ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಇವರು ಅಂಗಡಿಗಳಲ್ಲಿ ಒಂಟಿ ಮಹಿಳೆಯರು ವ್ಯಾಪಾರ ಮಾಡುತ್ತಿರುವುದನ್ನು ಗಮನಿಸುತ್ತಿದ್ದರು. ಗ್ರಾಹಕರ ಸೋಗಿನಲ್ಲಿ ಹೋಗಿ ಕತ್ತಿನಲ್ಲಿನ ಚಿನ್ನದ ಸರ ಕಸಿದು ಪರಾರಿಯಾಗುತ್ತಿದ್ದರು. ಕದ್ದ ಚಿನ್ನ ಮಾರಿ ಮೋಜು ಮಸ್ತಿ ಮಾಡುತ್ತಿದ್ದರು. ಹಣ ಖರ್ಚಾದ ಬಳಿಕ ಅದೇ ತಂತ್ರಗಾರಿಕೆ ನಡೆಸಿ ಮತ್ತೆ ಕಳ್ಳತನಕ್ಕಿಳಿಯುತ್ತಿದ್ದರು.
ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಇತ್ತೀಚಿಗೆ ಬಂಧಿಸಿದ ಕನಕಪುರದ ಸುಂದರೇಶ್ ಹಾಗೂ ಶಿವರಾಜ್ ಎಂಬ ಆರೋಪಿಗಳು ಪೊಲೀಸ್ ತನಿಖೆಯಲ್ಲಿ ತಮ್ಮ ಕಳ್ಳತನದ ತಂತ್ರಗಾರಿಕೆ ಬಗ್ಗೆ ಬಾಯ್ಬಿಟ್ಟಿದ್ದಾರೆ. ಅರಳುಮಲ್ಲಿಗೆಯಲ್ಲಿ ಇತ್ತೀಚಿಗೆ ನಡೆದಿದ್ದ ಮಹಿಳೆಯ ಮಾಂಗಲ್ಯ ಸರ ಅಪರಹರಣ ಪ್ರಕರಣ ಬೇಧಿಸಿದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ನಡೆಸಿದಾಗ ರಾಮನಗರ ಹಾಗೂ ಮಂಡ್ಯ ಜಿಲ್ಲೆಯಲ್ಲಿಯು ಇಂಥಹದ್ದೇ ಮಾದರಿಯಲ್ಲಿ ಚಿನ್ನದ ಸರಗಳನ್ನು ಅಪಹರಿಸಿರುವುದು ಪತ್ತೆಯಾಗಿದೆ.
ಅರಳುಮಲ್ಲಿಗೆಯಲ್ಲಿ ಸರ ಕಿತ್ತು ಪರಾರಿ: ಇದೇ ೆಬ್ರವರಿಯಲ್ಲಿ ಅರಳುಮಲ್ಲಿಗೆಯಲ್ಲಿ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದ ಮಹಿಳೆಯ ಮೇಲೆ ನಿಗಾವಹಿಸಿದ್ದ ಖದೀಮರು ಗ್ರಾಹಕರ ಸೋಗಿನಲ್ಲಿ ಹೋಗಿ ಬಿಸ್ಕೆಟ್ ಖರೀದಿಸಿದ್ದಾರೆ. ಉಳಿದ ಚಿಲ್ಲರೆ ನೀಡುವ ವೇಳೆ ಏಕಾಏಕಿ ಕುತ್ತಿಗೆಗೆ ಕೈಹಾಕಿ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಪ್ರಕರಣದ ಸುತ್ತಮುತ್ತಲಿನ ಸಿಸಿ ಕ್ಯಾಮರಾ ಮತ್ತಿತರ ಸಾಕ್ಷಾಧಾರಗಳ ಆಧಾರದ ಮೇಲೆ ಆರೋಪಿಗಳಿಬ್ಬರನ್ನು ಬಂಧಿಸಲಾಗಿತ್ತು.
ರಾಮನಗರದಲ್ಲೂ ಕೃತ್ಯ: ಕಳೆದ ಡಿಸೆಂಬರ್‌ನಲ್ಲಿ ರಾಮನಗರದ ಮುನಿಯಪ್ಪನದೊಡ್ಡಿ ಗ್ರಾಮದಲ್ಲಿ ಮುರಗಮ್ಮ ಎಂಬುವರು ಪೆಟ್ಟಿ ಅಂಗಡಿಯಲ್ಲಿ ವ್ಯಾಪಾರ ಮಾಡುವ ವೇಳೆ ಗ್ರಾಹಕರ ಸೋಗಿನಲ್ಲಿ ಹೋಗಿದ್ದ ಖದೀಮರು ಬಿಸ್ಕೆಟ್ ಖರೀದಿಸುವಂತೆ ನಟಿಸಿದ್ದಾರೆ ಬಿಸ್ಕೆಟ್ ಪಡೆದು ಚಿಲ್ಲರೆ ಹಣ ಪಡೆಯುವ ವೇಳೆ ಕತ್ತಿಗೆ ಕೈಹಾಕಿ ಸರ ಕಿತ್ತುಕೊಂಡು ಪರಾರಿಯಾಗಿದ್ದರು. ದೊಡ್ಡಬಳ್ಳಾಪುರ ಪೊಲೀಸರ ತನಿಖೆಯಲ್ಲಿ ಈ ವಿಷಯ ಬಾಯ್ಬಿಟ್ಟಿದ್ದರು. ಮಂಡ್ಯ ಜಿಲ್ಲೆಯಲ್ಲಿಯೂ ಇದೇ ತಂತ್ರ ಅನುಸರಿಸಿದ್ದ ಕಳ್ಳರು ಅಲ್ಲಿನ ಪೊಲೀಸರ ಬಲೆಗೆ ಬಿದ್ದು ಜೈಲು ಪಾಲಾಗಿದ್ದರು. ಜಾಮೀನಿನ ಮೇಲೆ ಹೊರಬಂದು ಮತ್ತೆ ಕಳ್ಳತನಕ್ಕೆ ಇಳಿದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ವೃದ್ಧೆಯರೇ ಟಾರ್ಗೆಟ್: ಕಳ್ಳರಿಬ್ಬರು ಕನಕಪುರ ಮೂಲದವರಾಗಿದ್ದು, ಅಲ್ಲಿನ ಮಠವೊಂದರಲ್ಲಿ ಅಮಾಕರಂತೆ ವಾಸ ಮಾಡುತ್ತಿದ್ದರು. ವೃದ್ಧೆಯರನ್ನೇ ಗುರಿಯಾಗಿಸಿಕೊಂಡು ಸರ ದೋಚುತ್ತಿದ್ದರು. ಸರಗಳವು ಮಾಡಲೆಂದೇ ಬೈಕ್ ಖರೀದಿಸಿದ್ದರು ಎಂಬುದು ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ.
ಸರ ಒಪ್ಪಿಸಿದ ಪೊಲೀಸರು: ಪ್ರಕರಣ ಬೇಧಿಸಿದ ಪೊಲೀಸರು ಕದ್ದ ಚಿನ್ನದ ಸರವನ್ನು ವಶಕ್ಕೆ ಪಡೆದು ಅರಳುಮಲ್ಲಿಗೆಯಲ್ಲಿ ಸರ ಕಳೆದುಕೊಂಡಿದ್ದ ವೃದ್ಧೆಯನ್ನು ಠಾಣೆಗೆ ಕರೆಸಿ ಅವರಿಗೆ ವಾಪಸ್ ಕೊಡಿಸಿದ್ದಾರೆ. ಪ್ರಕರಣ ನಡೆದ ಒಂದೂವರೆ ತಿಂಗಳಲ್ಲಿ ಆರೋಪಿಗಳನ್ನು ಬಂಧಿಸಿ ಸರ ವಾಪಸ್ ಕೊಡಿಸಿದ್ದಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ಸಾದಿಕ್‌ಪಾಷಾ ಅವರಿಗೆ ವೃದ್ಧೆ ಕುಟುಂಬದವರು ಧನ್ಯವಾದ ಅರ್ಪಿಸಿದ್ದಾರೆ.
ರೂಂ ಮಾಡಿಕೊಂಡಿದ್ದ ಪೊಲೀಸರು: ದೊಡ್ಡಬಳ್ಳಾಪುರ ವ್ಯಾಪ್ತಿಯಲ್ಲಿ ಸರಕಳ್ಳತನ ಪ್ರಕರಣ ಹೆಚ್ಚಾದ ಹಿನ್ನೆಲೆಯಲ್ಲಿ ಅಪರಾಧ ವಿಭಾಗದ ಪೊಲೀಸರ ತಂಡ ಕಾರ್ಯಾಚರಣೆ ರೂಪಿಸಿತ್ತು. ಕಳವು ಪ್ರಕರಣ ಸುತ್ತಮುತ್ತಲ ಸಿಸಿ ಟಿವಿ ಕ್ಯಾಮರಾಗಳ ಪರಿಶೀಲನೆಯಲ್ಲಿ ಬೈಕ್‌ನಲ್ಲಿ ಅನುಮಾಸ್ಪದವಾಗಿ ಸಂಚರಿಸುತ್ತಿದ್ದ ಇಬ್ಬರು ಅಪರಿಚಿತರ ಬಗ್ಗೆ ಅನುಮಾನ ಮೂಡಿತ್ತು. ಇದರ ಜಾಡು ಹಿಡಿದು ಹೊರಟ ಪೊಲೀಸರ ಕೈಗೆ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಇದಕ್ಕಾಗಿಯೇ ಸಾಮಾನ್ಯಜನರಂತೆ ರೂಂ ಮಾಡಿಕೊಂಡು ವಾರಗಟ್ಟಲೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು ಎನ್ನಲಾಗಿದೆ.
ಸರಕಳ್ಳತನ ಪ್ರಕರಣ ಬೇಧಿಸುವುದು ಸವಾಲಿನ ಕೆಲಸವಾಗಿರುತ್ತದೆ, ಅಪರಿಚಿತ ವ್ಯಕ್ತಿಗಳು ಸರ ಕಿತ್ತುಕೊಂಡು ಪರಾರಿಯಾಗಿರುತ್ತಾರೆ ಎಲ್ಲಿಂದಲೂ ಬಂದು ಇನ್ನೆಲ್ಲಿಯೋ ಕೃತ್ಯ ಎಸಗಿರುತ್ತಾರೆ. ಆದರೂ ಇದನ್ನು ಗಂಭೀರವಾಗಿ ಪರಿಗಣಿಸಿ ಕಾರ್ಯಾಚರಣೆ ರೂಪಿಸಲಾಗಿತ್ತು. ಪ್ರಕರಣ ನಡೆದ ಸ್ಥಳದ ಸುಮಾರು 100 ಕಿ.ಮೀ ವ್ಯಾಪ್ತಿಯಲ್ಲಿನ ಸಿಸಿ ಕ್ಯಾಮರಾಗಳ ದೃಶ್ಯಾವಳಿ ಸಹಾಯದಿಂದ ಆರೋಪಿಗಳನ್ನು ಬಂಧಿಸಲಾಗಿದೆ. ಇದರಲ್ಲಿ ನಮ್ಮ ಅಪರಾಧ ವಿಭಾಗದ ಸಿಬ್ಬಂದಿ ಬಹಳಷ್ಟು ಶ್ರಮಿಸಿದ್ದಾರೆ.
ಸಾದಿಕ್‌ಪಾಷಾ, ಇನ್ಸ್‌ಪೆಕ್ಟರ್, ದೊಡ್ಡಬಳ್ಳಾಪುರ ಗ್ರಾಮಾಂತರ