ಜಿಲ್ಲೆ

ಕ್ರಿಕೆಟ್: ದಿ ಎಲೈಟ್ ಸಿಸಿ ಸ್ಕ್ವಾಡ್ ಬಿ ತಂಡ ಚಾಂಪಿಯನ್

ಆದರ್ಶ್. ಎಂ.ಕೆ.

ಮಡಿಕೇರಿ: ಕೊಡಗು ಗೌಡ ಯುವ ವೇದಿಕೆ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಮೈದಾನದಲ್ಲಿ ನಡೆಯುತ್ತಿರುವ ಜಿಪಿಎಲ್(ಗೌಡ ಲೆದರ್ ಬಾಲ್ ಪ್ರೀಮಿಯರ್ ಲೀಗ್)ನಲ್ಲಿ ನಡೆದ ಪಂದ್ಯಾಟದಲ್ಲಿ ದಿ ಎಲೈಟ್ ಸಿಸಿ ಸ್ಕ್ವಾಡ್ ಬಿ ತಂಡ ಚಾಂಪಿಯನ್ ತಂಡವಾಗಿ ಹೊರಹೊಮ್ಮಿತ್ತು.


ಭಾನುವಾರ ನಡೆದ ಫೈನಲ್ ಪಂದ್ಯಾಟದಲ್ಲಿ ದಿ ಎಲೈಟ್ ತಂಡದ ವಿರುದ್ಧ ದಿ ಎಲೈಟ್ ಕ್ರಿಕೆಟ್ ಸ್ಕ್ವಾಡ್-ಬಿ ತಂಡ ೧೦ ರನ್‌ಗಳ ಗೆಲುವು ಸಾಧಿಸಿತು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಸ್ಕ್ವಾಡ್-ಬಿ ತಂಡ ನಿಗದಿತ ೧೦ ಓವರ್‌ಗಳಲ್ಲಿ ೮೩ ರನ್ ಗಳಿಸಿತು. ತಂಡದ ಪರ ಮನ್ವಿತ್ ಕಲ್ಲುಗದ್ದೆ ೮ ಎಸೆತಗಳಲ್ಲಿ ೧೯ ರನ್ ಗಳಿಸಿದರು. ಆಕರ್ಷ್ ೧೮ ರನ್ ಗಳಿಸಿದರು. ಎಲೈಟಡ್ ತಂಡದ ಪರ ಧಿನೇಂದ್ರ ಅಣ್ಣಚಿರ ಮತ್ತು ಕಾರ್ತಿಕ್ ತಲಾ ಎರಡು ವಿಕೆಟ್ ಪಡೆದರು.


ಗುರಿ ಬೆನ್ನಟ್ಟಿದ ಎಲೈಟ್ ತಂಡ ನಿಗದಿತ ೧೦ ಓವರ್‌ಗಳಲ್ಲಿ ೭ ವಿಕೆಟ್ ನಷ್ಟಕ್ಕೆ ೭೩ ರನ್ ಗಳಿಸಿ ೧೦ ರನ್ ಗಳಿಂದ ಸೋಲು ಕಂಡಿತು. ತಂಡದ ಪರ ಹೊಸೂರ್ ಹಿತಕೃತ್ ಅಶೋಕ್ ಅತ್ಯಧಿಕ ೨೫ ರನ್‌ಗಳಿಸಿದರು. ಸ್ಕ್ವಾಡ್-ಬಿ ತಂಡದ ಪರ ಮನ್ವಿತ್ ಕಲ್ಲುಗದ್ದೆ ಮತ್ತು ನಯನ್ ಚೆರಿಯಮನೆ ತಲಾ ಎರಡು ವಿಕೆಟ್ ಹಾಗೂ ಎಡಿಕೇರಿ ನೂತನ್ ಒಂದು ವಿಕೆಟ್ ಪಡೆದು ಗೆಲುವಿನ ರುವಾರಿಯಾದರು. ಒಂದೇ ಪ್ರಾಂಚೈಸಿಯ ಎರಡೂ ತಂಡಗಳು ಫೈನಲ್ ಪ್ರವೇಶಿಸಿ ಗಮನ ಸೆಳೆದವು. ಹಾಗೂ ಗೌಡ ಪ್ರೀಮಿಯರ್ ಲೀಗ್ ನಲ್ಲಿ ಎಲೈಟ್ ತಂಡ ಸತತ ಎರಡನೇ ಬಾರಿಗೆ ಚಾಂಪಿಯನ್ ಆಗಿ ಮೂಡಿಬಂದಿತು.


ಇದಕ್ಕೂ ಮೊದಲು ನಡೆದ ಎಲಿಮಿನೇಟರ್ ಪಂದ್ಯಾಟದಲ್ಲಿ ಎಲೈಟ್ ಕ್ರಿಕೆಟ್ ಕ್ಲಬ್ ತಂಡ ಕೂರ್ಗ್ ವಾರಿಯರ್ಸ್ ತಂಡವನ್ನು ೭ ವಿಕೆಟ್‌ಗಳಿಂದ ಮಣಿಸಿತು. ಇದರೊಂದಿಗೆ ಜಿಪಿಎಲ್ ಸೀಸನ್-೨ರ ೨ನೇ ತಂಡವಾಗಿ ಫೈನಲ್ ಪ್ರವೇಶಿಸಿತು.


ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಕೂರ್ಗ್ ವಾರಿಯರ್ಸ್ ತಂಡ ನಿಗದಿತ ೧೦ ಓವರ್‌ಗಳಲ್ಲಿ ೫ ವಿಕೆಟ್ ನಷ್ಟಕ್ಕೆ ೧೧೬ ರನ್ ಗಳಿಸಿತು. ತಂಡದ ಪರ ಅನಿಲ್ ಕುಡೇಕಲ್ಲು ೨೯ ಎಸೆತಗಳಲ್ಲಿ ೬೬ ರನ್ ಗಳಿಸಿದರು. ೪ ಬೌಂಡರಿ ೬ ಸಿಕ್ಸರ್‌ಗಳು ಇವರ ಇನ್ನಿಂಗ್ಸ್‌ನಲ್ಲಿ ಮೂಡಿಬಂದವು. ಎಲೈಟ್ ತಂಡ ಪರ ಕಾರ್ತಿಕ್, ಶರತ್ ಚೊಕ್ಕಾಡಿ, ಧಿನೇಂದ್ರ ಅಣ್ಣಚಿರ, ನಿತಿನ್ ಕುಮಾರ್ ತಲಾ ಒಂದು ವಿಕೆಟ್ ಪಡೆದರು.


ಗುರಿ ಬೆನ್ನಟ್ಟಿದ ಎಲೈಟ್ ತಂಡ ೯ ಓವರ್‌ಗಳಲ್ಲಿ ೩ ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ತಂಡದ ಪರ ಲೋಕೇಶ್ ೨೮ ಎಸೆತಗಳಲ್ಲಿ ಅಜೇಯ ೬೭ ರನ್ ಗಳಿಸಿ ತಂಡದ ಗೆಲುವಿನ ರುವಾರಿಯಾದರು. ಲೋಕೇಶ್ ಇನ್ನಿಂಗ್ಸ್‌ನಲ್ಲಿ ೬ ಬೌಂಡರಿ ಮತ್ತು ೪ ಸಿಕ್ಸರ್ ಮೂಡಿಬಂದವು. ಕೂರ್ಗ್ ವಾರಿಯರ್ಸ್ ಪರ ಅನಿಲ್ ಕುಡೇಕಲ್ಲು ಮತ್ತು ಕುಜಲ್ ಕಾರ್ಯಪ್ಪ ತಲಾ ಒಂದು ವಿಕೆಟ್ ಪಡೆದರು. ಇದರೊಂದಿಗೆ ಎಲೈಟ್ ತಂಡ ಫೈನಲ್ ಪ್ರವೇಶ ಪಡೆಯಿತು.


ವೈಯುಕ್ತಿಕ ಪ್ರಶಸ್ತಿ ವಿವರ: ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ದಿ ಎಲೈಟ್ ಸ್ಕ್ವಾಡ್ ಬಿ ತಂಡದ ರಾಹುಲ್ ಅತ್ರಮಜಲು, ಬೆಸ್ಟ್ ಬ್ಯಾಟ್ಸ್‌ಮನ್ ಪ್ರಶಸ್ತಿ ಕೂರ್ಗ್ ವಾರಿಯರ್ಸ್ ತಂಡ ಅನಿಲ್ ಕುಡೆಕಲ್, ಬೆಸ್ಟ್ ಬೌಲರ್ ದಿ ಪ್ಲಾಂಟರ್ಸ್ ಕ್ಲಬ್ ಬಿಳಿಗೇರಿ ತಂಡದ ತುಷಾರ್ ಮೂವನ, ಬೆಸ್ಟ್ ವಿಕೇಟ್ ಕೀಪರ್ ದಿ ಪ್ಲಾಂಟರ್ಸ್ ಕ್ಲಬ್ ಬಿಳಿಗೇರಿ ತಂಡದ ಜಶ್ವಂತ್ ಗುತ್ತಿಮುಂಡನ, ಬೆಸ್ಟ್ ಎಮರ್ಜಿಂಗ್ ಪ್ಲೇಯರ್ ಪ್ರಶಸ್ತಿಯನ್ನು ದಿ ಎಲೈಟ್ ಕ್ರಿಕೆಟ್ ಕ್ಲಬ್‌ನ ಎಡಿಕೇರಿ ಗಣಿತ್ ಪಡೆದುಕೊಂಡರು.


ವಿಜೇತ ತಂಡಕ್ಕೆ ಪ್ರಥಮ ಬಹುಮಾನ ಪಡೆದ ತಂಡಕ್ಕೆ ೧,೧೧,೧೧೧ ರೂ ನಗದು, ದ್ವಿತೀತ ಬಹುಮಾನ ಪಡೆದ ತಂಡಕ್ಕೆ ೭೭,೭೭೭, ತೃತೀಯ ಬಹುಮಾನ ಪಡೆದ ತಂಡಕ್ಕೆ ೪೪,೪೪೪ ನಗದು ಹಾಗೂ ಆಕರ್ಷಕ ಟ್ರೋಪಿ ನೀಡಿ ಗೌರವಿಸಲಾಯಿತು. ಸಮಾರೋಪ ಸಮಾರಂಭದಲ್ಲಿ ಗೌಡ ಯುವ ವೇದಿಕೆಯ ಪ್ರಮುಖರು, ಗೌಡ ಸಮಾಜದ ಪ್ರಮುಖರು ಪಾಲ್ಗೊಂಡಿದ್ದರು.