oppo_2 
ಜಿಲ್ಲೆ

ಹನೂರಿನಲ್ಲಿ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ

ಲಲಾಟಾಕ್ಷ ಎಸ್

ಹನೂರು: ಪಟ್ಟಣದ ಶ್ರೀ ಮಲೆಮಹದೇಶ್ವರ ಕ್ರೀಡಾಂಗಣದಲ್ಲಿ ಹನೂರು ಲೆಜೆಂಡ್ಸ್ ಕ್ರಿಕೆಟರ್ಸ್‌ ವತಿಯಿಂದ 2 ದಿನಗಳ ಕಾಲ 40 ವರ್ಷ ಮೇಲ್ಪಟ್ಟವರಿಗೆ ಆಯೋಜಿಸಿರುವ ಕ್ರಿಕೆಟ್ ಪಂದ್ಯಾವಳಿಗೆ ಶನಿವಾರ ಚಾಲನೆ ನೀಡಲಾಯಿತು.


ಶ್ರೀ ವಿವೇಕಾನಂದ ಕಾಲೇಜಿನ ಪ್ರಾಂಶುಪಾಲ ಮಧುಸೂದನ್ ಮಾತನಾಡಿ, ಹನೂರಿನಲ್ಲಿ ಕ್ರಿಕೆಟ್ ಹೆಚ್ಚು ಪ್ರಸಿದ್ಧಿ ಪಡೆದಿದ್ದು ಉತ್ತಮ ಆಟಗಾರರಿದ್ದರು. ಇಲ್ಲಿನ ಆಟಗಾರರ ಪೈಕಿ ಹಲವರು ಸರ್ಕಾರಿ ಉದ್ಯೋಗ, ಸ್ವ ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದು ಬೆಂಗಳೂರು, ಮೈಸೂರು, ಮಂಡ್ಯ ಹಾಗೂ ಇನ್ನಿತರ ಕಡೆಗಳಲ್ಲಿ ಹಂಚಿ ಹೋಗಿದ್ದರು. ಜತೆಗೆ ಕೆಲಸದ ಒತ್ತಡದಿಂದ ಕ್ರೀಡಾಪಟುಗಳು ಎಲ್ಲರೂ ಒಂದೆಡೆ ಸೇರಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಕ್ರಿಕೆಟ್ ಆಟಗಾರರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಹನೂರು ಲೆಜೆಂಡ್ಸ್ ಕ್ರಿಕೆಟರ್ಸ್‌ ವತಿಯಿಂದ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿರುವುದು ನಿಜಕ್ಕೂ ಮೆಚ್ಚುವ ಸಂಗತಿ. ಇದರಿಂದ ಸ್ನೇಹ, ಬಾಂಧವ್ಯ ವೃದ್ಧಿಸಲು ಸಹಕಾರಿಯಾಗಿದೆ ಎಂದು ತಿಳಿಸಿದರು.


ಶಿಕ್ಷಕ ನಾಗರಾಜು ಮಾತನಾಡಿ, ಕ್ರಿಕೆಟ್ ಪಂದ್ಯಾವಳಿಯನ್ನು ಪ್ರತಿ ವರ್ಷ ನಡೆಸಲಾಗುವುದು. ವಿಜೇತ ತಂಡಕ್ಕೆ ಪ್ರಥಮ ಹಾಗೂ ದ್ವಿತೀಯ ಬಹುಮಾನವನ್ನು ನೀಡಲಾಗುವುದು ಎಂದು ತಿಳಿಸಿದರು. ಇದಕ್ಕೂ ಮುನ್ನ ನಿಧನ ಹೊಂದಿದ ಹಿರಿಯ ಹಾಗೂ ಕಿರಿಯ ಕ್ರಿಕೆಟ್ ಆಟಗಾರರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.


ಸುಂದರ್, ಆನಂದ್, ಹರೀಶ್, ಮಂಜೇಶ್, ನಂದೀಶ್, ಅಶೋಕ್, ಶ್ರೀನಿವಾಸ ನಾಯ್ಡು, ವೆಂಕಟೇಶ್, ಶಶಿ, ನಾಗರಾಜು, ನಿಂಗರಾಜು ಇತರರಿದ್ದರು.