ಪಡಿತರ ಅಕ್ಕಿ ಪತ್ತೆಯಾಯಿತು. ಅಕ್ಕಿಯನ್ನು ವಶಕ್ಕೆ ಪಡೆದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಾಪತ್ತೆಯಾಗಿರುವ ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.