ದಾವಣಗೆರೆ: ಆರಂಭಿಕ ಬ್ಯಾಟ್ಸ್‌ಮನ್ ಭರ್ಜರಿ ಬ್ಯಾಟಿಂಗ್ ನಿಂದ ಅವೆಂಜರ್ಸ್ ತಂಡ, ಸಿ ಸ್ಟಾರ್ ಕ್ರಿಕೆಟರ್ಸ್ ವಿರುದ್ಧದ ಫೈನಲ್ ಪಂದ್ಯದಲ್ಲಿ 22 ರನ್‌ಗಳ ಗೆಲುವು ಸಾಧಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತು.
ಸಿ ಸ್ಟಾರ್ ರನ್ನರ್ ಅಪ್ ಆಯಿತು. ಬಿ ರೆಬೆಲ್ಸ್ 3ನೇ ಸ್ಥಾನಕ್ಕೆ ತೃಪ್ತಿಪಟ್ಟಿತು.
ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಪತ್ರಿಕಾ ದಿನಾಚರಣೆ ಅಂಗವಾಗಿ ವರದಿಗಾರರ ಕೂಟದಿಂದ ಭಾನುವಾರ ಆಯೋಜಿಸಿದ್ದ ಫೈನಲ್ ಹಣಾಹಣಿಯಲ್ಲಿ ಮೊದಲು ಬ್ಯಾಟ್ ಮಾಡಿದ ಅವೆಂಜರ್ಸ್ ಸಿದ್ದಯ್ಯ ಹಿರೇಮಠ್ (33) ಬ್ಯಾಟಿಂಗ್‌ನಿಂದ 5 ಓವರ್‌ಗಳಲ್ಲಿ 63 ರನ್‌ಗಳ ಮೊತ್ತ ಕಲೆಹಾಕಿತು.
ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಸಿ ಸ್ಟಾರ್ ಕ್ರಿಕೆಟರ್ಸ್ ತಂಡ ನಿಗದಿತ 5 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 41 ರನ್‌ಗಳಿಸಲಷ್ಟೇ ಸಾಧ್ಯವಾಯಿತು.
ಇದಕ್ಕೂ ಮುನ್ನ ಮಳೆಯಿಂದ ಮುಂದೂಡಿದ್ದ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಸಿ ಸ್ಟಾರ್ ತಂಡ, ಅವೆಂಜರ್ಸ್ ವಿರುದ್ಧ 10 ವಿಕೆಟ್‌ಗಳ ಗೆಲುವು ಸಾಧಿಸಿ ಅಜೇಯವಾಗಿ ಫೈನಲ್‌ಗೇರಿತ್ತು.
ಮೊದಲು ಬ್ಯಾಟ್ ಮಾಡಿದ್ದ ಅವೆಂಜರ್ಸ್ 5 ಓವರಲ್ಲಿ 18 ರನ್‌ಗಳಿಸಿತ್ತು. ಸಿ ಸ್ಟಾರ್ ಕ್ರಿಕೆಟರ್ಸ್ 2.4 ಓವರಲ್ಲಿ 19 ರನ್‌ಗಳಿಸಿ ಜಯದ ನಗೆ ಬೀರಿತ್ತು.
ಬಿ ರೆಬೆಲ್ಸ್‌ಗೆ ಗೆಲುವು: 3ನೇ ಸ್ಥಾನಕ್ಕೆ ನಡೆದ ಪೈಪೋಟಿಯಲ್ಲಿ ಬಿ ರೆಬೆಲ್ಸ್ ತಂಡ, ಡೈನಾಮಿಕ್ ತಂಡದ ವಿರುದ್ಧ ಗೆದ್ದು 3ನೇ ಸ್ಥಾನ ಗಳಿಸಿತು.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಬಿ ರೆಬೆಲ್ಸ್ 5 ಓವರಲ್ಲಿ 44 ರನ್ ಗಳಿಸಿತು. 45 ರನ್‌ಗಳ ಗುರಿ ಬೆನ್ನಟ್ಟಿದ ಡೈನಾಮಿಕ್ ತಂಡ 42 ರನ್‌ಗಳಿಸಿ ಸೋಲೊಪ್ಪಿಕೊಂಡಿತು.
ಪೊಲೀಸ್ ತಂಡಕ್ಕೆ ರೋಚಕ ಜಯ: ಜಿಲ್ಲಾ ಪತ್ರಕರ್ತರ ತಂಡ ಹಾಗೂ ಪೊಲೀಸ್ ತಂಡದ ನಡುವೆ ನಡೆದ ಅಫೀಶಿಯಲ್ ಕಪ್ ಪಂದ್ಯದಲ್ಲಿ ಪೊಲೀಸ್ ತಂಡ, ಕೊನೆಯ ಎಸೆತದಲ್ಲಿ ರೋಚಕ ಗೆಲುವು ಸಾಧಿಸಿತು.
ಮೊದಲು ಬ್ಯಾಟ್ ಮಾಡಿದ ಪತ್ರಕರ್ತರ ತಂಡ 6 ಓವರಲ್ಲಿ 6 ವಿಕೆಟ್ ಕಳೆದುಕೊಂಡು 46 ರನ್‌ಗಳಿಸಿತು. ಅಂತಿಮ ಎಸೆತದವರೆಗೂ ನಡೆದ ಪಂದ್ಯದಲ್ಲಿ ಪೊಲೀಸ್ ತಂಡ ಜಯದ ನಗೆ ಬೀರಿತು.