ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಬೆಳಾಲು ಗ್ರಾಮದ ಕೊಡೋಳುಕೆರೆ-ಮಯಾ ರಸ್ತೆಯ ಮುಂಡ್ರೋಟ್ಟು ಕಾಡಿನಲ್ಲಿ ಮಾ.22ರಂದು ಬೆಳಗ್ಗೆ ಎರಡೂವರೆ ತಿಂಗಳ ಹೆಣ್ಣು ಮಗುವನ್ನು ಬಿಟ್ಟು ಹೋಗಿರುವ ಪ್ರಕರಣಕ್ಕೆ ಸಂಬಂಧಿಸಿ ಧರ್ಮಸ್ಥಳ ಪೊಲೀಸರು ಮಗುವಿನ ಪಾಲಕರನ್ನು ಪತ್ತೆಹಚ್ಚಿದ್ದು, ಬೆಳಾಲು ಗ್ರಾಮದ ಮಾಯಾ ನಿವಾಸಿ ರಂಜಿತ್ ಗೌಡ ಎಂಬಾತನನ್ನು ಬುಧವಾರ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಮಾ.22ರಂದು ಬೆಳಗ್ಗೆ ಸ್ಥಳೀಯ ನಿವಾಸಿ ಗುಲಾಬಿ ಎಂಬುವವರು ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ಕಾಡಿನ ಮಧ್ಯೆ ಮಗು ಕೂಗುವ ಶಬ್ದ ಕೇಳಿಸಿತ್ತು. ಅಲ್ಲಿಯೇ ಸೊಪ್ಪಿಗಾಗಿ ಬಂದವರಲ್ಲಿ ವಿಷಯ ತಿಳಿಸಿ, ಮಗು ಅಳುತ್ತಿರುವ ಸ್ಥಳಕ್ಕೆ ಬಂದು ನೋಡಿದಾಗ ಬಟ್ಟೆಯಲ್ಲಿ ಸುತ್ತಿ ಮಲಗಿಸಿದ ಸ್ಥಿತಿಯಲ್ಲಿ ಮಗು ಪತ್ತೆಯಾಗಿತ್ತು. ಬಳಿಕ ಬೆಳಾಲು ಗ್ರಾಪಂ ಅಧ್ಯಕ್ಷೆ ವಿದ್ಯಾಶ್ರೀನಿವಾಸ್ ಹಾಗೂ ಗ್ರಾಮಸ್ಥರಾದ ಪ್ರೇಮಾ ಕೊಲ್ಪಾಡಿ, ಪ್ರೇಮಾ, ಮಾಯಾ ಹಾಗೂ ಆಶಾ ಕಾರ್ಯತೆಯರು, ಆರೋಗ್ಯ ಇಲಾಖೆಯ ಸಿಎಚ್‌ಒ ಘಟನಾ ಸ್ಥಳಕ್ಕೆ ಆಗಮಿಸಿ ಮಗುವನ್ನು ರಕ್ಷಿಸಿ, ಧರ್ಮಸ್ಥಳ ಪೊಲೀಸರ ಸಮ್ಮುಖ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ವಶಕ್ಕೆ ಒಪ್ಪಿಸಿದ್ದರು. ಬಳಿಕ ಪುತ್ತೂರು ರಾಮಕೃಷ್ಣ ಅಶ್ರಮಕ್ಕೆ ಹಸ್ತಾಂತರಿಸಲಾಗಿತ್ತು. ಬೆಳ್ತಂಗಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ಅನ್ನಪೂರ್ಣ ಅವರು ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅದರಂತೆ ಪ್ರಕರಣ ದಾಖಲಾಗಿತ್ತು.
ಅವಿವಾಹಿತರಿಗೆ ಜನಿಸಿದ ಶಿಶು
ವಿವಿಧ ಮೂಲಗಳಿಂದ ಮಾಹಿತಿ ಸಂಗ್ರಹಿಸಿದ ಧರ್ಮಸ್ಥಳ ಪೊಲೀಸರ ತಂಡ ರಂಜಿತ್ ಗೌಡನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ರಂಜಿತ್ ಗೌಡ ಧರ್ಮಸ್ಥಳದ ನಿವಾಸಿ ಯುವತಿಯನ್ನು ಪ್ರೀತಿಸುತ್ತಿದ್ದು, ಮದುವೆಯಾಗುವ ಭರವಸೆಯೊಂದಿಗೆ ಸಂಬಂಧ ಬೆಳೆಸಿ ಮಗು ಜನಿಸಿತ್ತು. ನಂತರ ಅವರೊಳಗೆ ಮನಸ್ತಾಪ ಉಂಟಾಗಿ, ಯುವತಿ ಮಗುವನ್ನು ಯವಕನ ಮನೆಗೆ ತಂದು ಬಿಟ್ಟು ಹೋಗಿದ್ದಾಳೆ ಎನ್ನಲಾಗುತ್ತಿದೆ. ಇದರಿಂದ ಕಂಗೆಟ್ಟ ಯುವಕ ಮಗುನ್ನು ಕಾಡಿಗೆ ತಂದು ಬಿಟ್ಟಿದ್ದಾನೆ ಎಂದು ತನಿಖೆಯಿಂದ ಗೊತ್ತಾಗಿದೆ. ಪ್ರಕರಣದ ಸತ್ಯಾಸತ್ಯತೆ ಪೊಲೀಸರ ವಿಚಾರಣೆ, ಡಿಎನ್‌ಎ ಟೆಸ್ಟ್ ಬಳಿಕವಷ್ಟೇ ಬೆಳಕಿಗೆ ಬರಬೇಕಾಗಿದೆ.