ವಿಜಯವಾಣಿ ಸುದ್ದಿಜಾಲ ಕಾಸರಗೋಡು
ಮಂಜೇಶ್ವರ ಸನಿಹದ ಪೈವಳಿಕೆಯಲ್ಲಿ ಜುಲೈ 3ರಂದು ನಾಗರ ಹಾವು ಕಡಿದ ಪರಿಣಾಮ ಗೃಹಿಣಿ ದಾರುಣವಾಗಿ ಮೃತಪಟ್ಟಿದ್ದು, ಇದಾದ ಎರಡನೇ ದಿನ ಅದೇ ಮನೆಯಲ್ಲಿ ನಡೆದಿರುವ ವಿಚಿತ್ರ ಘಟನೆ ಕುಟುಂಬದವರಲ್ಲಿ ಹಾಗೂ ಆಸುಪಾಸಿನವರಲ್ಲಿ ಆಶ್ಚರ್ಯ ಆತಂಕಕ್ಕೂ ಕಾರಣವಾಗಿದೆ.
ಪೈವಳಿಕೆ ಕುರುಡಪದವು ನಿವಾಸಿ ದಿ. ಮಾಂಕು ಎಂಬುವರ ಪತ್ನಿ ಚೋಮು(64)ಜುಲೈ 3ರಂದು ನಾಗರಹಾವು ಕಡಿದ ಪರಿಣಾಮ ಸಾವನ್ನಪ್ಪಿದ್ದರು. 4ರಂದು ಅವರ ಅಂತ್ಯಸಂಸ್ಕಾರ ನಡೆದಿತ್ತು. ಅಂದು ರಾತ್ರಿ ಸಂಪ್ರದಾಯದಂತೆ ಮನೆಯೊಳಗೆ ನೀರು ಇರಿಸುವ ಕ್ರಿಯೆ ನಡೆದಿತ್ತು. ಸುತ್ತು ಬೂದಿ ಹರಡಿ, ಮಧ್ಯದಲ್ಲಿ ಚೊಂಬಿನಲ್ಲಿ ನೀರು ಇರಿಸಲಾಗಿತ್ತು. ಮರುದಿನ ಬೆಳಗ್ಗೆ ನೋಡಿದಾಗ ಚೊಂಬಿನಲ್ಲಿದ್ದ ನೀರು ಖಾಲಿಯಾಗಿತ್ತು. ಇನ್ನು ಸುತ್ತು ಹರಡಿದ್ದ ಬೂದಿಯಲ್ಲಿ ಹಾವು ಹರಿದಾಡಿದ ಗುರುತು ಪತ್ತೆಯಾಗಿದೆ!
ಆ ದಿನ ಮನೆ ಬಾಗಿಲುಗಳನ್ನು ಭದ್ರಪಡಿಸಿ, ಮನೆಯವರಲ್ಲದೆ ಅವರ ಸಂಬಂಧಿಕರಾದ ನಾಲ್ಕು ಮಂದಿ ಜಗಲಿಯಲ್ಲಿ ಮಲಗಿದ್ದರು. ಮನೆಯೊಳಗೆ ನಡೆದಿರುವ ವಿಚಿತ್ರ ಘಟನೆಯಿಂದ ಆತಂಕಗೊಂಡ ಮನೆಯವರು ಎಲ್ಲ ಕೊಠಡಿಗಳನ್ನೂ ಮತ್ತೆ ಹುಡುಕಾಡಿದ್ದಾರೆ. ಚೋಮು ಅವರಿಗೆ ಕಡಿದಿದ್ದ ನಾಗರಹಾವನ್ನು ಉರಗತಜ್ಞರನ್ನು ಕರೆಸಿ, ಸೆರೆಹಿಡಿದು ದೂರದ ಕಾಡಿಗೆ ಬಿಡಲಾಗಿತ್ತು. ಇನ್ನು ಮನೆಯೊಳಗೆ ಹಾವು ಹೇಗೆ ಬರಲು ಸಾಧ್ಯ ಎಂಬುದು ಇಲ್ಲಿದ್ದವರಲ್ಲಿ ಯಕ್ಷ ಪ್ರಶ್ನೆಯಾಗಿ ಉಳಿದಿದೆ.