ಜಿಲ್ಲೆ

ನರ್ಸ್ ಸಾವಿನ ಸುತ್ತ ಅನುಮಾನ

ಸೌಮ್ಯ ಆರ್

ಕಾಸರಗೋಡು: ಕುಂಬಳೆ ಸನಿಹದ ಬಂದ್ಯೋಡಿನ ಖಾಸಗಿ ಆಸ್ಪತ್ರೆ ದಾದಿ ಕೊಲ್ಲಂ ತೆನ್ಮಲ ನಿವಾಸಿ ಸ್ಮತಿ(20)ಸಾವಿನ ಬಗ್ಗೆ ಸಂಶಯ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಮೃತದೇಹ ಉನ್ನತ ವೈದ್ಯಕೀಯ ತಪಾಸಣೆಗಾಗಿ ಕೋಯಿಕ್ಕೋಡಿನ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದೆ.

ಪುತ್ರಿ ನೇಣಿಗೆ ಶರಣಾಗಿಲ್ಲ. ಆಕೆಯನ್ನು ಕೊಲೆಗೈದು ನೇಣಿಗೆ ಹಾಕಲಾಗಿದೆ ಎಂಬುದಾಗಿ ಸ್ಮತಿ ತಂದೆ ಕೋಮಳರಾಜನ್ ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಮಗ್ರ ಮರಣೋತ್ತರ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ. ಮೂರು ತಿಂಗಳ ಹಿಂದೆ ಆಸ್ಪತ್ರೆಗೆ ಟ್ರೈನಿ ದಾದಿಯಾಗಿ ಸೇರ್ಪಡೆಗೊಂಡಿದ್ದ ಅವರ ಮೃತದೇಹ ಆಸ್ಪತ್ರೆ ಹಿಂಭಾಗದಲ್ಲಿ ವಾಸ್ತವ್ಯವಿದ್ದ ಹಾಸ್ಟೆಲ್ ಕೊಠಡಿಯ ಕಿಟಕಿ ಸರಳಿಗೆ ನೇಣಿನಲ್ಲಿ ನೇತಾಡುವ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಅಸಹಜ ಸಾವಿನ ಬಗ್ಗೆ ಕುಂಬಳೆ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.